ಸಾವೆಗೆ 5 ಸಾವಿರ ಬೆಂಬಲ ಬೆಲೆ ನಿಗದಿಗೆ ಪ್ರಸ್ತಾವ

KannadaprabhaNewsNetwork | Updated : Nov 01 2024, 12:09 AM IST

ಸಾರಾಂಶ

ಹೊಸದುರ್ಗ: ಸಾವೆ ಬೆಳೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಂಬಲ ಬೆಲೆ ನೀಡಲು ಮುಂದಾಗಿದ್ದು, 5 ಸಾವಿರ ಆಸುಪಾಸಿನ ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.

ಹೊಸದುರ್ಗ: ಸಾವೆ ಬೆಳೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಂಬಲ ಬೆಲೆ ನೀಡಲು ಮುಂದಾಗಿದ್ದು, 5 ಸಾವಿರ ಆಸುಪಾಸಿನ ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ಸಿರಿಧಾನ್ಯ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಪಡಿಸುವ ಬಗ್ಗೆ ನಡೆದ ಸಿರಿಧಾನ್ಯ ಬೆಳೆಗಾರರೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲಾಭ ನಷ್ಟ ನೋಡಿದರೆ ಯಾವ ಬೆಳೆಯನ್ನು ಬೆಳೆಯಲು ಸಾಧ್ಯವಿಲ್ಲ. ಎಷ್ಟೇ ಬೆಲೆ ನಿಗದಿ ಮಾಡಿದರೂ ಪ್ರಕೃತಿ ಸಹಕರಿಸದಿದ್ದರೆ ನಷ್ಟವೇ ಹೊರತು ಲಾಭವಿಲ್ಲ ಎಂದರು.

ಕಳೆದ ಅವಧಿಯ ಸಿದ್ದರಾಮಯ್ಯ ಸರ್ಕಾರದಲ್ಲಿ ಅಂದಿನ ಕೃಷಿ ಸಚಿವರಾಗಿದ್ದ ಕೃಷ್ಣ ಬೈರೇಗೌಡರು ತಾಲೂಕಿಗೆ ಆಗಮಿಸಿದಾಗ ಸಾವೆ ಬೆಳೆಯ ಬಗ್ಗೆ ಮಾಹಿತಿ ಪಡೆದು ನಶಿಸಿಹೊಗುತ್ತಿದ್ದ ಸಾವೆ ಬೆಳೆಯ ಅಭಿವೃದ್ಧಿಗೆ ಎಕೆರೆಗೆ 10 ಸಾವಿರ ರು. ಪ್ರೋತ್ಸಾಹ ಧನ ಘೋಷಣೆ ಮಾಡಿದ್ದರ ಫಲವಾಗಿ 3 ಸಾವಿರ ಹೆಕ್ಟೇರ್‌ ನಿಂದ ಇಂದು 26 ಸಾವಿರ ಹೆಕ್ಟೇರ್‌ ಗೆ ವಿಸ್ತಾರಗೊಂಡಿದೆ ಎಂದು ಹೇಳಿದರು.

ಕಳೆದ 3 ವರ್ಷದಿಂದ ಹೊಸದುರ್ಗ ತಾಲೂಕಿನ ಸಾವೆ ಬೆಳೆಗಾರರಿಗೆ 40 ಕೋಟಿ ರು. ಹಣ ಪ್ರೋತ್ಸಾಹದ ರೂಪದಲ್ಲಿ ಬಂದಿದೆಯಾದರೂ, ರೈತರು ಕಷ್ಟ ಪಟ್ಟು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೆ ರೈತರು ಕೃಷಿಯಿಂದ ವಿಮುಖರಾಗುವ ಸನ್ನಿವೇಶ ಬಂದೊದಗಿದೆ. ಈ ಹಿನ್ನಲೆಯಲ್ಲಿ ಇಂದು ರೈತರು, ವರ್ತಕರು ಹಾಗೂ ಆಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದೀರಾ ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಮತ್ತೊಂದು ಸಭೆ ನಡೆಸಿ ಅಂತಿಮವಾಗಿ ದರ ನಿಗದಿ ಮಾಡಿ ಸರ್ಕಾರಕ್ಕೆ ಶೀಘ್ರದಲ್ಲಿಯೇ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್‌ ಮಾತನಾಡಿ, ಕಿರು ಧಾನ್ಯವಾಗಿದ್ದ ಸಾವೆ ಬೆಳೆಗೆ ಇಂದು ಸಿರಿಧಾನ್ಯವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಿದೆ. ಆಹಾರ ಮತ್ತು ನಾಗರಿಕ ಇಲಾಖೆಯ ಮೂಲಕ ಸಾವೆ ಖರೀದಿಸಲು ಸರ್ಕಾರ ತೀರ್ಮಾನ ಮಾಡಿದ್ದರ ಹಿನ್ನಲೆಯಲ್ಲಿ ಬೆಂಬಲ ಬೆಲೆ ನಿಗದಿಗಾಗಿ ಚರ್ಚಿಸಲು ಈ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್‌.ಈಶ ಪ್ರಾಸ್ತಾವಿಕವಾಗಿ ಮಾತನಾಡಿ, ಹೊಸದುರ್ಗ ತಾಲೂಕಿನ ಶ್ರೀರಾಂಪುರ, ಮತ್ತೋಡು ಹಾಗೂ ಕಸಬಾ ಹೋಬಳಿಯಲ್ಲಿ ಅತಿ ಹೆಚ್ಚು ಸಿರಿಧಾನ್ಯ ಬೆಳೆಯಲಾಗುತ್ತಿದೆ. ಈ ಬೆಳೆಯ ವಿಸ್ತೀರ್ಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಈ ವರ್ಷ 36300 ರೈತರಿಗೆ 33.94 ಕೋಟಿ ರು. ಪ್ರೋತ್ಸಾಹ ಧನ ಡಿಬಿಟಿ ಮೂಲಕ ರೈತರ ಖಾತೆಗಳಿಗೆ ಜಮೆಯಾಗಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಸಭೆಯಲ್ಲಿ ರೈತರು ತಮ್ಮ ಕೃಷಿಯಲ್ಲಿ ತಗುಲಬಹುದಾದ ಖರ್ಚುಗಳ ಬಗ್ಗೆ ಮಾಹಿತಿ ಹಂಚಿಕೊಂಡರು.

ಕೃಷಿ ಇಲಾಖೆಯ ಡಿ.ಡಿ.ಶಿವಕುಮಾರ್‌, ಕೃಷಿಕ ಸಮಾಜದ ಅಧ್ಯಕ್ಷ ಕೆ.ಬಿ.ಚಂದ್ರಶೇಖರಯ್ಯ, ಎಪಿಎಂಸಿ ಕಾರ್ಯದರ್ಶಿ ಗೌತಮ್ಮ, ತಾಪಂ ಇಒ ಸುನಿಲ್‌ಕುಮಾರ್‌, ವರ್ತಕರು, ಎಫ್‌ಪಿಓಗಳ ಮುಖ್ಯಸ್ಥರುಗಳು ಭಾಗವಹಿಸಿದ್ದರು.ವ್ಯವಸಾಯ ಎಂದರೆ ಮನೆಮಂದಿಯೆಲ್ಲಾ ಸಾಯ ಎನ್ನುವ ನಾಣ್ನುಡಿಯಂತೆ ಇಂದು ಕೃಷಿ ಲಾಭದಾಯಕವಲ್ಲದ ಕ್ಷೇತ್ರವಾಗಿದೆ. ಹಾಗೆಂದು ಕೃಷಿಯಿಂದ ವಿಮುಖರಾದರೆ ಮುಂದಿನ ದಿನಗಳು ಅನ್ನದ ಹಾಹಾಕಾರ ಸೃಷ್ಟಿಯಾಗುತ್ತದೆ. ಸಾವೆಯಂತಹ ಸಿರಿಧಾನ್ಯಗಳನ್ನು ಬೆಳೆಯುವ ರೈತರು ಮೊದಲು ತಾವು ಬಳಸಬೇಕು ನಂತರ ಮಾರಾಟ ಮಾಡಬೇಕು. ಆಗ ಮಾತ್ರ ರೈತ ಆರೋಗ್ಯವಂತನಾಗಲು ಸಾಧ್ಯ. ಇಂದಿನ ಖರ್ಚು ವೆಚ್ಚಗಳನ್ನು ಪರಿಶೀಲಿಸಿ ಕನಿಷ್ಠ 5-6 ಸಾವಿರ ಬೆಂಬಲ ಬೆಲೆಯನ್ನು ಸರ್ಕಾರ ನಿಗದಿ ಮಾಡಬೇಕು

- ಸೋಮೇನಹಳ್ಳಿ ಸ್ವಾಮಿ, ಕೃಷಿಕ.

Share this article