50% discount on payment of fines by the Transport Department: Justice Shubh
ಮಡಿಕೇರಿ: ಸಾರಿಗೆ ಇಲಾಖೆಯ ದಂಡ ಬಾಕಿ ಹಾಗೂ ಪೊಲೀಸ್ ಇಲಾಖೆಯ ಇ-ಚಲನ್ ಮೂಲಕ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ರಾಜ್ಯ ಸರಕಾರ ಶೇ 50 ರಷ್ಟು ರಿಯಾಯಿತಿ ಘೋಷಿಸಿದ್ದು, ಜು.10 ರ ವರೆಗೆ ನಡೆಯಲಿರುವ ಅಭಿಯಾನವನ್ನು ವಾಹನ ಸವಾರರು ಸದುಪಯೋಗ ಪಡಿಸಿಕೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕೊಡಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಹೇಳಿದರು.ನಗರದ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ 1991 ರಿಂದ 2027ರ ಅವಧಿಯಲ್ಲಿ ದಾಖಲಾಗಿ ಪಾವತಿಗೆ ಬಾಕಿ ಇರುವ ಪ್ರಕರಣಗಳ ಮೊತ್ತದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಿ ಪ್ರಕರಣ ಇತ್ಯರ್ಥ ಪಡಿಸುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಟಕ ಸರ್ಕಾರವು ಸಾರಿಗೆ ಇಲಾಖೆ ಹಾಗೂ ಸಂಚಾರ ಪೊಲೀಸ್ ಇಲಾಖೆಯಲ್ಲಿ ಬಾಕಿ ಇರುವ ವಾಹನಗಳ ದಂಡದ ಮೊತ್ತದ ಮೇಲೆ ಶೇ.50 ರಷ್ಟು ರಿಯಾಯಿತಿ ಘೋಷಿಸಿದೆ. ವಾಹನ ಸವಾರರು ತಮ್ಮ ಮೇಲಿರುವ ದಂಡದ ಹೊರೆಯನ್ನು ಅರ್ಧದಷ್ಟು ಕಡಿಮೆ ಮಾಡಿಕೊಳ್ಳಲು ಜೂ.21 ರಿಂದ ಜು.10ರ ವರೆಗೆ ಅವಕಾಶ ಕಲ್ಪಿಸಿದೆ. ಹಳೆಯ ಪ್ರಕರಣವನ್ನು ವಿಲೇವಾರಿ ಮಾಡುವ ಉದ್ದೇಶದಿಂದ ಸರ್ಕಾರವೇ ರಿಯಾಯಿತಿ ನೀಡಿದ್ದು, ಯಾರು ಕೂಡ ಭಯ ಪಡದೆ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.ಸಾರಿಗೆ ಮೋಟಾರ್ ನಿರೀಕ್ಷರಾದ ಮೋಹನ್ ಕುಮಾರ್ ಅವರು ಮಾತನಾಡಿ, 1991 ರಿದ 2022ರ ಅವಧಿಯಲ್ಲಿ ಮೋಟಾರು ವಾಹನ ಕಾಯ್ದೆ ಉಲ್ಲಂಘನೆಗಾಗಿ ಸಾರಿಗೆ ಇಲಾಖೆಯಿಂದ ದಾಖಲಾಗಿರುವ ವಾಹನ ಚಾಲನ ಪರವಾನಗಿ ಇನ್ಸೂರೆನ್ಸ್, ಎಮಿಷನ್ ಟೆಸ್ಟ್ ಮತ್ತಿತರ ದಾಖಲಾತಿ ಇಲ್ಲದೆ ಪ್ರಕರಣ ದಾಖಲಿಸಿಕೊಂಡವರು ಸುಲಭವಾಗಿ ಪ್ರಕರಣವನ್ನು ಇತ್ಯರ್ಥ ಪಡಿಸಿಕೊಳ್ಳಬಹುದೆಂದರು.
ಮೇ 2026ಕ್ಕಿಂತ ಉಚಿತವಾಗಿ ಪೊಲೀಸ್ ಇಲಾಖೆಯಿಂದ ದಾಖಲಾದ ಎಲ್ಲಾ ಬಾಕಿ ಟ್ರಾಫಿಕ್ ಇ-ಚಲನ್ ದಂಡಗಳಿಗೂ ಶೇ.50 ರಷ್ಟು ರಿಯಾಯಿತಿ ದೊರೆಯಲಿದೆ ಎಂದರು.
ಸಾರಿಗೆ ಇಲಾಖೆಯ ಅಧೀಕ್ಷರಾದ ಮೋಹನ್, ಸಲೀಮಾ, ಪ್ರಧಾನ ಕಾನೂನು ನೆರವು ಅಭಿರಕ್ಷಕರಾದ ಮೈಮೂನ, ವಕೀಲರು ಹಾಗೂ ಸಿಬ್ಬಂದಿ ಇದ್ದರು. ಆಡಳಿತ ಸಹಾಯಕರಾದ ಜಯಪ್ಪ ಸ್ವಾಗತಿಸಿ, ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.