ಟಿಬಿ ಡ್ಯಾಂನ 32 ಕ್ರಸ್ಟ್‌ಗೇಟ್‌ ಶೇಕರ 50ರಷ್ಟು ಸವೆತ !

KannadaprabhaNewsNetwork |  
Published : May 30, 2025, 12:10 AM ISTUpdated : May 30, 2025, 10:42 AM IST
TB Dam

ಸಾರಾಂಶ

ಕೇಂದ್ರ ಜಲ ಆಯೋಗದ ತಜ್ಞರು ತುಂಗಭದ್ರಾ ಜಲಾಶಯದ ಭದ್ರತೆ ಪರಿಶೀಲಿಸಿದ ವೇಳೆ ಜಲಾಶಯದ 32 ಕ್ರಸ್ಟ್‌ಗೇಟ್‌ಗಳು ಶೇ.40ರಿಂದ 50ರಷ್ಟು ಸವೆದಿವೆ.

ಸೋಮರಡ್ಡಿ ಅಳವಂಡಿ

 ಕೊಪ್ಪಳ : ಕೇಂದ್ರ ಜಲ ಆಯೋಗದ ತಜ್ಞರು ತುಂಗಭದ್ರಾ ಜಲಾಶಯದ ಭದ್ರತೆ ಪರಿಶೀಲಿಸಿದ ವೇಳೆ ಜಲಾಶಯದ 32 ಕ್ರಸ್ಟ್‌ಗೇಟ್‌ಗಳು ಶೇ.40ರಿಂದ 50ರಷ್ಟು ಸವೆದಿವೆ. ಜಲಾಶಯ ಭರ್ತಿಯಾದರೆ ತಡೆದುಕೊಳ್ಳುವ ಸಾಮರ್ಥ್ಯವಿಲ್ಲ ಎಂಬ ವರದಿ ನೀಡಿದ್ದಾರೆ. ಇದು ರೈತರಲ್ಲಿ ಆತಂಕ ಹೆಚ್ಚಿಸಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಮುರಿದಿದ್ದ 19ನೇ ಕ್ರಸ್ಟ್‌ಗೇಟ್ ಅಳವಡಿಸುವ ನೇತೃತ್ವ ವಹಿಸಿದ್ದ ಜಲತಜ್ಞ ಕನ್ನಯ್ಯ ನಾಯ್ಡು ಸಹ ಪ್ರಸಕ್ತ ವರ್ಷ ಜಲಾಶಯ ಭರ್ತಿ ಮಾಡದೆ, ಕೇವಲ ಕುಡಿಯುವ ನೀರು ಹಾಗೂ ಒಂದು ಬೆಳೆಗೆ ಮಾತ್ರ ನೀರು ಸಂಗ್ರಹಿಸಬೇಕು ಎಂದು ಸಲಹೆ ನೀಡಿದ್ದಾರೆ. ಹೀಗಾಗಿ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಆತಂಕ ಮನೆ ಮಾಡಿದೆ. ಕೇಂದ್ರ ಜಲ ಆಯೋಗದ ತಜ್ಞರ ವರದಿ ಮತ್ತು ಕನ್ನಯ್ಯ ನಾಯ್ಡು ಅವರ ಸಲಹೆ ಆಧರಿಸಿ ತುಂಗಭದ್ರಾ ಬೋರ್ಡ್ ಈ ವರ್ಷ ತುಂಗಭದ್ರಾ ಜಲಾಶಯದಲ್ಲಿ ಎಷ್ಟು ನೀರು ಸಂಗ್ರಹಿಸಬೇಕು ಎನ್ನುವ ತೀರ್ಮಾನ ತುರ್ತಾಗಿ ಮಾಡಬೇಕಾಗಿದೆ ಹಾಗೂ ಈ ಕುರಿತು ರೈತರಿಗೆ ಸೂಕ್ತ ಮಾಹಿತಿ ನೀಡಬೇಕಾಗಿದೆ.

ಏನೆನ್ನುತ್ತಾರೆ ತಜ್ಞರು?

ಕೇಂದ್ರ ಜಲ ಆಯೋಗದ ನಿವೃತ್ತ ಅಧ್ಯಕ್ಷ ಎ.ಕೆ. ಬಜಾಜ್ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ, ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದೆ. ಜಲಾಶಯದಲ್ಲಿ ಸಾಧ್ಯವಾದಷ್ಟು ಕಡಿಮೆ ನೀರು ಸಂಗ್ರಹಿಸುವುದು ಉತ್ತಮ. ಜಲಾಶಯಕ್ಕೆ ಈಗಾಗಲೇ 75 ವರ್ಷ ಆಗಿರುವ ಹಿನ್ನೆಲೆಯಲ್ಲಿ 32 ಕ್ರಸ್ಟ್‌ಗೇಟ್‌ಗಳು ಸಹ ಬಹುತೇಕ ಶೇ. 40ರಿಂದ 50ರಷ್ಟು ಸವೆದಿವೆ. ಹೀಗಾಗಿ, ಎಲ್ಲ ಗೇಟ್‌ಗಳನ್ನು ಬದಲಾಯಿಸಬೇಕು ಎಂದು ವರದಿ ನೀಡಿದೆ.

ಹರಿದು ಬಂದ ನೀರು:

ಈ ಮಧ್ಯೆ, ಪೂರ್ವ ಮುಂಗಾರು ಅತ್ಯುತ್ತಮವಾಗಿದ್ದರಿಂದ ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಮೇ ತಿಂಗಳ ಅಂತ್ಯಕ್ಕೆ ಜಲಾಶಯಕ್ಕೆ ಬರೋಬ್ಬರಿ 12ರಿಂದ 13 ಟಿಎಂಸಿ ನೀರು ಸಂಗ್ರಹವಾಗಿದೆ. ಜೂನ್ ತಿಂಗಳಲ್ಲಿಯೇ ಜಲಾಶಯ ಭರ್ತಿಯಾಗುವಷ್ಟು ನೀರು ಹರಿವು ಬರುವ ಸಾಧ್ಯತೆ ಇದೆ.

ಇದನ್ನೇ ಉಲ್ಲೇಖಿಸಿ ಕನ್ನಯ್ಯ ನಾಯ್ಡು ಅವರು ಸಹ ಒಂದು ಬೆಳೆಗೆ ಮತ್ತು ಕುಡಿಯುವ ನೀರಿಗಾಗಿ ಮಾತ್ರ ನೀರು ಸಂಗ್ರಹಿಸಿಟ್ಟುಕೊಳ್ಳುವುದು ಉತ್ತಮ. 12ರಿಂದ 15ಅಡಿ ಮಾತ್ರ ನೀರು ಶೇಖರಿಸಬೇಕು ಎಂದಿದ್ದಾರೆ. ಎನ್ನುತ್ತಾರೆ ಹವಾಮಾನ ಇಲಾಖೆಯ ಅಧಿಕಾರಿಗಳು. ಹೀಗಾಗಿ, ಬರುವ ನೀರು ಬಿಡಬೇಕೋ ಅಥವಾ ಸಂಗ್ರಹಿಸಬೇಕೋ ಎನ್ನುವುದು ಸದ್ಯದ ಯಕ್ಷಪ್ರಶ್ನೆಯಾಗಿದೆ. ಕೇಂದ್ರ ಜಲ ಆಯೋಗದ ವರದಿ ಮತ್ತು ಜಲತಜ್ಞರ ಮಾರ್ಗದರ್ಶನದಂತೆ ಈಗ ತುರ್ತಾಗಿ ತುಂಗಭದ್ರಾ ಬೋರ್ಡ್ ಈ ಕುರಿತು ನಿರ್ಣಯ ಕೈಗೊಳ್ಳಬೇಕಾಗಿದೆ. ಇದು, ತುಂಗಭದ್ರಾ ಜಲಾಶಯ ವ್ಯಾಪ್ತಿಯ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಯ ರೈತರು, ಆಂಧ್ರ, ತೆಲಂಗಾಣದ ರೈತರು ಆತಂಕದಿಂದ ಇರುವಂತೆ ಮಾಡಿದೆ.

80 ಟಿಎಂಸಿ ಮಾತ್ರ ಸಂಗ್ರಹ:

ಪ್ರಸಕ್ತ ವರ್ಷ ಕೇವಲ 80 ಟಿಎಂಸಿ ನೀರು ಸಂಗ್ರಹಿಸುವ ಕುರಿತು ತುಂಗಭದ್ರಾ ಬೋರ್ಡ್‌ ನಿರ್ಧಾರ ಕೈಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. ಕೇಂದ್ರ ಜಲ ಆಯೋಗದ ವರದಿಯನ್ನು ಕಡೆಗಣಿಸಿ, ನೀರು ಸಂಗ್ರಹಿಸುವುದು ಕಷ್ಟ ಎಂದೇ ಹೇಳಲಾಗುತ್ತದೆ.

ಮುರಿದಿರುವ 19ನೇ ಕ್ರಸ್ಟ್‌ಗೇಟ್‌ಗೆ ತಾತ್ಕಾಲಿಕ ಕ್ರಸ್ಟ್‌ಗೇಟ್ ಅಳವಡಿಸಲಾಗಿದೆ. ಇದೀಗ ಹೊಸ ಗೇಟ್ ಅಳವಡಿಸುವ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಜುಲೈ ಅಂತ್ಯಕ್ಕೆ ಜೋಡಿಸುವ ಸಾಧ್ಯತೆ ಇದೆ.  

ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದ್ದು ಮುರಿದ ಕ್ರಸ್ಟ್‌ಗೇಟ್‌ಗಳನ್ನು ಜುಲೈನಲ್ಲಿ ಅಳವಡಿಸಲಾಗುತ್ತದೆ. ರೈತರು ಯಾವುದೇ ಕಾರಣಕ್ಕೂ ಆತಂಕಪಡಬೇಕಾಗಿಲ್ಲ. ಈ ಕುರಿತು ತುಂಗಭದ್ರಾ ಬೋರ್ಡ್ ಸೂಕ್ತ ನಿರ್ಣಯ ಕೈಗೊಳ್ಳುತ್ತದೆ.

- ರಾಜಶೇಖರ ಹಿಟ್ನಾಳ, ಸಂಸದ.

PREV
Read more Articles on

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್