ಕನ್ನಡಪ್ರಭ ವಾರ್ತೆ ಮೈಸೂರು
ಕೃಷಿಕ್ ಸರ್ವೋದಯ ಫೌಂಡೇಶನ್ ವತಿಯಿಂದ 2023-24ರ ಸಾಲಿನ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ನೆರವೇರಿತು.ಮುಖ್ಯ ಅತಿಥಿಯಾಗಿ ಕೃಷಿಕ್ ಸರ್ವೋದಯ ಫೌಂಡೇಶನ್ ನಗರ ಶಾಖೆ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಎಂ.ಕೆ. ಶಂಕರಲಿಂಗೇಗೌಡ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗಗಳು ನಡೆಸುತ್ತಿರುವ ನಾಗರೀಕ ಸೇವಾ ಪರೀಕ್ಷೆಯ ಪಠ್ಯ ವಿಷಯ ಮತ್ತು ಪರೀಕ್ಷಾ ವಿಧಾನಗಳಲ್ಲಿ ಆಗಿರುವ ಬದಲಾವಣೆಯನ್ನು ನಮ್ಮ ಸಂಸ್ಥೆಯು ಗಮನಿಸಿ ತಜ್ಞರ ಜೊತೆ ಸಮಾಲೋಚನೆ ಮಾಡಿ ಗುಣಾತ್ಮಕ ಬದಲಾವಣೆಗಳನ್ನು ಕಾಲಕಾಲಕ್ಕೆ ನಮ್ಮ ತರಬೇತಿ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಂಡು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿರಂತರವಾಗಿ ತರಬೇತಿಗಳನ್ನು ನೀಡುತ್ತಿದೆ. ಪ್ರತಿ ವರ್ಷ 50 ಲಕ್ಷ ಮೊತ್ತದಷ್ಟು ವಿದ್ಯಾರ್ಥಿ ವೇತನವನ್ನು ಎಲ್ಲ ಶಾಖೆಗಳಿಂದ ಕೊಡಲಾಗುತ್ತಿದೆ.
ಈ ಸಲ ಮೈಸೂರು ಶಾಖೆಯಿಂದ ಮೆಡಿಕಲ್, ಎಂಜಿನಿಯರಿಂಗ್, ಬಿ.ಎ, ಬಿ.ಎಸ್ಸಿ, ಬಿ.ಕಾಂ, ಡಿಪ್ಲೋಮ ಮುಂತಾದ ಪದವಿ ಓದುತ್ತಿರುವ 44 ವಿದ್ಯಾರ್ಥಿಗಳಿಗೆ ಒಟ್ಟು 7.15 ಲಕ್ಷದಷ್ಟು ವೇತನ ನೀಡಲಾಗಿದೆ ಎಂದು ತಿಳಿಸಿದರು.ಕೆಎಸ್ಎಫ್, ಮೈಸೂರು ಕಾರ್ಯದರ್ಶಿ ಎಚ್. ಕಿಶೋರ್ ಚಂದ್ರ ಮಾತನಾಡಿ, 1998ರಲ್ಲಿ ಮೈಸೂರು ಶಾಖೆ ಪ್ರಾರಂಭವಾಗಿ ಇಲ್ಲಿಯವರಗೆ ನೂರಕ್ಕೂ ಹೆಚ್ಚು ತರಬೇತಿ ಕಾರ್ಯಕ್ರಮಗಳು ನಡೆದು, ಸಾವಿರಾರು ವಿದ್ಯಾರ್ಥಿಗಳಿಗೆ ನೆರವಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಪತ್ರಕರ್ತ ಎಸ್.ಟಿ. ರವಿಕುಮಾರ್ ಮಾತನಾಡಿ, ಕೃಷಿಕ್ ಸಂಸ್ಥೆಯಲ್ಲಿ ತರಬೇತಿಗಾಗಿ ಬರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ವಿದ್ಯಾರ್ಥಿನಿಲಯ ಹಾಗೂ ವಿದ್ಯಾರ್ಥಿ ವೇತನದ ಸೌಲಭ್ಯವಿದ್ದು, ಯುಪಿಎಸ್ಸಿ, ಕೆಪಿಎಸ್ಸಿ, ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ನೂರಾರು ಯುವಕ ಯುವತಿಯರು ಇಲ್ಲಿ ತರಬೇತಿ ಪಡೆದು ಸಫಲತೆ ಕಂಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.ಕೆಎಸ್ಎಫ್, ಮೈಸೂರು ಶಾಖೆಯ ಆಡಳಿತ ವರ್ಗದ, ಎನ್. ನಂಜೇಗೌಡ, ಎಚ್. ಕಿಶೋರ್ ಚಂದ್ರ, ಕೆ.ಎಂ. ಚಂದ್ರೇಗೌಡ, ವೈ.ಕೆ. ಕೆಂಚೇಗೌಡ, ಎಸ್.ವಿ ಗೌಡಪ್ಪ, ಡಾ.ಜಿ. ಗೋವಿಂದರಾಜು, ಜ್ಯೋತಿ, ಶ್ರೀಮತಿ ಹಾಗೂ ಸಿಬ್ಬಂದಿ ವರ್ಗ ಇದ್ದರು.