ಕನ್ನಡಪ್ರಭ ವಾರ್ತೆ ವಿಜಯಪುರ
ರಾಣಿ ಚನ್ನಮ್ಮ ನಮ್ಮೆಲ್ಲರ ಆಸ್ಮಿತೆ ಆಗಿದ್ದು, ಮೂರ್ತಿ ಅನಾವರಣಕ್ಕೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗುವುದು. ಅಲ್ಲದೇ, ಕೇಂದ್ರ ಬಸ್ ನಿಲ್ದಾಣಕ್ಕೆ ರಾಣಿ ಚನ್ನಮ್ಮಳ ಹೆಸರು ಇಡಲು ಸಿಎಂ ಹಾಗೂ ಸಾರಿಗೆ ಸಚಿವರಿಗೆ ವಿನಂತಿ ಮಾಡುತ್ತೇನೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ನಿರ್ಮಾಣಗೊಂಡಿರುವ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಚನ್ನಮ್ಮ ಮೂರ್ತಿ ನಿಮ್ಮಿಂದಲೇ ಅನಾವರಣಗೊಳ್ಳಬೇಕು ಎಂದು ವಿ.ಎನ್.ಬಿರಾದಾರ, ಆರ್.ಜಿ.ಯಾರನಾಳ ಹಾಗೂ ಸಮಾಜದ ಮುಖಂಡರು ನಗರದಲ್ಲಿ ಸಚಿವರ ಮನೆಗೆ ಭೇಟಿ ನೀಡಿ ವಿನಂತಿಸಿದರು.
ಮನವಿಗೆ ಸ್ಪಂದಿಸಿ ಮಾತನಾಡಿದ ಸಚಿವರು, ಅಂದು ನಿಮ್ಮೆಲ್ಲರ ಮನವಿಗೆ ಸ್ಪಂದಿಸಿ ನಿವೇಶನ ಒದಗಿಸಿ ಮುಖ್ಯಮಂತ್ರಿಗಳಿಂದ ಭೂಮಿ ಪೂಜೆ ನೆರವೇರಿಸಿದ್ದೇನೆ. ಸಮುದಾಯ ಭವನಕ್ಕೆ ₹3 ಕೋಟಿ ಅನುದಾನ ಒದಗಿಸಿದ್ದೇನೆ. ಇಂದು ಕೂಡ ಏನಾದರೂ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ಕೆ ಅನುದಾನ ಕೊರತೆ ಇದೆಯೇ? ಎಂದು ಮುಖಂಡರನ್ನು ಪ್ರಶ್ನಿಸಿದರು.ಆಗ ಮುಖಂಡ ವಿ.ಎನ್.ಬಿರಾದಾರ ₹25 ಲಕ್ಷ ಅಗತ್ಯವಿದೆ ಎಂದು ಹೇಳಿದಾಗ ಸಚಿವರು, ₹25 ಲಕ್ಷ ಯಾಕೆ? ₹೫೦ ಲಕ್ಷ ಒದಗಿಸುತ್ತೇನೆ ಎಂದು ಹೇಳಿ, ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ದೂರವಾಣಿ ಕರೆ ಮಾಡಿ ಪಾಲಿಕೆ ಮತ್ತು ಪ್ರಾಧಿಕಾರದ ವತಿಯಿಂದ ತಲಾ ₹25 ಲಕ್ಷ ಸೇರಿದಂತೆ ಒಟ್ಟು ₹೫೦ ಲಕ್ಷ ಅನುದಾನ ಒದಗಿಸಬೇಕು. ಅಲ್ಲದೇ, ಕಾಮಗಾರಿ ಪೂರ್ಣಗೊಳಿಸಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದರು.
ಮುಖಂಡರು ಮಾತನಾಡಿ, ಹಲವು ದಶಕಗಳ ಕಾಲ ನಿವೇಶನವಿಲ್ಲದೆ ರಾಣಿ ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ಸ್ಥಗಿತಗೊಂಡಿದ್ದ ಸಂದರ್ಭದಲ್ಲಿ ಸಮಾಜದ ಮುಖಂಡರೆಲ್ಲರೂ ಸೇರಿ ಎಂ.ಬಿ.ಪಾಟೀಲರಲ್ಲಿ ವಿನಂತಿಸಿದಾಗ, ತಾವೇ ಖುದ್ದಾಗಿ ಮುತುವರ್ಜಿವಹಿಸಿ ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗೆ ಕಾರಣರಾಗಿದ್ದೀರಿ. ಅಲ್ಲದೇ, ಹಣಕಾಸಿನ ಅಭಾವದಿಂದ ಅರ್ಧಕ್ಕೆ ನಿಂತಿದ್ದ ರಾಣಿ ಚನ್ನಮ್ಮ ಸಮುದಾಯ ಭವನದ ನಿರ್ಮಾಣ ಕಾರ್ಯವನ್ನೂ ₹3 ಕೋಟಿ ಅನುದಾನ ಒದಗಿಸಿ ಪೂರ್ಣಗೊಳ್ಳಲು ಕಾರಣರಾಗಿದ್ದೀರಿ. ಇಂದು ಮೂರ್ತಿ ಕೂಡ ನಿಮ್ಮಿಂದಲೇ ಪೂರ್ಣಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.ಈ ಸಂದರ್ಭದಲ್ಲಿ ಆರ್.ಜಿ.ಯರನಾಳ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ರಾಜುಗೌಡ ಕುದುರಿ ಸಾಲೋಡಗಿ, ಡಾ.ಗಜಾನನ ಮಹಿಶಾಳೆ, ಬಿ.ಜಿ.ಬಿರಾದಾರ ಮುಂತಾದವರು ಇದ್ದರು.