ಉಡುಪಿ- ಕಾಸರಗೋಡು ವಿದ್ಯುತ್‌ ಲೈನ್‌ ವಿರೋಧಿಸಿ ಬೃಹತ್‌ ರ್‍ಯಾಲಿ

KannadaprabhaNewsNetwork | Published : Feb 21, 2025 12:47 AM

ಸಾರಾಂಶ

ಉಡುಪಿ- ಕಾಸರಗೋಡು 400 ಕೆವಿ ಮತ್ತು ಪಾಲಡ್ಕ- ಕಡಂದಲೆ 400/ 220 ಕೆವಿ ವಿದ್ಯುತ್‌ ಮಾರ್ಗವನ್ನು ವಿರೋಧಿಸಿ ಗುರುವಾರ ಮಂಗಳೂರಿನಲ್ಲಿ ಕೆಥೊಲಿಕ್‌ ಸಭಾ ಮಂಗಳೂರು ಮತ್ತು ಉಡುಪಿ ಪ್ರದೇಶ, ರೈತ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೃಹತ್‌ ಪ್ರತಿಭಟನಾ ರ್‍ಯಾಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಕೆಥೊಲಿಕ್‌ ಸಭಾ ಮಂಗಳೂರು ಮತ್ತು ಉಡುಪಿ ಪ್ರದೇಶ, ರೈತ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಉಡುಪಿ- ಕಾಸರಗೋಡು 400 ಕೆವಿ ಮತ್ತು ಪಾಲಡ್ಕ- ಕಡಂದಲೆ 400/ 220 ಕೆವಿ ವಿದ್ಯುತ್‌ ಮಾರ್ಗವನ್ನು ವಿರೋಧಿಸಿ ಗುರುವಾರ ಮಂಗಳೂರಿನಲ್ಲಿ ಬೃಹತ್‌ ಪ್ರತಿಭಟನಾ ರ್‍ಯಾಲಿ ನಡೆಯಿತು.

ನಗರದ ಅಂಬೇಡ್ಕರ್‌ ವೃತ್ತದಿಂದ ಕ್ಲಾಕ್‌ ಟವರ್‌ವರೆಗೆ ಬೃಹತ್‌ ಪ್ರತಿಭಟನಾ ರ್‍ಯಾಲಿ ಆಯೋಜಿಸಲಾಗಿತ್ತು. ಮಂಗಳೂರು ಕೆಥೋಲಿಕ್‌ ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕ ಅಧಿಕಾರಿ ಫಾ.ಜೆ.ಬಿ. ಸಲ್ದಾನ ಪ್ರತಿಭಟನಾಕಾರರಿಗೆ ಹಸಿರು ಧ್ವಜವನ್ನು ಹಸ್ತಾಂತರಿಸುವ ಮೂಲಕ ರ್‍ಯಾಲಿಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಮಂಗಳೂರು ಕೆಥೋಲಿಕ್‌ ಧರ್ಮಪ್ರಾಂತ್ಯದ ಮತ್ತೋರ್ವ ಸಾರ್ವಜನಿಕ ಸಂಪರ್ಕ ಅಧಿಕಾರಿ ರೋಯ್‌ ಕ್ಯಾಸ್ತಲಿನೊ, ಸರ್ಕಾರಗಳು ಜಾರಿಗೆ ತರುವ ಅಭಿವೃದ್ಧಿ ಯೋಜನೆಗಳಿಗೆ ನಮ್ಮ ವಿರೋಧವಿಲ್ಲ. ಆದರೆ ಉಡುಪಿ-ಕಾಸರಗೋಡು 400/200 ಕೆವಿ ವಿದ್ಯುತ್‌ ಲೈನ್‌ ಸಾಗುವ ಜಮೀನು ಮಾಲೀಕರು, ಕೃಷಿಕರಿಗೆ ಯಾವುದೇ ನೋಟಿಸ್‌ ನೀಡಿಲ್ಲ. ಏಕಾಏಕಿ ಅವರ ಭೂಮಿಯ ಮೇಲೆ ವಿದ್ಯುತ್‌ ಲೈನ್‌ ಎಳೆಯಲಾಗುತ್ತಿದೆ. ಇದನ್ನು ಪ್ರಶ್ನಿಸಿದರೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಯಾವುದೇ ಅನುಮತಿ ಅಗತ್ಯ ಇಲ್ಲ ಎನ್ನುವ ಉಡಾಫೆಯ ಉತ್ತರ ನೀಡುತ್ತಾರೆ. ಕೋರ್ಟ್‌ಗೆ ಹೋದರೂ ನ್ಯಾಯ ಸಿಗುತ್ತಿಲ್ಲ. ಈ ಭಾರೀ ವಿದ್ಯುತ್‌ ಲೈನ್‌ನ ವಿಕಿರಣಗಳಿಂದ 5 ಕಿ.ಮೀ. ಭೂಮಿಯಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಿಲ್ಲ. ಇದರಿಂದ ವಿವಿಧ ರೋಗಗಳಿಗೂ ಕಾರಣವಾಗಲಿದೆ ಎಂದು ಆರೋಪಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮನೋಹರ್‌ ಶೆಟ್ಟಿ ಮಾತನಾಡಿ, ನಾವು ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಕೆಲವು ಅಧಿಕಾರಿಗಳು ಸಣ್ಣ ರೈತರ ಮನೆಗಳಿಗೆ ತೆರಳಿ ದಬ್ಬಾಳಿಕೆ ಮಾಡುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರದ ಯೋಜನೆ ಎಂದು ಹೇಳಿ ಜಮೀನು ಕಬಳಿಸುತ್ತಿದ್ದಾರೆ. ಕಾನೂನು ರಕ್ಷಿಸಬೇಕಾದ ಅಧಿಕಾರಿಗಳೇ ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನು ಕೈಬಿಡುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.

ಕೆಥೊಲಿಕ್‌ ಸಭಾ ಅಧ್ಯಕ್ಷ ಆಲ್ವಿನ್‌ ಡಿಸೋಜ, ಮಾಜಿ ಅಧ್ಯಕ್ಷ ಪಾವ್ಲ್‌ ರೋಲಿ ಡಿಕೋಸ್ತಾ, ನಿಕಟಪೂರ್ವ ಅಧ್ಯಕ್ಷ ಸ್ಟ್ಯಾನಿ ಲೋಬೊ, ಪ್ರಧಾನ ಕಾರ್ಯದರ್ಶಿ ಎ.ಪಿ. ಮೊಂತೇರೊ, ಪ್ರಮುಖರಾದ ಸಂತೋಷ್‌ ಕರ್ನೆಲಿಯೊ, ವಿಕ್ಟರ್‌ ಕಡಂದಲೆ, ಮೊದಲಾದವರು ಇದ್ದರು.

Share this article