- ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಶ್ಲಾಘನೆ । ಮಾನವತೆಯ ಬೆಳಕು-ಜಗಳೂರು ಮಹಮ್ಮದ್ ಇಮಾಂ ಕೃತಿ ಲೋಕಾರ್ಪಣೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆಸಮಾಜದಲ್ಲಿ ಜನರನ್ನು ಮೆಚ್ಚಿಸುವುದು ಯಾವುದೇ ಕಾರಣಕ್ಕೂ ಅಷ್ಟೊಂದು ಸುಲಭವಲ್ಲ. ಆದರೂ, ದೇವರು ಮೆಚ್ಚುವಂತಹ ಕೆಲಸಗಳನ್ನು ಮಾಡಿದಾಗ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ ಎಂಬುದಕ್ಕೆ ಮಾಜಿ ಸಂಸದ ಜಗಳೂರು ಇಮಾಂ ಸಾಬ್ ಸಾಕ್ಷಿಯಾಗಿದ್ದಾರೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಜೆ.ಎಂ. ಇಮಾಂ ಟ್ರಸ್ಟ್ ಹಾಗೂ ಜೆ.ಎಂ. ಇಮಾಂ ಸ್ಮಾರಕ ಶಾಲೆಯಿಂದ ಹಮ್ಮಿಕೊಂಡಿದ್ದ ಮಾನವತೆಯ ಬೆಳಕು-ಜಗಳೂರು ಮಹಮ್ಮದ್ ಇಮಾಂ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.ಜನಪರ ಕೆಲ, ಕಾರ್ಯಗಳ ಮೂಲಕ ಇಂದಿಗೂ ಜನಮಾನಸದಲ್ಲಿ ಆದರ್ಶ ಜನನಾಯಕ, ಆದರ್ಶ ರಾಜಕಾರಣಿಯಾಗಿ ಇಮಾಂ ಸಾಹೇಬರು ಗಮನ ಸೆಳೆಯುತ್ತಾರೆ. ಯಾವುದೇ ವ್ಯಕ್ತಿಗೆ ಜನನಾಯಕನ ಆಸ್ತಿ, ಅಂತಸ್ತು ನೆನಪಿಗೆ ಬರುವುದಿಲ್ಲ. ಆದರೆ, ಅಂತಹ ಜನಪ್ರತಿನಿಧಿ ಮಾಡಿದ ಕೆಲಸ, ಕಾರ್ಯ, ಮಾನವೀಯ ಕಾರ್ಯಗಳು ಸದಾ ನೆನಪಿನಲ್ಲಿರುತ್ತವೆ. ಇದಕ್ಕೆ ಜಗಳೂರು ಇಮ್ಮಣ್ಣ ಅಂತಲೇ ಜನರಿಂದ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಇಮಾಂ ಅವರೇ ನಿದರ್ಶನ ಎಂದು ಹೇಳಿದರು.
ಸೇವಾ ಕ್ಷೇತ್ರವಾಗಿದ್ದ ರಾಜಕಾರಣ ಈಗ ಉದ್ಯಮವಾಗಿದೆ ಎಂಬ ಮಾತುಗಳಿವೆ. ರಾಜಕಾರಣಿಗಳಿಗೆ ಸಹಕಾರ ನೀಡುತ್ತಿದ್ದಂತಹ ಉದ್ಯಮಿಗಳೇ ಈಗ ರಾಜಕಾರಣಕ್ಕೆ ಬರುತ್ತಿದ್ದಾರೆ. ರಾಜಕಾರಣದಲ್ಲಿದ್ದವರು ಉದ್ಯಮಿಗಳಾಗುತ್ತಿದ್ದಾರೆ. ಹಾಗಾಗಿ, ರಾಜಕಾರಣದಲ್ಲೂ ಬದಲಾವಣೆ ಆಗುತ್ತಿರುವುದನ್ನು ಕಾಣಬಹುದು. ಈ ಮಧ್ಯೆಯೂ ತಕ್ಕ ಮಟ್ಟಿಗೆ ಮೌಲ್ಯಗಳನ್ನು ಕಾಪಾಡಿಕೊಳ್ಳುವ ಪ್ರಯತ್ನವೂ ನಡೆಯುತ್ತಿರುವುದು ಒಂದಿಷ್ಟು ಸಮಾಧಾನಕರ ಸಂಗತಿ. ಈಗಲೇ ಪರಿಸ್ಥಿತಿ ಹೀಗಿರುವಾಗ ಮುಂದಿನ 10 ವರ್ಷದಲ್ಲಿ ರಾಜಕಾರಣ ಏನಾಗುತ್ತದೋ ಎಂಬ ಪ್ರಶ್ನೆ ತೀವ್ರವಾಗಿ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಉತ್ತಮ ಶಿಕ್ಷಕ, ವೈದ್ಯ, ವಕೀಲನಾದರೆ ಆಯಾ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ಕೊಡಬಹುದು. ಆದರೆ, ಉತ್ತಮ ರಾಜಕಾರಣಿಯಾಗಿ ರೂಪುಗೊಂಡರೆ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಸುಧಾರಣೆ ತರಲು ಸಾಧ್ಯವಿದೆ. ಅತ್ಯುತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹೊಣೆಗಾರಿಕೆ ಸಹ ಜನರ ಮೇಲಿದೆ. ಆಧುನಿಕತೆ ಹಾಗೂ ತಂತ್ರಜ್ಞಾನದ ಭರಾಟೆಯಲ್ಲಿ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳುವುದು ಸುಲಭವೂ ಅಲ್ಲ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.
ಟ್ರಸ್ಟ್ ಅಧ್ಯಕ್ಷ ಜೆ.ಕೆ.ಹುಸೇನ್ ಮಿಯ್ಯಾ ಸಾಬ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ರಾಜೇಂದ್ರ ಚೆನ್ನಿ ಕೃತಿ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ಡಾ.ದಾದಾಪೀರ್ ನವಿಲೇಹಾಳ್ ಪ್ರಾಸ್ತಾವಿಕ ಮಾತನಾಡಿದರು.ಶಾಸಕರಾದ ಬಿ.ದೇವೇಂದ್ರಪ್ಪ, ಕೆ.ಎಸ್.ಬಸವಂತಪ್ಪ, ವಿಪ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ಮಾಜಿ ಮೇಯರ್ ಕೆ.ಚಮನ್ ಸಾಬ್, ಪಿಂಜಾರ ನದಾಫ್ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಲೀಲ್ ಸಾಬ್, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ದಾದಾ ಖಲಂದರ್, ಲೇಖಕ ಎನ್.ಟಿ. ಎರ್ರಿಸ್ವಾಮಿ ಇತರರು ಇದ್ದರು.
- - -ಬಾಕ್ಸ್ * ಜನಾನುರಾಗಿ ರಾಜಕಾರಣಿ: ಸಂಸದೆ ಡಾ.ಪ್ರಭಾ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಜಗಳೂರು ಜೆ.ಎಂ.ಇಮಾಂ ಸಾಬ್ ಸಾಧನೆ ಅಪೂರ್ವವಾದುದು. ಚಿತ್ರದುರ್ಗ, ತುಮಕೂರು ಲೋಕಸಭಾ ಕ್ಷೇತ್ರವನ್ನು 2 ಸಲ ಪ್ರತಿನಿಧಿಸಿದ್ದರು. ಜನಾನುರಾಗಿ ರಾಜಕಾರಣಿಯಾಗಿದ್ದ ಇಮಾಂ ಸಾಬ್‌ರಂತೆ ಪ್ರತಿಯೊಬ್ಬ ರಾಜಕಾರಣಿಗಳೂ ರೂಪುಗೊಳ್ಳುವ ಅಗತ್ಯವಿದೆ. ಶಿಕ್ಷಣ, ಕೆರೆ ಅಭಿವೃದ್ಧಿ, ಸಮಾಜ ಸುಧಾರಣೆಗೆ ನಿರಂತರ ಶ್ರಮಿಸಿ, ಶರಣ ಮಾರ್ಗದಲ್ಲಿ ಸಾಗಿದ್ದರು. ಅವರ ಜೀವನ ಮೌಲ್ಯ, ಸಾಧನೆಗಳನ್ನು ಅರಿತರೆ ಸಮಾಜಮುಖಿ ಕಾರ್ಯ ಕೈಗೊಳ್ಳಲು ಸಾಧ್ಯ ಎಂದರು.
- - -ಕೋಟ್ ಆಸ್ತಿ, ಅಂತಸ್ತಿಗಿಂತಲೂ ಮಾನವೀಯತೆ, ಪ್ರೀತಿ ಶಾಶ್ವತವಾಗಿ ಉಳಿಯುತ್ತವೆ. ವಿದ್ಯಾರ್ಥಿ, ಯುವಸಮೂಹವು ಅಂತಹ ಕಾರ್ಯಕ್ಕೆ ಮುಂದಾಗುತ್ತಿಲ್ಲ. ಬಿಕ್ಕಟ್ಟು ಸೃಷ್ಟಿಸುವುದು, ಪರಿಹರಿಸುವುದೇ ದೊಡ್ಡ ಸಮಸ್ಯೆಯಾಗಿದೆ. ಬಿಕ್ಕಟ್ಟಿನ ಬದಲಿಗೆ ಒಗ್ಗಟ್ಟು, ಸಮಸ್ಯೆಯ ಬದಲಿಗೆ ಪರಿಹಾರ ಆಗುವತ್ತ ಯುವಜನಾಂಗ ಗಮನ ಹರಿಸಬೇಕು
- ಯು.ಟಿ.ಖಾದರ್, ಸಭಾಪತಿ, ವಿಧಾನ ಪರಿಷತ್ತು- - - -20ಕೆಡಿವಿಜಿ2.ಜೆಪಿಜಿ:
ದಾವಣಗೆರೆಯಲ್ಲಿ ಗುರುವಾರ ಜೆ.ಎಂ.ಇಮಾಂ ಟ್ರಸ್ಟ್ ಹಾಗೂ ಜೆ.ಎಂ.ಇಮಾಂ ಸ್ಮಾರಕ ಶಾಲೆಯಿಂದ ಹಮ್ಮಿಕೊಂಡಿದ್ದ ಮಾನವತೆಯ ಬೆಳಕು-ಜಗಳೂರು ಮಹಮ್ಮದ್ ಇಮಾಂ ಕೃತಿಯನ್ನು ವಿಧಾನಸಭೆ ಸಭಾಪತಿ ಯು.ಟಿ.ಖಾದರ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಬಿಡುಗಡೆಗೊಳಿಸಿದರು.