ಸೂಸಲವಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೆಟ್ಟಿಕೊಪ್ಪ ಕ್ಲಸ್ಠರ್ ಮಟ್ಟದ ಕಲಿಕಾ ಹಬ್ಬ। ಸಭಾಂಗಣ ಉದ್ಘಾಟನೆ
ಮಕ್ಕಳು ವರ್ಷವಿಡೀ ಕಲಿತಿರುವ ಶಿಕ್ಷಣವನ್ನು ಪೋಷಕರ ಎದುರು ಪ್ರದರ್ಶನ ಮಾಡಿ ಹಬ್ಬದಂತೆ ಸಂಭ್ರಮಿಸುವುದೇ ಕಲಿಕಾ ಹಬ್ಬದ ಮುಖ್ಯ ಉದ್ದೇಶ ಎಂದು ಚಿಕ್ಕಮಗಳೂರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಿರಿಯ ಉಪನ್ಯಾಸಕಿ ಮಂಜುಳಾ ತಿಳಿಸಿದರು.
ಗುರುವಾರ ಕಡಹಿನಬೈಲು ಗ್ರಾಮ ಪಂಚಾಯಿತಿ ಸೂಸಲವಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೆಟ್ಟಿಕೊಪ್ಪ ಕ್ಲಸ್ಠರ್ ಮಟ್ಟದ ಕಲಿಕಾ ಹಬ್ಬ ಹಾಗೂ ₹6 ಲಕ್ಷ ವೆಚ್ಚದ ಸಭಾಂಗಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳ ಪರೀಕ್ಷೆಗೆ ಮುಂಚೆ ನಡೆಯುವ ಕಲಿಕಾ ಹಬ್ಬದಲ್ಲಿ 7 ವಿವಿಧ ಸ್ಪರ್ಧೆ ನಡೆಯುತ್ತದೆ. ಮಕ್ಕಳ ಶಿಕ್ಷಣಕ್ಕೆ ಕಲಿಕಾ ಹಬ್ಬ ತಳಪಾಯ ಇದ್ದಂತೆ. ಗುಣಮಟ್ಟದ ಶಿಕ್ಷಣ ಸಿಕ್ಕಿದೆಯೇ ಎಂಬುದು ಸಹ ಕಲಿಕಾ ಹಬ್ಬದಲ್ಲಿ ತಿಳಿಯಲಿದೆ ಎಂದರು.ಮುಖ್ಯ ಅತಿಥಿಯಾಗಿದ್ದ ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್ ಕುಮಾರ್ ಮಾತನಾಡಿ, ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಇಂದು ಕಲಿಕಾ ಹಬ್ಬದ ಜೊತೆಗೆ ₹6 ಲಕ್ಷ ವೆಚ್ಚದ ಸಭಾಂಗಣ ಉದ್ಘಾಟನೆಯಾಗಿದೆ. ಶಾಸಕ ಟಿ.ಡಿ.ರಾಜೇಗೌಡರು ತಮ್ಮ ಅನುದಾನದಲ್ಲಿ ನಲಿ ,ಕಲಿ ಕೊಠಡಿಗೆ ₹2 ಲಕ್ಷ , ಶಾಲಾ ಕೊಠಡಿ ದುರಸ್ಥಿಗೆ ₹2 ಲಕ್ಷ ನೀಡಿದ್ದಾರೆ. ಸಭಾಂಗಣಕ್ಕೆ₹ 4 ಲಕ್ಷ, ಇಂಟರ್ ಲಾಕ್ ಗೆ ₹2 ಲಕ್ಷ ಬಂದಿದ್ದು 3 ವರ್ಷದ ಅವಧಿಯಲ್ಲಿ ಶಾಲೆ ಅಭಿವೃದ್ದಿಗೆ ₹10 ಲಕ್ಷ ನೀಡಿದ್ದಾರೆ. ಅನುದಾನ ಬರುವಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್ ಬೈಲು ನಟರಾಜ್ ಪ್ರಯತ್ನವೂ ಸೇರಿದೆ ಎಂದರು.
ಇದೇ ಸಂದರ್ಭದಲ್ಲಿ ಆಡುವಳ್ಳಿ ಗ್ರಾಪಂ ಸದಸ್ಯ ಗೇರ್ ಬೈಲು ನಟರಾಜ, ಸೂಸಲವಾನಿ ಶಾಲೆಯ ಮುಖ್ಯ ಶಿಕ್ಷಕ ರಾಜಪ್ಪ, ಸಹ ಶಿಕ್ಷಕಿ ಪ್ರಮೀಳಾ, ಸಿ.ಆರ್.ಪಿ. ತಿಮ್ಮಮ್ಮ ಅವರನ್ನು ಸನ್ಮಾನಿಸಲಾಯಿತು. 9 ಶಾಲೆಯ ಮಕ್ಕಳು 7 ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.