ಸಿದ್ಧಾರೂಢ ಅಜ್ಜನ ದಾಸೋಹಕ್ಕೆ 50 ಕ್ವಿಂಟಲ್‌ ಅನ್ನ!

KannadaprabhaNewsNetwork |  
Published : Feb 15, 2026, 03:15 AM IST
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದ ವ್ಯವಸ್ಥೆಗೆ ಸಂಗ್ರಹಿಸಲಾದ ಬಗೆಬಗೆಯ ತರಕಾರಿ. | Kannada Prabha

ಸಾರಾಂಶ

ಸಿದ್ಧಾರೂಢರ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಫೆ. 15 ಹಾಗೂ 16ರಂದು ನಡೆಯುವ ಅದ್ಧೂರಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಶ್ರೀಮಠದಿಂದ 50 ಕ್ವಿಂಟಲ್‌ ಅನ್ನ ಪ್ರಸಾದದ ವ್ಯವಸ್ಥೆ ಮಾಡಿದ್ದು, ಈಗಾಗಲೇ ಅಡುಗೆಗೆ ಬೇಕಾದ ಸಕಲ ತಯಾರಿ ಮಾಡಿಕೊಳ್ಳಲಾಗಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಸಿದ್ಧಾರೂಢರ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಫೆ. 15 ಹಾಗೂ 16ರಂದು ನಡೆಯುವ ಅದ್ಧೂರಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಶ್ರೀಮಠದಿಂದ 50 ಕ್ವಿಂಟಲ್‌ ಅನ್ನ ಪ್ರಸಾದದ ವ್ಯವಸ್ಥೆ ಮಾಡಿದ್ದು, ಈಗಾಗಲೇ ಅಡುಗೆಗೆ ಬೇಕಾದ ಸಕಲ ತಯಾರಿ ಮಾಡಿಕೊಳ್ಳಲಾಗಿದೆ.

ಶ್ರೀಮಠದಲ್ಲಿ ನಿತ್ಯವೂ ಮೂರು ಹೊತ್ತು ಪ್ರಸಾದದ ವ್ಯವಸ್ಥೆಯಿದ್ದು, ಪ್ರತಿನಿತ್ಯ ಬೆಳಗ್ಗೆ 8ರಿಂದ 11ರ ವರೆಗೆ ಉಪಾಹಾರ, ಮಧ್ಯಾಹ್ನ 12ರಿಂದ 4ರ ವರೆಗೆ ಹಾಗೂ ರಾತ್ರಿ 8ರಿಂದ 11ರ ವರೆಗೆ ಪ್ರಸಾದದ ವ್ಯವಸ್ಥೆ ಇರಲಿದೆ. ಸಾಮಾನ್ಯ ದಿನಗಳಲ್ಲಿ ನಿತ್ಯ 5 ಸಾವಿರಕ್ಕೂ ಅಧಿಕ ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ. ಅಮಾವಾಸ್ಯೆ, ಪ್ರತಿ ಭಾನುವಾರ, ಸೋಮವಾರ ಭಕ್ತರ ಸಂಖ್ಯೆ ದುಪ್ಪಟ್ಟು ದಾಟುತ್ತದೆ. ಈ ವೇಳೆ ಭಕ್ತರ ಸಂಖ್ಯೆಗೆ ಅನುಗುಣವಾಗಿ ಶ್ರೀಮಠದಿಂದ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತದೆ. ಸಾಮಾನ್ಯ ದಿನಗಳಲ್ಲಿ ನಿತ್ಯ 6 ಕ್ವಿಂಟಲ್‌ ಅಕ್ಕಿ, 2 ಕ್ವಿಂಟಲ್‌ ಪಾಯಸ, 1 ಸಾವಿರ ಲೀಟರ್ ಸಾಂಬಾರ, 1 ಕ್ವಿಂಟಲ್‌ ಪಲ್ಲೆ ಮಾಡಲಾಗುತ್ತದೆ. ಭಾನುವಾರ ಮತ್ತು ಸೋಮವಾರ 15 ಕ್ವಿಂಟಲ್‌ ಅಕ್ಕಿ, 6 ಕ್ವಿಂಟಲ್‌ ಪಾಯಸ, 2500 ಲೀಟರ್‌ ಸಾಂಬಾರ, 2 ಕ್ವಿಂಟಲ್‌ ಪಲ್ಲೆ ತಯಾರಿಸಲಾಗುತ್ತದೆ. ಶಿವರಾತ್ರಿ ಮಹೋತ್ಸವದ ಅಂಗವಾಗಿ ಕಳೆದ ಫೆ. 10ರಿಂದ 18ರ ವರೆಗೆ ಸಿದ್ಧಾರೂಢರ ಮಠದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ವೇಳೆ ಭಕ್ತರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಈ ದಿನಗಳಲ್ಲಿ ದಿನಕ್ಕೆ ಕನಿಷ್ಠ 50 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುತ್ತಾರೆ. ಫೆ. 10ರಿಂದ 14ರ ವರೆಗೆ ಹಾಗೂ ಫೆ. 17ರಂದು ಶಿವರಾತ್ರಿ ಅಮಾವಾಸ್ಯೆ ಅಂಗವಾಗಿ ಶ್ರೀ ಸಿದ್ಧಾರೂಢರಿಗೆ ಭಸ್ಮಸ್ನಾನ ಹಾಗೂ 18ರಂದು ಕೌದಿಪೂಜೆ ನೆರವೇರಲಿದೆ. ಈ ದಿನಗಳಂದು ಶ್ರೀಮಠಕ್ಕೆ ಆಗಮಿಸುವ ಭಕ್ತರಿಗಾಗಿ ನಿತ್ಯ 25 ಕ್ವಿಂಟಲ್‌ ಅಕ್ಕಿ, 12 ಕ್ವಿಂಟಲ್‌ ಪಾಯಸ, 3500 ಲೀಟರ್‌ ಸಾಂಬಾರ್‌, 4 ಕ್ವಿಂಟಲ್‌ ಪಲ್ಲೆ ತಯಾರಿಸಲಾಗುತ್ತದೆ.

ಎಲ್ಲವೂ ಭಕ್ತರಿಂದಲೆ

ಶಿವರಾತ್ರಿ ಹಾಗೂ ಜಾತ್ರಾ ಮಹೋತ್ಸವ ಎರಡು ದಿನಗಳ ಕಾಲ ಸಿದ್ಧಾರೂಢರ ಮಠಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹಾಗೆಯೇ ಶ್ರೀಮಠದಲ್ಲಿ ಅಷ್ಟೇ ಅಲ್ಲದೇ ನೂರಾರು ಭಕ್ತರು, ಸಂಘ-ಸಂಸ್ಥೆಗಳಿಂದ ಶ್ರೀಮಠದ ಸುತ್ತಮುತ್ತಲೂ ಹಾಗೂ ನಗರದೆಲ್ಲಡೆ ಪ್ರಸಾದ, ಅಲ್ಪೋಪಾಹಾರದ ವ್ಯವಸ್ಥೆ ಮಾಡಲಾಗಿರುತ್ತದೆ.

ಜಾತ್ರೆ ಆರಂಭವಾಗುವ ಒಂದು ತಿಂಗಳು ಮೊದಲೇ ರಾಜ್ಯ, ಹೊರರಾಜ್ಯಗಳಿಂದ ಆಗಮಿಸುವ ಭಕ್ತರು ಸ್ವಯಂಪ್ರೇರಣೆಯಿಂದಲೇ ಅಡುಗೆಗೆ ಬೇಕಾದ ಎಲ್ಲ ಸಾಮಗ್ರಿ ನೀಡುತ್ತಾರೆ. ಕೆಲವು ಸಂಘ-ಸಂಸ್ಥೆಗಳು ಸೇರಿ ನೂರಾರು ಚೀಲ ಅಕ್ಕಿ, ಬೆಲ್ಲ, ಬೇಳೆ, ತುಪ್ಪ, ರವಾ, ಬಾದಾಮಿ, ಗೋಡಂಬಿ, ಮಸಾಲೆ ಪದಾರ್ಥಗಳು ಸೇರಿದಂತೆ ಇನ್ನಿತರೆ ಅಹಾರ ಸಾಮಗ್ರಿ ನೀಡುತ್ತಾರೆ. ಎಪಿಎಂಸಿ ಮಾರುಕಟ್ಟೆ ವ್ಯಾಪಾರಸ್ಥರು ಜಾತ್ರೆಗೆ ಬೇಕಾದ ತರಕಾರಿ ಸೇವೆ ನೀಡುತ್ತಾರೆ. ಈಗಾಗಲೇ ಶ್ರೀಮಠ ಉಗ್ರಾಣದಲ್ಲಿ ಕಾಲಿಡಲು ಆಗದಷ್ಟು ಆಹಾರ ಸಾಮಗ್ರಿಗಳು ಭಕ್ತರಿಂದಲೇ ಸಂಗ್ರಹವಾಗಿದೆ.ಅಜ್ಜನ ಮೇಲಿರುವ ಭಕ್ತರ ಪ್ರೀತಿ ಹೇಳತೀರದು. ಶ್ರೀಮಠದಲ್ಲಿ ಎಲ್ಲ ಕೆಲಸಗಳನ್ನು ಅಜ್ಜನ ಭಕ್ತರೇ ಸ್ವಯಂಪ್ರೇರಣೆಯಿಂದ ನಿಂತು ಕಾರ್ಯನಿರ್ವಹಿಸುತ್ತಾರೆ. ಪ್ರಸಾದಕ್ಕೆ ಬೇಕಾದ ಅಕ್ಕಿ, ಬೆಲ್ಲ, ತರಕಾರಿ ಸೇರಿದಂತೆ ಎಲ್ಲ ವಸ್ತುಗಳನ್ನು ಭಕ್ತರೇ ಪ್ರತಿವರ್ಷ ತಂದು ಕೊಡುತ್ತಾರೆ.

ಚಂದ್ರು ಪಾಟೀಲ, ಶ್ರೀಮಠದ ದಾಸೋಹ ಕೇಂದ್ರದ ಉಸ್ತುವಾರಿನಾನು ಚಿಕ್ಕಂದಿನಿಂದ ನನ್ನ ತಂದೆಯೊಂದಿಗೆ ಸಿದ್ಧಾರೂಢರ ಮಠಕ್ಕೆ ಆಗಮಿಸಿ ಸೇವೆ ಮಾಡುತ್ತಿದ್ದೇನೆ. ಇಲ್ಲಿ ದೊರೆತ ನೆಮ್ಮದಿ ಬೇರೆಲ್ಲೂ ದೊರೆತಿಲ್ಲ. ನನ್ನ ಮೂವರು ಮಕ್ಕಳು, 5 ಮಮ್ಮಕ್ಕಳೊಂದಿಗೆ ಒಂದು ವಾರ ಮೊದಲೇ ಮಠಕ್ಕೆ ಆಗಮಿಸಿ ಸೇವೆ ಸಲ್ಲಿಸುತ್ತೇನೆ.

ಬಸವರಾಜ ಹೆಬ್ಬಳ್ಳಿ, ವಿಜಯಪುರದಿಂದ ಆಗಮಿಸಿದ್ದ ಸಿದ್ಧಾರೂಢರ ಭಕ್ತ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿಥಿ ಉಪನ್ಯಾಸಕರಿಗೆ ಹರಿಯಾಣ ಮಾದರಿ ಸೇವಾ ಭದ್ರತೆ ನೀಡಲು ಒತ್ತಾಯ
ಸ್ವಂತ ಖರ್ಚಲ್ಲಿ ವಿದ್ಯಾರ್ಥಿಗಳನ್ನುಕಾಪ್ಟರಲ್ಲಿ ಹಾರಾಡಿಸಿದ ಜಮೀರ್‌