ಶಿವಮೊಗ್ಗದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶಕ್ಕೆ 50 ಸಾವಿರ ಜನ

KannadaprabhaNewsNetwork |  
Published : Feb 22, 2024, 01:48 AM IST
ಪೋಟೋ: 21ಎಸ್‌ಎಂಜಿಕೆಪಿ04ಶಿವಮೊಗ್ಗ ಪ್ರೀಡಂ ಪಾರ್ಕ್‌ಗೆ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್‍ನಲ್ಲಿ ಫೆ.24ರಂದು ನಡೆಯಲಿರುವ ಸರ್ಕಾರದ ಮಹತ್ವಕಾಂಕ್ಷಿ ಐದು ಗ್ಯಾರಂಟಿ ಯೋಜನೆ ಫಲಾನುಭವಿಗಳ ಜಿಲ್ಲಾಮಟ್ಟದ ಸಮಾವೇಶ ನಡೆಯಲಿದೆ. ಈ ಹಿನ್ನೆಲೆ ಸ್ಥಳಕ್ಕೆ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬುಧವಾರ ಭೇಟಿ ನೀಡಿದರು. ಸಮಾವೇಶದಲ್ಲಿ ಎಲ್ಲ ತಾಲೂಕುಗಳಿಂದ ಐದು ಗ್ಯಾರಂಟಿಗಳ ಫಲಾನುಭವಿಗಳು ಆಗಮಿಸುವ ನಿರೀಕ್ಷೆಯಿದೆ. ಸುಮಾರು 50 ಸಾವಿರಕ್ಕೂ ಹೆಚ್ಚಿನ ಜನ ಭಾಗಿಯಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಗರದ ಫ್ರೀಡಂ ಪಾರ್ಕ್‍ನಲ್ಲಿ ಫೆ.24ರಂದು ನಡೆಯಲಿರುವ ಸರ್ಕಾರದ ಮಹತ್ವಕಾಂಕ್ಷಿ ಐದು ಗ್ಯಾರಂಟಿ ಯೋಜನೆ ಫಲಾನುಭವಿಗಳ ಜಿಲ್ಲಾಮಟ್ಟದ ಸಮಾವೇಶ ನಡೆಯಲಿದೆ. ಈ ಹಿನ್ನೆಲೆ ಸ್ಥಳಕ್ಕೆ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬುಧವಾರ ಭೇಟಿ ನೀಡಿದರು.

ಸ್ಥಳ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾವೇಶದಲ್ಲಿ ಎಲ್ಲ ತಾಲೂಕುಗಳಿಂದ ಐದು ಗ್ಯಾರಂಟಿಗಳ ಫಲಾನುಭವಿಗಳು ಆಗಮಿಸುವ ನಿರೀಕ್ಷೆಯಿದೆ. ಸುಮಾರು 50 ಸಾವಿರಕ್ಕೂ ಹೆಚ್ಚಿನ ಜನ ಭಾಗಿಯಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ. ಅವರ ಅನುಕೂಲಕ್ಕಾಗಿ ಎಲ್ಲ ರೀತಿಯ ಮೂಲಸೌಕರ್ಯಗಳು, ಶೌಚಾಲಯ, ಕುಡಿಯುವ ನೀರು, ಮಧ್ಯಾಹ್ನದ ಉಪಾಹಾರ ಮತ್ತಿತರ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲು ಆಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಮಟ್ಟದಲ್ಲಿ ಆಯೋಜನೆಗೊಳ್ಳುತ್ತಿರುವ ಈ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಮಿಸಿ, ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಚಿವ ಸಂಪುಟದ ಕೆಲ ಸಚಿವರು ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷರು ಸಹ ಆಗಮಿಸಲಿದ್ದಾರೆ ಎಂದರು.

100 ಬಸ್‌ಗಳ ವ್ಯವಸ್ಥೆ:

ಜಿಲ್ಲಾಡಳಿತದಿಂದ ಆಯೋಜನೆಗೊಂಡಿರುವ ಈ ಕಾರ್ಯಕ್ರಮಕ್ಕೆ ಗಣ್ಯರನ್ನು ಅತಿಥಿಗಳನ್ನು ಆಹ್ವಾನಿಸಲಾಗುವುದು. ಇದೇ ಸಂದರ್ಭದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಗುವುದು. ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಆಗುವಂತೆ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಹೊಸ ಬಸ್‍ಗಳನ್ನು ಲೋಕಾರ್ಪಣೆಗೊಳಿಸಲಾಗುವುದು. ಜಿಲ್ಲೆಯ ಜನರ ಪ್ರಯಾಣಕ್ಕೆ ಅನುಕೂಲವಾಗುವಂತೆ 100 ಬಸ್‍ಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು, ಹಂತಹಂತವಾಗಿ ಬಸ್ಸುಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದರು.

ರಾಜ್ಯದ ಬಹುತೇಕ ಕುಟುಂಬಗಳ ಸದಸ್ಯರು ಈ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿರುವುದು ವೈಯಕ್ತಿಕವಾಗಿ ಸಂತೋಷವಾಗಿದೆ. ಚುನಾವಣಾ ಪೂರ್ವದಲ್ಲಿ ಘೋಷಿಸಿದ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷನಾಗಿದ್ದೆ ಎಂಬ ಹೆಮ್ಮೆ ನನಗಿದೆ ಎಂದು ಹೇಳಿದರು.

ಈ ಸಂದರ್ಭ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಪೊಲೀಸ್ ಅಧಿಕಾರಿ ಜಿ.ಕೆ. ಮಿಥುನ್‌ಕುಮಾರ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಮತ್ತಿತರರು ಇದ್ದರು.

- - - ಬಾಕ್ಸ್‌ 59 ಲಕ್ಷ ಮಕ್ಕಳಿಗೆ ರಾಗಿ ಮಾಲ್ಟ್‌ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಐದು ದಿನಗಳ ಕಾಲ ಪೌಷ್ಟಿಕ ಆಹಾರ, ಹಾಲು ಮತ್ತು ಎರಡು ದಿನಗಳ ಕಾಲ ಮೊಟ್ಟೆಯನ್ನು ನೀಡಲಾಗುತ್ತಿತ್ತು. ಇನ್ನು ಮುಂದೆ ವಾರದ ನಾಲ್ಕು ದಿನಗಳ ಕಾಲ ಮಕ್ಕಳಿಗೆ ಪೌಷ್ಟಿಕ ಆಹಾರ, ರಾಗಿ ಮಾಲ್ಟ್‌ ನೀಡುವ ಕಾರ್ಯಕ್ರಮಕ್ಕೆ ಗುರುವಾರ ಬೆಂಗಳೂರಿನಲ್ಲಿ ರಾಜ್ಯದ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ. ರಾಜ್ಯದ 59 ಲಕ್ಷ ವಿದ್ಯಾರ್ಥಿಗಳು ಈ ಯೋಜನೆ ಲಾಭ ಪಡೆಯುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಈವರೆಗೆ ಗ್ಯಾರಂಟಿ ಯೋಜನೆಗಳ ಸೌಲಭ್ಯ ವಂಚಿತರ ಅನುಕೂಲಕ್ಕಾಗಿ ವೇದಿಕೆಯ ಇಕ್ಕೆಲಗಳಲ್ಲಿ ದೂರು ಸ್ವೀಕಾರ ಹಾಗೂ ಸಮಸ್ಯೆ ನಿವಾರಣೆಗೆ ಸಲಹಾ ಕೊಠಡಿಗಳನ್ನು ಸ್ಥಾಪಿಸಲಾಗುವುದು. ಅರ್ಹರು ಈ ಸದವಕಾಶದ ಲಾಭ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಪ್ರಸ್ತುತ ಆಡಳಿತಾರೂಢ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶ ಕಳೆದ ಸಾಲಿನಲ್ಲಿ ಶಿಕ್ಷಣ ಇಲಾಖೆಗೆ ನಿಗದಿಗೊಳಿಸಿದ ₹37 ಸಾವಿರ ಕೋಟಿ ಅನುದಾನವನ್ನು ಪ್ರಸಕ್ತ ಸಾಲಿಗೆ ₹44 ಸಾವಿರ ಕೋಟಿಗಳಿಗೆ ಹೆಚ್ಚಿಸಲಾಗಿದೆ ಎಂದರು.

- - - ಬಾಕ್ಸ್‌ ಫೆ.24ರಂದು ಜಿಲ್ಲಾಡಳಿತದಿಂದ ಆಯೋಜಿಸಿರುವ ಜಿಲ್ಲಾಮಟ್ಟದ ಗ್ಯಾರಂಟಿ ಫಲಾನುಭವಿಗಳ ಸಮಾವೇಶಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಕಾರ್ಯಕ್ರಮದ ಯಶಸ್ವಿ ಅನುಷ್ಠಾನ ಹಾಗೂ ಉಸ್ತುವಾರಿಗಾಗಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದೆ. ವೇದಿಕೆ ಮುಂಭಾಗದಲ್ಲಿ ಫಲ-ಪುಷ್ಟ ಹಾಗೂ ಸಿರಿಧಾನ್ಯಗಳಿಂದ ಅಲಂಕರಿಸಲಾಗುವುದು. ಕಾರ್ಯಕ್ರಮಕ್ಕೆ ಬರುವ ಫಲಾನುಭವಿಗಳಿಗಾಗಿ ಅವಶ್ಯ ಮೂಲಸೌಕರ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ

- ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ

- - - -21ಎಸ್‌ಎಂಜಿಕೆಪಿ04:

ಶಿವಮೊಗ್ಗ ಫ್ರೀಡಂ ಪಾರ್ಕ್‌ಗೆ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ, ಸಮಾವೇಶ ಸಿದ್ಧತೆಗಳ ಪರಿಶೀಲನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ