ನಗರದ ಸಂಚಾರ ಸಮಸ್ಯೆ, ಕಾನೂನು ಸುವ್ಯವಸ್ಥೆಗೆ ಬಜೆಟ್‌ನಲ್ಲಿ 500 ಕೋಟಿ ನೀಡಿ

KannadaprabhaNewsNetwork |  
Published : Jan 25, 2026, 01:15 AM IST
3 | Kannada Prabha

ಸಾರಾಂಶ

ಮೈಸೂರು ನಗರದ ಸಂಚಾರ ಸಮಸ್ಯೆಗಳಿಗೆ ಪರಿಹಾರ ಹಾಗೂ ಕಾನೂನು ಸುವ್ಯವಸ್ಥೆ ಸರಿಪಡಿಸಲು ಬಜೆಟ್‌ ನಲ್ಲಿ ಕನಿಷ್ಠ 500 ಕೋಟಿ ರು. ನೀಡುವಂತೆ ಕಾಂಗ್ರೆಸ್ ಪಕ್ಷದ ನಿಯೋಗವು ರಾಜ್ಯ ಸರ್ಕಾರಕ್ಕೆ ನಗರ ಪೊಲೀಸ್ ಆಯುಕ್ತರ ಮೂಲಕ ಶನಿವಾರ ಮನವಿ ಸಲ್ಲಿಸಿತು.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಸಂಚಾರ ಸಮಸ್ಯೆಗಳಿಗೆ ಪರಿಹಾರ ಹಾಗೂ ಕಾನೂನು ಸುವ್ಯವಸ್ಥೆ ಸರಿಪಡಿಸಲು ಬಜೆಟ್‌ ನಲ್ಲಿ ಕನಿಷ್ಠ 500 ಕೋಟಿ ರು. ನೀಡುವಂತೆ ಕಾಂಗ್ರೆಸ್ ಪಕ್ಷದ ನಿಯೋಗವು ರಾಜ್ಯ ಸರ್ಕಾರಕ್ಕೆ ನಗರ ಪೊಲೀಸ್ ಆಯುಕ್ತರ ಮೂಲಕ ಶನಿವಾರ ಮನವಿ ಸಲ್ಲಿಸಿತು.

ನಗರ ಪೊಲೀಸ್ ಆಯುಕ್ತ ಕಚೇರಿಗೆ ತೆರಳಿದ ಕಾಂಗ್ರೆಸ್ ನಿಯೋಗವು ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರಿಗೆ ಮನವಿ ನೀಡಿತು. ಈ ವೇಳೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಮಾತನಾಡಿ, ನಗರವು ಅತಿ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಬೃಹತ್ ಮೈಸೂರು ನಗರಪಾಲಿಕೆಯಾಗಿ ಘೋಷಣೆಯಾಗುತ್ತಿದ್ದು, ನಗರದ ಟ್ರಾಫಿಕ್ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಅನುದಾನವನ್ನು ಪೊಲೀಸ್ ಇಲಾಖೆಗೆ ನೀಡಬೇಕಾಗಿ ಸರ್ಕಾರಕ್ಕೆ ಮನವಿ ಮಾಡಿದರು.

ಹಾಲಿ 86 ಚದರ ಕಿ.ಮೀ. ವ್ಯಾಪ್ತಿಯ ನಗರ ಪಾಲಿಕೆಯಲ್ಲಿ 16 ಪೊಲೀಸ್ ಠಾಣೆಗಳು ಕೆಲಸ ನಿರ್ವಹಿಸುತ್ತಿದ್ದು, ಈಗ ಬೃಹತ್ ಮೈಸೂರು ನಗರಪಾಲಿಕೆಯ ವ್ಯಾಪ್ತಿವು 341 ಚದರ ಕಿ.ಮೀ. ಇದೆ. ಇದಕ್ಕೆ ಅನುಗುಣವಾಗಿ ಕನಿಷ್ಠ ಮೊದಲನೆಯ ಹಂತದಲ್ಲಿ 6 ನೂತನ ಪೊಲೀಸ್ ಠಾಣೆಗಳನ್ನು ನಿರ್ಮಿಸಲು ಬಜೆಟ್‌ ನಲ್ಲಿ ಘೋಷಿಸಬೇಕು ಎಂದು ಅವರು ಕೋರಿದರು.

ಪ್ರವಾಸಿ ತಾಣವಾಗಿರುವುದರಿಂದ ನಗರಕ್ಕೆ ಬಾಂಬ್ ಡಿಕೆಡಿಂಗ್ ಸ್ಕ್ವಾಡ್ ಮತ್ತು ಇತರೆ ಮೂಲಭೂತ ಸೌಕರ್ಯಗಳಿಗೆ ಹಣ ಮೀಸಲಿಡಬೇಕು. ಮೈಸೂರಿನಲ್ಲಿರುವ ವಾಹನಗಳ ಸಂಖ್ಯೆ ಸುಮಾರು 8 ಲಕ್ಷ ಮತ್ತು ಮೈಸೂರಿಗೆ ನಿತ್ಯ ಬಂದು ಹೋಗುತ್ತಿರುವ ವಾಹನಗಳ ಸಂಖ್ಯೆ 1 ಲಕ್ಷಕ್ಕೂ ಮೀರಿದೆ. ಟ್ರಾಫಿಕ್ ಸಮಸ್ಯೆಯನ್ನು ತಗ್ಗಿಸಲು ಹೊರ ವರ್ತುಲ ರಸ್ತೆಗಳ ಹೊರಗಡೆ ಕನಿಷ್ಠ 4 ಸಾಟಲೈಟ್ ಬಸ್ ಟರ್‌ ಮಿನಲ್ಸ್‌ ಗಳನ್ನು ನಿರ್ಮಿಸಬೇಕು ಎಂದರು.

ಹಾಲಿ ಖಾಸಗಿ ಬಸ್ ನಿಲ್ದಾಣವನ್ನು ಟಿ. ನರಸೀಪುರ ರಸ್ತೆಗೆ ಹೋಗುವ ಕಡೆ ಸ್ಥಳಾಂತರಿಸಬೇಕು. 341 ಚದರ ಕಿ.ಮೀ. ವ್ಯಾಪ್ತಿಗೆ ಕನಿಷ್ಠ 4 ಡಿಸಿಪಿ ಹುದ್ದೆಗಳನ್ನು ಸೃಷ್ಟಿಸಿ 4 ದಿಕ್ಕುಗಳಲ್ಲಿ ನೇಮಿಸಬೇಕು. ಈಗಾಗಲೇ ಮೆಟ್ರೋಪೋಲ್ ವೃತ್ತದಿಂದ ಹಿನಕಲ್ ವೃತ್ತ ಮತ್ತು ಮೆಟ್ರೋಪೋಲ್ ವೃತ್ತದಿಂದ ಜೆಎಲ್‌ ಬಿ ರಸ್ತೆಯ ಮೂಲಕ - ಓವರ್ ಮತ್ತು ಅಂಡರ್ ಪಾಸ್ ನಿರ್ಮಿಸಲು ತೆಗೆದುಕೊಂಡಿರುವ ತೀರ್ಮಾನ ಅತ್ಯುತ್ತಮವಾಗಿರುವುದರಿಂದ ಜರೂರಾಗಿ ಜಾರಿಗೆ ತರಬೇಕು ಎಂದು ಅವರು ಮನವಿ ಮಾಡಿದರು.

ಕನಿಷ್ಠ 6 ಕಡೆ ಮಲ್ಟಿ ಲೆವಲ್ ಪಾರ್ಕಿಂಗ್, ನಗರದ ಹೊರಗಡೆ ಎಕ್ಸಿಬಿಷನ್ ಗ್ರೌಂಡ್, ಮೈಸೂರು ಪೊಲೀಸರಿಗೆ ಸುಸಜ್ಜಿತವಾದ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನ ವಿತರಣೆ, ಬಹುತೇಕ ವೃತ್ತಗಳಿಗೆ ಟ್ರಾಫಿಕ್ ಸಿಗ್ನಲ್ ಅಳವಡಿಸಲು ಹಣ ಬಿಡುಗಡೆ ಮಾಡಬೇಕು. ಹೊರ ವರ್ತುಲ ರಸ್ತೆಯಲ್ಲಿ ಪಾದಚಾರಿಗಳಿಗಾಗಿ ಅಂಡರ್ ಪಾಸ್ ಮತ್ತು ಸ್ಕೈ ವಾಕ್, ಪೆರಿಪೆರಿಂಗ್ ಹೊರ ವರ್ತುಲ ರಸ್ತೆ, ರಾಡಿಯಲ್ ರಸ್ತೆ ಮತ್ತು ಔಟರ್ ರಿಂಗ್ ರಸ್ತೆಗಳನ್ನು ನಿರ್ಮಿಸಿ ಹಾಲಿ ಇರುವ ರಿಂಗ್ ರಸ್ತೆಯನ್ನು 6+6 ಪಥದ ರಸ್ತೆಯಾಗಿ ವಿಸ್ತರಿಸಬೇಕು. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ನಿಟ್ಟಿನಲ್ಲಿ ಮೊದಲನೆಯ ಹಂತದಲ್ಲಿ 500 ಕೋಟಿಯನ್ನು ಬಜೆಟ್‌ ನಲ್ಲಿ ನೀಡಬೇಕು ಎಂದು ಅವರು ಕೋರಿದರು.

ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮಾಜಿ ಮೇಯರ್ ಬಿ.ಎಲ್. ಭೈರಪ್ಪ, ನಗರ ಪಾಲಿಕೆ ಮಾಜಿ ಸದಸ್ಯರಾದ ಕೆ.ವಿ. ಮಲ್ಲೇಶ್, ಶಿವಣ್ಣ, ಪ್ರದೀಪ್, ಜಿಲ್ಲಾ ವಕ್ತಾರ ಕೆ. ಮಹೇಶ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!