ಇನ್ನೊಂದು ತಿಂಗಳಲ್ಲಿ 500 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಗುರಿ

KannadaprabhaNewsNetwork | Published : Dec 31, 2024 1:00 AM

ಸಾರಾಂಶ

ಇಂದನ ಸಚಿವ ಕೆ.ಜೆ.ಜಾರ್ಚ್ ಹೊಸದುರ್ಗ ಸಮೀಪದ ಮಾರಬಘಟ್ಟ ಗ್ರಾಮದ ಬಳಿ ನಿರ್ಮಾಣ ಮಾಡಲಾಗಿರುವ ಸೋಲಾರ್‌ ಪ್ಲಾಂಟ್‌ಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಹಗಲು ವೇಳೆ ರೈತರಿಗೆ ವಿದ್ಯುತ್ ಕೊಡುವ ಸಲುವಾಗಿ ಕುಸುಮ್ ಯೋಜನೆಯಡಿ ಸೋಲಾರ್ ವಿದ್ಯುತ್ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು ಕೆಲವೇ ತಿಂಗಳಲ್ಲಿ 3ಸಾವಿರ ಮೇಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗಲಿದೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಹೇಳಿದರು.

ತಾಲೂಕಿನ ನೀರಗುಂದ ಗೇಟ್ ಬಳಿ ಸ್ಥಾಪೀಸಲಾಗಿರುವ ಸೋಲಾರ್ ಪ್ಲಾಂಟ್ ವೀಕ್ಷಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಚನ್ನಾವಾರ, ಚಿಕ್ಕಬಾನಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಮಾರಭಘಟ್ಟ ಬಳಿ ಈಗಾಗಲೇ ಸೋಲಾರ್‌ ಪ್ಲಾಂಟ್‌ ನಿರ್ಮಾಣವಾಗಿದ್ದು ಇನ್ನೊಂದು ತಿಂಗಳಲ್ಲಿ ರಾಜ್ಯದಲ್ಲಿ ಏಕಕಾಲಕ್ಕೆ 500 ಮ್ಯಾಗಾ ವ್ಯಾಟ್‌ ಉತ್ಪಾದನೆಯ ಕಾಮಗಾರಿ ಪೂರ್ಣಗೊಂಡ ನಂತರ ಮುಖ್ಯಮಂತ್ರಿಗಳು ಈ ಯೋಜನೆಯನ್ನು ಉದ್ಘಾಟನೆ ಮಾಡಲಿದ್ದಾರೆ ಎಂದರು.

ರೈತರ ಬೇಡಿಕೆಗೆ ಅನುಗುಣವಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಿಂದ ಹಗಲು ವೇಳೆಯಲ್ಲಿಯೇ ಕೃಷಿ ಪಂಪ್‌ ಸೆಟ್‌ಗಳಿಗೆ ನಿರಂತರ 7 ಗಂಟೆ ವಿದ್ಯುತ್‌ ಸರಬರಾಜು ಮಾಡಲಾಗುವುದು. ಈ ಯೋಜನೆಗೆ ರಾಜ್ಯ ಸರ್ಕಾರ ಶೇ.50 ಹಾಗೂ ಕೇಂದ್ರ ಸರ್ಕಾರ ಶೇ.30 ರಷ್ಠು ಅನುದಾನ ನೀಡುತ್ತಿದೆ ಉಳಿದ ಶೇ.20 ರಷ್ಠು ಹಣವನ್ನು ರೈತರು ಭರಿಸಬೇಕು ಎಂದು ತಿಳಿಸಿದರು.

ಸರ್ಕಾರಿ ಜಾಗದಲ್ಲಿ ಸೋಲಾರ್‌ ಪ್ಲಾಂಟ್‌ ಅಳವಡಿಸುವ ಗುತ್ತಿಗೆದಾರರಿಗೆ ಎಕೆರೆಗೆ ವರ್ಷಕ್ಕೆ 25 ಸಾವಿರ ಹಣವನ್ನು ಸರ್ಕಾರ ಬಾಡಿಗೆ ರೂಪದಲ್ಲಿ ವಿಧಿಸಲಿದ್ದು ಈ ಹಣವನ್ನು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಇಟ್ಟು ಆಯಾ ವಿದ್ಯುತ್‌ ಸಬ್‌ ಸ್ಟೇಷನ್‌ ಇರುವ ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ದಿಗಾಗಿ ಬಳಸಲಾಗುವುದು ಎಂದರು.

ರಾಜ್ಯದಲ್ಲಿ 4 ಲಕ್ಷ ಅಕ್ರಮ ಕೃಷಿ ಪಂಪ್ ಸೆಟ್‌ಗಳ ರೈತರು ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 2 ಲಕ್ಷಕ್ಕೂ ಅಧಿಕ ಪಂಪ್ ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಬಾಕಿ ಉಳಿದಿರುವ ಪಂಪ್‌ಸೆಟ್‌ಗಳಿಗೆ ಶೀಘ್ರದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿ ಸಕ್ರಮಗೊಳಿಸುತ್ತಿವೆ . ಕೃಷಿ ಪಂಪ್‌ ಸೆಟ್ ಗಳು ವಿದ್ಯುತ್ ಮಾರ್ಗ ಜಾಲದಿಂದ 500 ಮೀಟರ್ ಒಳಗಿದ್ದರೆ, ಫೀಡರ್‌ನಿಂದ ವಿದ್ಯುತ್ ಸಂಪರ್ಕ ಮತ್ತು ಮೂಲಸೌಕರ್ಯ ಕಲ್ಪಿಸಲಾಗುವುದು. 500 ಮೀಟರ್‌ಗಿಂತ ದೂರಿವಿರುವ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಪಂಪ್‌ಸೆಟ್‌ಗಳನ್ನು ಕಲ್ಪಿಸಲಾಗುವುದು ಎಂದರು.

ಶಾಸಕ ಬಿಜಿ ಗೋವಿಂದಪ್ಪ ಮಾತನಾಡಿ, ತಾಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ಗ್ರಾಮ ಠಾಣಾ ವ್ಯಾಪ್ತಿಯಿಂದ ಹೊರಗಡೆ ಮನೆ ನಿರ್ಮಾಣ ಮಾಡಿಕೊಂಡಿದ್ದು ಅವುಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ವಿದ್ಯುತ್‌ ಮಾರ್ಗವಿಲ್ಲದೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಹೆಚ್ಚುವರಿ ವಿದ್ಯುತ್‌ ಮಾರ್ಗ ಕಲ್ಪಿಸಲು ಅನುಮತಿಯೊಂದಿಗೆ ಅನುದಾನ ನೀಡಬೇಕು ಹಾಗೆಯೇ ಭದ್ರಾ ಮೆಲ್ದಂಡೆ ಯೋಜನೆಯಲ್ಲಿ ನೀರು ಮೇಲೆತ್ತಲು ಹೆಚ್ಚುವರಿಯಾಗಿ 3 ಹೊಸ ಸಬ್‌ ಸ್ಟೇಷನ್‌ ಮಂಜೂರು ಮಾಡಿಕೊಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಸಚಿವರು ಸಬ್‌ ಸ್ಟೇಷನ್‌ ಮಾಡಲು ಭೂಮಿ ಮಂಜೂರು ಮಾಡಿಸಿ ನನಗೆ ಪ್ರಸ್ತಾವನೆ ಸಲ್ಲಿಸಿ ಕುಡಲೇ ಅದಕ್ಕೆ ಅನುಮೋದನೆ ಕೊಡಿಸುತ್ತೇನೆ ಎಂದರು.

ಈ ವೇಳೆ ಸಹಾಯಕ ಮುಖ್ಯ ಕಾರ್ಯದರ್ಶಿ ಗೌರವ್‌ಗುಪ್ತ, ಕೆಪಿಟಿಸಿಎಲ್ ಎಂ ಡಿ ಪಂಕಜ್ ಪಾಂಡೆ, ಬೆಸ್ಕಾಂ ಎಂಡಿ ಮಹಂತೇಶ್ ಬೀಳಗಿ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಸ್ಥಳೀಯ ಕಾಂಗ್ರೆಸ್ ಮುಖಂಡರು ,ಬೆಸ್ಕಾಂ ಅಧಿಕಾರಿಗಳು ಹಾಜರಿದ್ದರು.

ಕಾರ್ಯಕ್ರಮ ಉದ್ಘಾಟನೆಗೆ ಬಂದಿಲ್ಲ: ಜಾರ್ಜ್‌

ಸೋಲಾರ್‌ ಪ್ಲಾಂಟ್‌ ಉದ್ಘಾಟನೆಗೆ ವ್ಯವಸ್ಥೆ ಮಾಡಿಕೊಂಡಿದ್ದ ಬೆಸ್ಕಾಂ ಇಲಾಖೆ, ಕಾರ್ಯಕ್ರಮಕ್ಕೆ ವೇದಿಕೆ, ಕಾರ್ಯಕ್ರಮ ಉದ್ಘಾಟಿಸಲು ದೀಪ ಹಚ್ಚಲು ದೀಪದ ವ್ಯವಸ್ಥೆ ಎಲ್ಲವನ್ನು ಮಾಡಿಕೊಳ್ಳಲಾಗಿತ್ತು ಇದನ್ನು ಕಂಡ ಸಚಿವರು ಎಲ್ಲಿ ಮಾದ್ಯಮದವರು ಶೀಷ್ಠಾಚಾರ ಉಲ್ಲಂಘನೆ ಯಾಗಿದೆ ಎಂದು ಪ್ರಚಾರ ಮಾಡುತ್ತಾರೆ ಎಂದು ಅರಿತು ವೇದಿಕೆಗೆ ತೆರಳದೆ ವೇದಿಕೆಯ ಮುಂಬಾಗದಲ್ಲಿಯೇ ಈಗ ರಾಜ್ಯದಲ್ಲಿ ಶೋಕಾಚರಣೆ ಇರುವ ಕಾರಣ ಯಾವುದೇ ಕಾರ್ಯಕ್ರಮ ಮಾಡುವಂತಿಲ್ಲ. ನಾನು ಕಾರ್ಯಕ್ರಮ ಉದ್ಘಾಟನೆಗೆ ಬಂದಿಲ್ಲ ಕೇವಲ ವೀಕ್ಷಣಾಗಾಗಿ ಬಂದಿದ್ದೇನೆ. ಇನ್ನೊಂದು ತಿಂಗಳಲ್ಲಿ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳ ಈ ಯೋಜನೆಯನ್ನು ಉದ್ಘಾಟಿಸಲಿದ್ದಾರೆ ಎಂದು ಸಚಿವ ಜೆ.ಜೆ.ಜಾರ್ಜ್‌ ತಿಳಿಸಿದರು.

Share this article