ಗದಗ, ಬೆಟಗೇರಿಯಲ್ಲಿ 5162 ಕುಟುಂಬಗಳಿಲ್ಲ ಶೌಚಾಲಯ

KannadaprabhaNewsNetwork |  
Published : Jun 16, 2026, 02:15 AM IST
ನಗರಸಭೆಯ ವತಿಯಿಂದ 2016- 17ನೇ ಸಾಲಿನ ಸ್ವಚ್ಛ ಭಾರತ ಯೋಜನೆಯಲ್ಲಿ ವಾರ್ಡ್ ನಂಬರ್ 30ರಲ್ಲಿ ನಿರ್ಮಿಸಲಾದ ಸಮುದಾಯ ಶೌಚಾಲಯ ದುಸ್ಥಿತಿ. | Kannada Prabha

ಸಾರಾಂಶ

ನಗರಸಭೆಯ ದಾಖಲೆಗಳ ಪ್ರಕಾರ, ಗದಗ- ಬೆಟಗೇರಿ ಅವಳಿ ನಗರದಲ್ಲಿ ಒಟ್ಟು 44242 ಮನೆಗಳಿವೆ. ಇವುಗಳಲ್ಲಿ 39080 ಮನೆಗಳು ಮಾತ್ರ ವೈಯಕ್ತಿಕ ಶೌಚಾಲಯವನ್ನು ಹೊಂದಿವೆ. ಬರೋಬ್ಬರಿ 5162 ಕುಟುಂಬಗಳು ಸ್ವಂತ ಶೌಚಾಲಯದಿಂದ ವಂಚಿತವಾಗಿವೆ.

ಶಿವಕುಮಾರ ಕುಷ್ಟಗಿ

ಗದಗ: ಮನೆ ಮನೆಗೆ ಶೌಚಾಲಯ ನಿರ್ಮಿಸಿ, ಬಯಲು ಶೌಚ ಮುಕ್ತ ನಗರವನ್ನಾಗಿಸುತ್ತೇವೆ ಎನ್ನುವ ಸರ್ಕಾರದ ಗಿಳಿಪಾಠಗಳು ಗದಗ- ಬೆಟಗೇರಿ ಅವಳಿ ನಗರದ ಗಡಿಯೊಳಗೆ ಸಂಪೂರ್ಣವಾಗಿ ಹಳಿ ತಪ್ಪಿವೆ. ಆಧುನಿಕ ಜಗತ್ತಿನಲ್ಲಿ ಬದುಕುತ್ತಿದ್ದರೂ, ಇಂದಿಗೂ ಇಲ್ಲಿನ ಸಾವಿರಾರು ಕುಟುಂಬಗಳಿಗೆ ಒಂದು ವೈಯಕ್ತಿಕ ಶೌಚಾಲಯದ ಸೌಲಭ್ಯವೂ ಇಲ್ಲದಿರುವುದು ಇಡೀ ವ್ಯವಸ್ಥೆಯೇ ತಲೆತಗ್ಗಿಸುವಂತೆ ಮಾಡಿದೆ.

​ನಗರಸಭೆಯ ದಾಖಲೆಗಳ ಪ್ರಕಾರ, ಗದಗ- ಬೆಟಗೇರಿ ಅವಳಿ ನಗರದಲ್ಲಿ ಒಟ್ಟು 44242 ಮನೆಗಳಿವೆ. ಇವುಗಳಲ್ಲಿ 39080 ಮನೆಗಳು ಮಾತ್ರ ವೈಯಕ್ತಿಕ ಶೌಚಾಲಯವನ್ನು ಹೊಂದಿವೆ. ಬರೋಬ್ಬರಿ 5162 ಕುಟುಂಬಗಳು ಸ್ವಂತ ಶೌಚಾಲಯದಿಂದ ವಂಚಿತವಾಗಿವೆ.

49 ಸಮುದಾಯ ಶೌಚಾಲಯ: ಪ್ರಸ್ತುತ ಅವಳಿ ನಗರದಲ್ಲಿ 5 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಶೌಚಾಲಯಗಳೇ ಇಲ್ಲ. ಇವರೆಲ್ಲರೂ ಇಂದಿಗೂ ನಂಬಿಕೊಂಡಿರುವುದು ಅವಳಿ ನಗರದಲ್ಲಿರುವ 49 ಸಮುದಾಯ ಶೌಚಾಲಯಗಳನ್ನು. ಆದರೆ, ಅವುಗಳತ್ತ ಸಾರ್ವಜನಿಕರು ಸುಳಿಯದಂಥ ಸ್ಥಿತಿಯಲ್ಲಿವೆ.

​20 ದಿನಗಳಿಗೊಮ್ಮೆ ನೀರು: ​ಅವಳಿ ನಗರದ ಇನ್ನೊಂದು ಗಂಭೀರ ಸಮಸ್ಯೆ ಎಂದರೆ ಕುಡಿಯುವ ನೀರು ಪೂರೈಕೆ. ಮಳೆಗಾಲದಲ್ಲಿಯೇ ಅವಳಿ ನಗರದಲ್ಲಿ 20 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದ್ದು, ಇದು ಕೂಡಾ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ ತೀರಾ ಸಂಕಷ್ಟವನ್ನು ತಂದಿಟ್ಟಿವೆ. ಕುಡಿಯಲು ಮತ್ತು ಅಡುಗೆ ಮಾಡಿಕೊಳ್ಳಲು ನೀರನ್ನು ಕಾಯ್ದಿರಿಸುವುದೇ ಇಲ್ಲಿನ ಗೃಹಿಣಿಯರಿಗೆ ಪ್ರತಿದಿನ ಯುದ್ಧ ಗೆದ್ದಂತಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಶೌಚಾಲಯದ ಬಳಕೆಗೆ ನೀರನ್ನು ಎಲ್ಲಿಂದ ತರಬೇಕು ಎನ್ನುವುದು ಜನರ ಯಕ್ಷಪ್ರಶ್ನೆ. ನೀರಿನ ತೀವ್ರ ಕೊರತೆಯಿಂದಾಗಿ ಸಮುದಾಯ ಶೌಚಾಲಯಗಳು ನೈರ್ಮಲ್ಯ ಕಳೆದುಕೊಂಡು, ರೋಗರುಜಿನಗಳ ತಾಣವಾಗಿ ಮಾರ್ಪಟ್ಟಿವೆ.

ದೂರದ ಅಲೆದಾಟ: ​ನಗರದ ಹೃದಯಭಾಗದಲ್ಲಿ ಹಾಗೂ ಹಳೆಯ ಬಡಾವಣೆಗಳಲ್ಲಿ ವಾಸಿಸುವ ಬಡವರು ಮತ್ತು ಮಧ್ಯಮ ವರ್ಗದ ಜನರ ಪರಿಸ್ಥಿತಿ ಅತ್ಯಂತ ದಯನೀಯವಾಗಿದೆ. ಇಕ್ಕಟ್ಟಾದ ಓಣಿಗಳಲ್ಲಿ, ಸಣ್ಣ ಸಣ್ಣ ಜಾಗದಲ್ಲಿ ಮನೆಗಳಿರುವುದರಿಂದ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಜಾಗವೇ ಇಲ್ಲದಂತಾಗಿದೆ. ನಗರದ ಪ್ರಮುಖ ವಾಣಿಜ್ಯ ಮತ್ತು ವಸತಿ ಪ್ರದೇಶಗಳಲ್ಲಿರುವ ಸಾರ್ವಜನಿಕರು ಶೌಚಾಲಯಕ್ಕಾಗಿ ಕಿಲೋಮೀಟರ್‌ಗಟ್ಟಲೆ ದೂರ ನಡೆದುಕೊಂಡು ಹೋಗಬೇಕಾದ ದುಸ್ಥಿತಿ ಇದೆ. ವೃದ್ಧರು, ಗರ್ಭಿಣಿಯರ ಸ್ಥಿತಿಯಂತೂ ಹೇಳತೀರದಾಗಿದೆ.

ಪಾಳು ಬಿದ್ದಿವೆ: ​ವೈಯಕ್ತಿಕ ಶೌಚಾಲಯ ಇಲ್ಲದ ಬಡವರಿಗೆ ಆಸರೆಯಾಗಬೇಕಿದ್ದ 49 ಸಮುದಾಯ ಶೌಚಾಲಯಗಳ ನಿರ್ವಹಣೆಯಲ್ಲಿ ನಗರಸಭೆ ಸಂಪೂರ್ಣವಾಗಿ ವಿಫಲವಾಗಿದೆ. ನಿಯಮಿತ ಸ್ವಚ್ಛತೆ ಇಲ್ಲದೆ, ದುರ್ನಾತ ತಡೆಯಲಾರದೆ ಅವುಗಳ ಬಳಕೆಯೇ ನಿಂತು ಹೋಗಿದೆ. ಸಮಸ್ಯೆಯನ್ನು ಬಗೆಹರಿಸಬೇಕಾದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನರು ನಿತ್ಯವೂ ಶೌಚಕ್ಕಾಗಿಯೇ ಅವಳಿ ನಗರದಲ್ಲಿ ಪರದಾಡುತ್ತಿದ್ದಾರೆ.20 ದಿನಕ್ಕೊಮ್ಮೆ ನೀರು ಕೊಡ್ತಾರೆ

ಸ್ವಚ್ಛ ಭಾರತ ಎಂದು ಪ್ರಚಾರ ಮಾಡುವ ಮುನ್ನ ನಮ್ಮ ನಗರಕ್ಕೆ ಬಂದು ನೋಡಿ. 20 ದಿನಕ್ಕೊಮ್ಮೆ ನೀರು ಕೊಡ್ತಾರೆ, ಅದರಲ್ಲಿ ಶೌಚಾಲಯಕ್ಕೆ ನೀರು ಎಲ್ಲಿಂದ ತರಬೇಕು. ಸಮುದಾಯ ಶೌಚಾಲಯಗಳಿಗೂ ನಿರ್ವಹಣೆ ಇಲ್ಲದೇ ಪಾಳು ಬಿದ್ದಿವೆ, ಕೆಲವು ಕಡೆಗಳಲ್ಲಿ ಬೀಗ ಹಾಕಿದ್ದಾರೆ. ಮಹಿಳೆಯರು ಮತ್ತು ಹೆಣ್ಣುಮಕ್ಕಳು ಕತ್ತಲಾಗುವವರೆಗೆ ಕಾಯಬೇಕು ಅಥವಾ ಬಯಲು ಪ್ರದೇಶ ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿ ಎನ್ನುತ್ತಾರೆ ಮಹಿಳೆಯರು. ​ವೈಯಕ್ತಿಕ ಶೌಚಾಲಯ ಪ್ರತಿಯೊಬ್ಬ ನಾಗರಿಕನ ಮೂಲಭೂತ ಮತ್ತು ಘನತೆಯ ಹಕ್ಕು. ಗದಗ- ಬೆಟಗೇರಿ ಅವಳಿ ನಗರದ 5162 ಕುಟುಂಬಗಳು ಎದುರಿಸುತ್ತಿರುವ ಶೌಚಾಲಯ ಸಮಸ್ಯೆಗಳಿಗೆ ಜಿಲ್ಲಾಡಳಿತ ಮತ್ತು ನಗರಸಭೆ ತಕ್ಷಣವೇ ಮುಕ್ತಿ ನೀಡಬೇಕಿದೆ. ಇಕ್ಕಟ್ಟಾದ ಪ್ರದೇಶಗಳಲ್ಲಿ ವಾಸಿಸುವ ಬಡವರಿಗಾಗಿ ಆಧುನಿಕ ಮಾದರಿಯ ಶೌಚಾಲಯಗಳನ್ನು ನಿರ್ಮಿಸಬೇಕು ಎಂದು ಯುವ ಮುಖಂಡ ವಸಂತ ಪಡಗದ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿಕಾರಿಗಳ ಜನವಿರೋಧಿ ನೀತಿ ವಿರುದ್ಧ ಬಿಜೆಪಿ ಪ್ರತಿಭಟನೆ
ಜಲದುರಂತದಲ್ಲಿ ಮೃತಪಟ್ಟವರ ಮನೆಗಳಿಗೆ ಬ್ರಹ್ಮಾನಂದ ಸರಸ್ವತಿ ಶ್ರೀ ಭೇಟಿ