ಆದಿಚುಂಚನಗಿರಿ ಮಠ ಜಗತ್ತಿಗೆ ಮಾದರಿಯಾಗಿದೆ

KannadaprabhaNewsNetwork |  
Published : Jul 11, 2025, 11:48 PM IST
57 | Kannada Prabha

ಸಾರಾಂಶ

ಮಠವು ವಿಶ್ವದ ಎಲ್ಲ ಮೂಲೆಗಳಲ್ಲಿಯೂ ಶಾಖಾ ಮಠ ತೆರೆಯುವ ಕೆಲಸ ಮಾಡುತ್ತಿರುವುದು ಒಕ್ಕಲಿಗ ಸಮಾಜ ಹೆಮ್ಮೆಪಡುವ ವಿಚಾರ.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಅನ್ನ ದಾಸೋಹ, ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ಜನ ಸೇವೆಯಿಂದ ಆದಿ ಚುಂಚನಗಿರಿ ಮಠ ಜಗತ್ತಿಗೆ ಮಾದರಿಯಾಗಿದೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಹೇಳಿದರು.

ಪಟ್ಟಣದ ಎಚ್.ಡಿ. ದೇವೇಗೌಡ ಸಮುದಾಯ ಭವನದಲ್ಲಿ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ನಡೆದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರೀ ಮಠವು ವಿಶ್ವದ ಎಲ್ಲ ಮೂಲೆಗಳಲ್ಲಿಯೂ ಶಾಖಾ ಮಠ ತೆರೆಯುವ ಕೆಲಸ ಮಾಡುತ್ತಿರುವುದು ಒಕ್ಕಲಿಗ ಸಮಾಜ ಹೆಮ್ಮೆಪಡುವ ವಿಚಾರ. ನಾಡಪ್ರಭು ಕೆಂಪೇಗೌಡ ಅವರು ಸುಂದರ ಬೆಂಗಳೂರು ನಗರ ನಿರ್ಮಿಸುವ ಜತೆಗೆ ಸುತ್ತಮುತ್ತ ಕೆರೆ ಕಟ್ಟೆಗಳನ್ನು ಕಟ್ಟಿ ಅವುಗಳ ಜೀರ್ಣೋದ್ದಾರ ಮಾಡುವ ಮೂಲಕ ಜಲ ಕ್ರಾಂತಿ ಮಾಡಿದ್ದು, ರೈತರು ಮತ್ತು ಜನರಿಗೆ ಕುಡಿಯುವ ನೀರು ಮತ್ತು ವ್ಯವಸಾಯಕ್ಕೆ ಅನೂಕೂಲ ಕಲ್ಪಿಸಿ ಜಾತ್ಯತೀತವಾಗಿ ಎಲ್ಲ ಸಮುದಾಯವನ್ನು ಸಂಘಟಿಸುವ ಕೆಲಸವನ್ನು ಮಾಡಿದ್ದರು ಎಂದು ಅವರು ಸ್ಮರಿಸಿದರು.

ಕೆಂಪೇಗೌಡರ ನಂತರ ಕೆರೆ ಕಟ್ಟೆಗಳ ಅಭಿವೃದ್ಧಿಯೊಂದಿಗೆ ಕಾಲುವೆಗಳನ್ನು ತೆಗೆಸುವ ಮೂಲಕ ರೈತರಿಗೆ ಮತ್ತು ಜನರಿಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದ ನಾಯಕರಿದ್ದರೆ ಮಾಜಿ ಪ್ರಧಾನ ಮಂತ್ರಿಗಳಾದ ಎಚ್. ಡಿ. ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಎಂದು ತಿಳಿಸಿದರು.

ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ನೀಡುವ ಮೂಲಕ ನೀರಾವರಿ, ರಸ್ತೆ, ವಿದ್ಯುತ್ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಹಕಾರ ನೀಡಿ ಏತ ನೀರಾವರಿ ಅನುಷ್ಠಾನ ಹಾಗೂ ಕೆರೆ ಕಟ್ಟೆಗಳ ಆಧುನೀಕರಣ ದೇವಾಲಯಗಳ ಅಭಿವೃದ್ಧಿ ಸಮುದಾಯ ಭವನಗಳ ನಿರ್ಮಾಣ ಮಾಡಲು ಸಹಕಾರ ನೀಡಿದರೆಂದು ಶ್ಲಾಘಿಸಿದರು.

ಮುಂಡಿಗನಹಳ್ಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಅನುಕೂಲಕ್ಕಾಗಿ 24 ಕೋಟಿಗಳ ಅನುದಾನವನ್ನು ತಂದು ಕೆರೆಗಳ ಹೂಳು ತೆಗೆಯುವುದರೊಂದಿಗೆ ಏತ ನೀರಾವರಿಯ ಮೂಲಕ ಕೆರೆಗೆ ನೀರು ತುಂಬಿಸಿ ಈ ಭಾಗದ ನಾಲ್ಕೈದು ಗ್ರಾಮಗಳಿಗೆ ಅನುಕೂಲವಾಗಲೆಂದು ಅನುದಾನವನ್ನು ಮೀಸಲಿಟ್ಟು ನಾನು ಶಾಸಕನಾಗಿದ್ದಾಗ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು, ಆದರೆ ಈಗಿನ ಸರ್ಕಾರ ಹಾಗೂ ಶಾಸಕರು ಕಾಮಗಾರಿ ಸ್ಥಳಾಂತರ ಮಾಡಿಸುತ್ತಿದ್ದು, ಈ ಬಗ್ಗೆ ಒಕ್ಕಲಿಗ ಸಮುದಾಯದ ಕಾಂಗ್ರೆಸ್ ಮುಖಂಡರು ಸೇರಿದಂತೆ ಆ ಗ್ರಾಮದ ಸುತ್ತಮುತ್ತಲಿನ ಜನರು ಪ್ರಶ್ನಿಸುವಂತೆ ತಿಳಿಸಿದರು.

ಕೆಂಪೇಗೌಡರ ಸಾಧನೆ ವಿಶ್ವಕ್ಕೆ ಮಾದರಿ

ಸಾನ್ನಿಧ್ಯ ವಹಿಸಿದ್ದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಒಕ್ಕಲಿಗ ಸಮುದಾಯದ ಕೆಂಪೇಗೌಡರ ಸಾಧನೆ ಮತ್ತು ಸಮಾಜಮುಖಿ ಕೆಲಸಗಳು ವಿಶ್ವಕ್ಕೆ ಮಾದರಿಯಾಗಿದ್ದು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸ್ವಂತ ಭೂಮಿಯನ್ನೇ ನೀಡುವ ಮೂಲಕ ಬೆಂಗಳೂರು ನಗರ ನಿರ್ಮಾಣ ಮಾಡಿದ ಅವರ ಕೆಲಸ ಅಜರಾಮರ ಎಂದರು. ನಾಡಪ್ರಭುಗಳ ನಂತರ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯ, ಕೆ.ಸಿ. ರೆಡ್ಡಿ ರಾಜ್ಯದ ಅಭಿವೃದ್ಧಿಪರ ಕೆಲಸ ಮಾಡಿ ಜನ ಸಾಮಾನ್ಯರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಗಳಿಸಿದ್ದು. ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋದ ಮಾಜಿ ಪ್ರಧಾನಮಂತ್ರಿಗಳಾದ ಎಚ್.ಡಿ. ದೇವೇಗೌಡ, ದಿವಂಗತ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಜನ ಮೆಚ್ಚುವ ಕೆಲಸ ಮಾಡಿದರು ಎಂದರು.

ಸಮುದಾಯ ಭವನದ ಮುಂದೆ ನೂತನವಾಗಿ ನಿರ್ಮಿಸಿರುವ ಗಣಪತಿ ದೇವಾಲಯ ಉದ್ಘಾಟಿಸಿ, ಬಾಲಗಂಗಾದರನಾಥ ಶ್ರೀಗಳ ಕಂಚಿನ ಪುತ್ಥಳಿ ಅನಾವರಣ ಮಾಡಲಾಯಿತು.

ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ನವನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ. ಎನ್. ಬಸಂತ್ ನಂಜಪ್ಪ, ಮೈಸೂರಿನ ಸುಯೋಗ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ, ಜಿಲ್ಲಾ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಎಸ್.ಪಿ. ತಮ್ಮಯ್ಯ, ತಾಲೂಕು ಸಂಘದ ಗೌರವಾಧ್ಯಕ್ಷ ಮಿರ್ಲೆಅಣ್ಣೇಗೌಡ, ಕಾರ್ಯಾಧ್ಯಕ್ಷ ಹೊಸಹಳ್ಳಿವೆಂಕಟೇಶ್, ಅಧ್ಯಕ್ಷ ಶಿವರಾಮು, ಉಪಾಧ್ಯಕ್ಷ ಎ. ಕುಚೇಲ, ಕಾರ್ಯದರ್ಶಿ ಸಿ.ಎಸ್. ರಾಮಲಿಂಗು, ನಿರ್ದೇಶಕರಾದ ಮಂಜುಗೌಡ, ರಾಧಾಕೃಷ್ಣ, ತಿಮ್ಮೇಗೌಡ, ಪ್ರಕಾಶ್, ಸಂತೋಷ್ ಗೌಡ, ಕೇಶವ, ಮಂಜುನಾಥ್, ಅನಿಲ್ ಗೌಡ, ನಂಜುಂಡೇಗೌಡ, ನರೇಂದ್ರ ಸಂಪತ್ ಕುಮಾರ್, ಒಕ್ಕಲಿಗ ಸಮಾಜದ ಮುಖಂಡರಾದ ಶ್ರುತಿ ಸುರೇಶ್, ಚಿಕ್ಕನಾಯಕನಹಳ್ಳಿ ಸುರೇಶ್, ಎಂ.ಎಸ್. ಹರಿಚಿದಂಬರ,

ರಮೇಶ್, ರಾಜು, ಮಂಜು, ಕಿ.ಜಿ. ಸುಬ್ರಹ್ಮಣ್ಯ, ಶಂಭು, ಎ. ತಿಮ್ಮಪ್ಪ, ಡಿ.ಆರ್. ರಮೇಶ್ ಇದ್ದರು.

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ