ಕನ್ನಡಪ್ರಭ ವಾರ್ತೆ ಹೊಸದುರ್ಗ
ಗುರುವಿನ ಮಾರ್ಗದರ್ಶನದಲ್ಲಿ ನಡೆದಾಗ ವಿನಯತೆ, ವಿನಮ್ರತೆ ಆಧ್ಯಾತ್ಮದ ಅನುಭೂತಿ ಪ್ರಾಪ್ತವಾಗುತ್ತದೆ ಎಂದು ಕುಂಚಿಟಗ ಮಠದ ಶಾಂತವೀರ ಸ್ವಾಮೀಜಿ ಹೇಳಿದರು.ಪಟ್ಟಣದ ಕುಂಚಗಿರಿಯಲ್ಲಿರುವ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಗುರುವಾರ ಸಂಜೆ ನಡೆದ ಸುಜ್ಞಾನ ಸಂಗಮ ಹಾಗೂ ಗುರು ಪೂರ್ಣಿಮಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಗುರು ಎಂದರೆ ಬೆಳಕು ಕರುಣೆ ದಯೆ ದಾರಿದೀಪ. ಗುರುವನ್ನು ಪರಿಪೂರ್ಣವಾಗಿ ನಂಬಿದವನಿಗೆ ಗುರುತ್ವದ ಅನುಭೂತಿ ಲಭಿಸಲು ಪ್ರಾರಂಭವಾಗಿರುತ್ತದೆ ಗುರುವನ್ನು ಲೌಕಿಕವಾಗಿ ನೋಡದೆ ಅಲೌಕಿಕವಾಗಿ ನೋಡಿದಾಗ ಗುರುವಿನ ನಿಜ ಸ್ವರೂಪ ಪ್ರಾಪ್ತವಾಗುತ್ತದೆ. ಬದುಕಿನ ಪರಿಪೂರ್ಣತೆಗೆ ಗುರುವಿನ ಮಾರ್ಗದರ್ಶನ ಅತ್ಯಮೂಲ್ಯ. ಮಾಂಸ ಪಿಂಡವನ್ನು ಮಂತ್ರಪಿಂಡವಾಗಿಸುವ ಶಕ್ತಿ ಇರುವುದು ಗುರುವಿಗೆ ಮಾತ್ರ. ನರಕದಿಂದ ಸ್ವರ್ಗಕ್ಕೆ ದಾರಿ ತೋರಿಸುವ ದಯಾಮಹಿ ಗುರು ಹಾಗಾಗಿ ಗುರುವನ್ನು ದೇವರನ್ನು ಅತ್ಯಂತ ಸದಾ ಭಕ್ತಿಯಿಂದ ಆರಾಧಿಸಿ ಕೇವಲ ಗುರುಪೂರ್ಣಿಮೆ ಎಂದು ಗುರುವನ್ನು ನೆನೆದು ವರ್ಷವಿಡಿ ಗುರುವಿನಿಂದ ದೂರ ಇರುವುದು ತರವಲ್ಲ ಗುರುವೆಂದರೆ ಪ್ರತಿನಿತ್ಯ ಪ್ರತಿಕ್ಷಣ ನೆನೆದು ಅವರು ತೋರಿದ ಪಥದಲ್ಲಿ ಬದುಕನ್ನು ಆನಂದಮಯವಾಗಿ ನಡೆಸಲು ಪ್ರಯತ್ನಿಸಿ ಎಂದರು.ಗುರುವನ್ನು ಒಂದು ಜಾತಿಗೆ ಸೀಮಿತಗೊಳಿಸಬೇಡಿ ಕಾವಿ ದರಿಸಿದ ಮೇಲೆ ಕುಲ ಜಾತಿಗಳನ್ನು ಮೀರಿ ಬೆಳಕಿನಂತೆ ಗುರುವಿರಬೇಕು ಜಾತಿಯಲ್ಲಿ ಜನನ ಪಡೆದಿರುವ ಕಾರಣಕ್ಕೆ ಜಾತಿಗೆ ಸೀಮಿತಗೊಳಿಸಬೇಡಿ ಜಾತ್ಯತೀತವಾಗಿ ಎಲ್ಲರನ್ನೂ ಸಮಾನವಾಗಿ ಕಾಣುವ ಗುರುವನ್ನು ಹಾಗೆ ಸಾಗಲು ಬಿಡಿ ಜಾತಿಯ ಸಂಕೋಲೆಗೆ ಕಟ್ಟು ಹಾಕಬೇಡಿ ಎಂದರು.
ಜಿಪಂ ಮಾಜಿ ಸದಸ್ಯ ದ್ಯಾಮಣ್ಣ ಮಾತನಾಡಿ, ನಮ್ಮ ಗುರುಗಳು ತಂದೆಯ ಸ್ಥಾನದಲ್ಲಿ ನಿಂತು ಸಮಾಜ ಹಾಗೂ ನಮ್ಮನ್ನು ತಿದ್ದುವ ಅಭಿವೃದ್ಧಿ ಪಡಿಸುವ ಕಾಯಕವೇ ಕೈಲಾಸ ಎಂಬ ಮಂತ್ರವನ್ನು ಪಾಲಿಸುವ ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ವಚನದಂತೆ ಯಾರೂ ತನ್ನ ಬಳಿ ಶರಣಾಗಿ ಬರುತ್ತಾರೆ ಅವರಿಗೆ ವಿನಯತೆಯಿಂದ ಅವರ ಸಂಕಷ್ಟಗಳಿಗೆ ಸ್ಪಂದಿಸುವ ಸದ್ಗುರುಗಳು ನಮ್ಮ ಶಾಂತವೀರ ಶ್ರೀಗಳು ಎಂದು ನುಡಿದರು.ಕಾರ್ಯದರ್ಶಿ ತಣಿಗೆಕಲ್ಲು ಲೋಕಣ್ಣ ಮಾತನಾಡಿ, ಗುರುವಿಲ್ಲದ ಸಮಾಜಕ್ಕೆ ಗುರು ಸ್ಥಾನವನ್ನು ನೀಡಿ ದಾರಿ ಕಾಣದ ಸಮಾಜಕ್ಕೆ ದಾರಿದೀಪವಾಗಿ ಅಂಗೈಯಗಲ ಜಾಗವಿಲ್ಲದ ಸಮಾಜಕ್ಕೆ ಜಮೀನು ಮಾಡಿ ಹತ್ತಾರು ಕಟ್ಟಡ ಕಟ್ಟುವ ಮೂಲಕ ಸಮಾಜವನ್ನು ಆರ್ಥಿಕ ಸಬಲೀಕರಣ ಮಾಡುವ ಅವರ ಛಲ ಸಮಾಜದ ಯುವಕರಿಗೆ ಮಾದರಿಯಾಗಬೇಕು ಶ್ರದ್ಧೆಯಿಂದ ಪ್ರಯತ್ನ ಪಟ್ಟರೆ ಶೂನ್ಯದಿಂದ ಸಾಧಿಸಬಹುದು ಎಂಬುದಕ್ಕೆ ನಮ್ಮ ಕಾಯಕಯೋಗಿ ಶಾಂತವೀರ ಶ್ರೀಗಳ ಉದಾಹರಣೆ ಎಂದು ಹೇಳಿದರು. ಹೊಸದುರ್ಗ ಬಿಜೆಪಿ ಮಂಡಲ ಅಧ್ಯಕ್ಷ ಅಣ್ಣಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾರಂಭದಲ್ಲಿ ಕೋಡಿಹಳ್ಳಿ ದರಣಪ್ಪ, ತಮ್ಮಣ್ಣ, ಕಲ್ಕೆರೆ ಶೇಖರಪ್ಪ, ಕನಕ ವಿದ್ಯಾಸಂಸ್ಥೆಯ ಕೃಷ್ಣಮೂರ್ತಿ, ಸಪ್ತಗಿರಿ ಗುರು, ದಾವಣಗೆರೆಯ ಹನುಮಪ್ಪ, ಹಿರಿಯೂರಿನ ರೇವಣಸಿದ್ದಪ್ಪ, ತಣಿಗೆಕಲ್ಲು ತಿಪ್ಪೇಸ್ವಾಮಿ, ಗೂಳಿಹಟ್ಟಿ ಹಾಲಸಿದ್ದಪ್ಪ, ಸಿದ್ದಪ್ಪ ರಾಮಪ್ಪ, ದೊಡ್ಡಘಟ್ಟದ ಮಾಂತೇಶ್, ಸಂಗಮ್ ಮಹೇಶ್, ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸ್ ಸೇರಿದಂತೆ ಕುಂಚಶ್ರೀ ಮಹಿಳಾ ಸಂಘದ ಪದಾಧಿಕಾರಿಗಳು. ಸಂಗಮೇಶ್ವರ ಯುವ ವೇದಿಕೆಯ ಪದಾಧಿಕಾರಿಗಳು. ಸಂಗಮೇಶ್ವರ ಸಮುದಾಯ ಭವನದ ಪದಾಧಿಕಾರಿಗಳು. ಶಾಂತವೀರಶ್ರೀ ಸೌಹಾರ್ದ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳು ಶ್ರೀಮಠದ ಅಪಾರ ಭಕ್ತರು ಭಾಗವಹಿಸಿದ್ದರು.