ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ತೊಂದರೆ: ಪ್ರತಿಭಟನೆ

KannadaprabhaNewsNetwork |  
Published : Jul 11, 2025, 11:48 PM IST
ಫೋಟೋ 11ಪಿವಿಡಿ1 11ಪಿವಿಡಿ2ಆರ್‌ಟಿಐ ಹಾಗೂ ಭ್ರಷ್ಟಚಾರ ನಿಗ್ರಹದ ಹೆಸರಿನಲ್ಲಿ ಕೆಲವರು ಕಚೇರಿಗಳಿಗೆ ಪ್ರವೇಶಿಸಿ,ಪುರುಷ ಹಾಗೂ ಮಹಿಳಾ ನೌಕರರನ್ನು ಗುರಿಯಾಗಿಸಿಕೊಂಡು ವಿಡೀಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹರಿಬಿಡುವ ಪದ್ಧತಿಯ ವಿರುದ್ಧ ಸೂಕ್ತ ಕ್ರಮ ಜರಿಗಿಸುವಂತೆ ಒತ್ತಾಯಿಸಿ ತಹಸೀಲ್ದಾರ್‌ ವರದರಾಜುರವರಿಗೆ ಮನವಿ ಪತ್ರ ಸಲ್ಲಿಸಲಾಯಿತು. | Kannada Prabha

ಸಾರಾಂಶ

ತಾಲೂಕು ಸರ್ಕಾರಿ ನೌಕರರ ಸಂಘ ಹಾಗೂ ಕಂದಾಯ ಇಲಾಖೆಯ ಸಂಘದ ನೌಕರರು ಪಟ್ಟಣದ ತಾಲೂಕು ಕಚೇರಿಯ ಬಳಿ ಪ್ರತಿಭಟನೆ ನಡೆಸಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್‌ ಡಿ.ಎನ್‌.ವರದರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಮಾಹಿತಿ ಹಕ್ಕು ಕಾರ್ಯಕರ್ತರು, ಭ್ರಷ್ಟಾಚಾರ ನಿಗ್ರಹದ ಹೆಸರಿನಲ್ಲಿ ಕಚೇರಿಗಳಿಗೆ ಪ್ರವೇಶಿಸಿ, ಮೊಬೈಲ್‌ನಲ್ಲಿ ವಿಡಿಯೋ ಲೈವ್‌ ಮಾಡುವ ಮೂಲಕ ಫೇಸ್ ಬುಕ್ ಮತ್ತು ಯುಟ್ಯೂಬ್ ಸೇರಿದಂತೆ ಇತರೇ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡುವುದರಿಂದ ಸರ್ಕಾರಿ ಮಹಿಳಾ ನೌಕರರಿಗೆ ತೀವ್ರ ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಿ ಶುಕ್ರವಾರ ತಾಲೂಕು ಸರ್ಕಾರಿ ನೌಕರರ ಸಂಘ ಹಾಗೂ ಕಂದಾಯ ಇಲಾಖೆಯ ಸಂಘದ ನೌಕರರು ಪಟ್ಟಣದ ತಾಲೂಕು ಕಚೇರಿಯ ಬಳಿ ಪ್ರತಿಭಟನೆ ನಡೆಸಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್‌ ಡಿ.ಎನ್‌.ವರದರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಪ್ರತಿಭಟನೆ ನೇತೃತ್ವ ವಹಿಸಿದ್ದ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್‌.ವಿ.ರವಿಕುಮಾರ್ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ವಿಡಿಯೋ ಮಾಡುವುದಕ್ಕೆ ಸರ್ಕಾರ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದ್ದು, ಈ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಆರ್‌ಟಿಐ ಕಾರ್ಯಕರ್ತರು ಹಾಗೂ ಭ್ರಷ್ಟಚಾರ ನಿಗ್ರಹದ ಹೆಸರಿನಲ್ಲಿ ಕೆಲವರು ಸುಖಾ ಸುಮ್ಮನೆ ತಮ್ಮದಲ್ಲದ ಕೆಲಸಗಳಿಗೆ ಭೇಟಿ ನೀಡಿ ವಿಡಿಯೋ ಕವರೇಜ್‌ ಮಾಡಿ ಸಾಮಾಜಿಕ ಲೈವ್‌ ಮಾಡಿ ಸಾಮಾಜಿಕ ಜಾಲ ಲೈವ್ ಮಾಡಿ ಹರಿಬಿಡುವ ಪರಿಣಾಮ ನೌಕರರಿಗೆ ಸರ್ಕಾರಿ ಕೆಲಸ ಮಾಡಲು ಬಿಡುತ್ತಿಲ್ಲ ಅರೋಪಿಸಿದರು.

ಕಂದಾಯ ಇಲಾಖೆಯ ಮಹಿಳಾ ನೌಕರರು ಅಳಲು ತೋಡಿಕೊಂಡು ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ಮಹಿಳಾ ನೌಕರರು ಕರ್ತವ್ಯ ನಿರ್ವಹಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕಡತಗಳ ಬಗ್ಗೆ ವಿಚಾರಿಸುವ ನೆಪದಲ್ಲಿ ಮಹಿಳಾ ನೌಕರರ ಉಡುಗೆ-ತೊಡುಗೆಯನ್ನು ಕೇಂದ್ರಿಕರಿಸಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡುವುದಾಗಿ ಹೆದರಿಸುತ್ತಿದ್ದಾರೆ. ಮಹಿಳಾ ನೌಕರರಿಂದ ಹಣಕ್ಕೆ ಬೇಡಿಕೆಯಿಡುವ ಪರಿಪಾಠ ರೂಢಿಸಿಕೊಂಡಿದ್ದು ಅವರಿಗೆ ಬೇಕಾದ ರೀತಿ ಕಡತಗಳನ್ನು ಸಿದ್ಧಡಿಸುವಂತೆ ಒತ್ತಡ ಹೇರಿ ಬ್ಲಾಕ್ ಮೇಲ್ ಮಾಡುತ್ತಾರೆ. ಮಹಿಳಾ ನೌಕರರು ಮಾನಸಿಕವಾಗಿ ಹಿಂಸೆ ಎದುರಿಸುವಂತಾಗಿದೆ. ಮಹಿಳಾ ನೌಕರರು ಕಚೇರಿಗಳಲ್ಲಿ ಮುಜುಗರಕ್ಕೀಡಾಗಿದ್ದು, ಸರ್ಕಾರಿ ಕಚೇರಿಗಳಲ್ಲಿನ ವಿಡಿಯೋ ಮಾಡುವ ಬಗ್ಗೆ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಬರುವ ಸಂಬಂಧ ಸರ್ಕಾರದ ಹಂತದಲ್ಲಿ ಕೆಲ ಮಾರ್ಪಾಡುಗಳನ್ನು ತರುಬೇಕು. ದುರುದ್ದೇಷ ಪೂರ್ವಕವಾಗಿ ಈ ರೀತಿ ವಿನಾಕಾರಣ ವಿಡಿಯೋ ಮಾಡುವವರ ಮೇಲೆ ಸೂಕ್ತ ಕಾನೂನಿನ ಕ್ರಮ ತೆಗೆದುಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಬಳಿಕ ತಹಸೀಲ್ದಾರ್‌ ಮಾತನಾಡಿ, ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳಿಗೆ ಈ ಕೂಡಲೇ ವರದಿ ಸಲ್ಲಿಸುವುದಾಗಿ ಹೇಳಿದರು.

ಇದೇ ವೇಳೆ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷರಾದ ಕಿರಣ್‌ಕುಮಾರ್‌, ಆರ್‌ಐ ರಾಜ್‌ಗೋಪಾಲ್‌, ನಾರಾಯಣಪ್ಪ, ಗಿರೀಶ್‌, ರವಿಕುಮಾರ್‌, ಎಂ.ಎಲ್‌.ಮಾರುತೇಶ್, ಶೇಖರಬಾಬು ಗಂಗಾಧರ್‌, ಕೆ.ರಾಮಾಂಜನೇಯ, ರವಿಪ್ರಕಾಶ್,ಮುಕ್ತಿಯಾರ್ , ಪದ್ಮಾವತಿ, ಸುನಂದ, ಸುಗುಣ, ಇತರರಿದ್ದರು.

-------------------------

ಫೋಟೋ : ಭ್ರಷ್ಟಾಚಾರ ನಿಗ್ರಹದ ಹೆಸರಿನಲ್ಲಿ ಸರ್ಕಾರಿ ನೌಕರರ ವಿಡಿಯೋ ಮಾಡುತ್ತಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿ ಸರ್ಕಾರಿ ನೌಕರರ ಸಂಘದಿಂದ ಕುಣಿಗಲ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

PREV