ಕನ್ನಡಪ್ರಭ ವಾರ್ತೆ ಮಂಗಳೂರು
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳೂರಿನ ಎಸ್.ಕೆ. ಮುನ್ಸಿಪಲ್ ಎಂಪ್ಲಾಯಿಸ್ ಯೂನಿಯನ್ ನೇತೃತ್ವದಲ್ಲಿ ಪಾಲಿಕೆ ನೌಕರರು ಮಂಗಳೂರು ಮಹಾನಗರ ಪಾಲಿಕೆಯ ಮುಂಭಾಗದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರವೂ ಮುಂದುವರಿದಿದೆ.ಪಾಲಿಕೆಯ ನೌಕರರು ಧರಣಿಯಲ್ಲಿ ಭಾಗವಹಿಸುತ್ತಿರುವುದರ ಪರಿಣಾಮವಾಗಿ ಪಾಲಿಕೆಯ ಸೇವೆಯಲ್ಲಿ ವ್ಯತ್ಯಯವಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ಪಾಲಿಕೆಯಲ್ಲಿ ವಿವಿಧ ಕೆಲಸ ಕಾರ್ಯಗಳಿಗಾಗಿ ದೂರದಿಂದ ಆಗಮಿಸುವ ಸಾರ್ವಜನಿಕರು ಕೆಲಸವಾಗದೆ ಹಿಂದಿರುಗುತ್ತಿರುವ ದೃಶ್ಯ ಶುಕ್ರವಾರವೂ ಕಂಡು ಬಂತು.
ಗುರುವಾರದಿಂದ ಆರಂಭಗೊಂಡಿರುವ ಧರಣಿಗೆ ಪೌರ ಕಾರ್ಮಿಕರು ಬೆಂಬಲ ಸೂಚಿಸಿದ್ದ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಯಾಗದೆ ಸಮಸ್ಯೆಯಾಗಿತ್ತು. ಶುಕ್ರವಾರ ಪೌರ ಕಾರ್ಮಿಕರಿಂದ ತ್ಯಾಜ್ಯ ವಿಲೇವಾರಿ ಕಾರ್ಯ ನಡೆಯುತ್ತಿದೆ. ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಂದಾಯ, ನಗರ ಯೋಜನೆ, ಆಶ್ರಯ, ಆರೋಗ್ಯ, ಎಂಜಿನಿಯರಿಂಗ್ ಸೇರಿದಂತೆ ಎಲ್ಲ ವಿಭಾಗಗಳ ನೌಕರರು ಧರಣಿ ನಡೆಸುತ್ತಿದ್ದಾರೆ. ಸುಮಾರು ೪೦೦ಕ್ಕೂ ಅಧಿಕ ಮಂದಿ ಧರಣಿಯಲ್ಲಿ ಪಾಲ್ಗೊಂಡಿದ್ದು, ಪಾಲಿಕೆ ಕಚೇರಿ ಕೆಲಸಗಳು ಸ್ಥಗಿತಗೊಂಡಿವೆ.ಈ ಮಧ್ಯೆ ಮಂಗಳೂರು ಮಹಾನಗರ ಪಾಲಿಕೆ ಕಟ್ಟಡದಲ್ಲಿ ಹೊರಗುತ್ತಿಗೆ ನೌಕರರ ಮೂಲಕ ಕಾರ್ಯ ನಿರ್ವಹಿಸುವ ‘ಮಂಗಳೂರು ವನ್’ ಕೇಂದ್ರದಲ್ಲಿ ಸೇವೆ ಅಬಾಧಿತವಾಗಿದ್ದು, ವಿವಿಧ ರೀತಿಯ ಶುಲ್ಕ ಪಾವತಿ ಕಾರ್ಯ ನಡೆಯುತ್ತಿದೆ.
--------------------ಇಲಾಖಾ ಕಾರ್ಯದರ್ಶಿಗೆ ಕರೆ ಮಾಡಿದ ಶಾಸಕ ಕಾಮತ್ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ವೇದವ್ಯಾಸ ಕಾಮತ್ ಅವರು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ, ಹಿರಿಯ ಐಎಎಸ್ ಅಧಿಕಾರಿ ದೀಪಾ ಚೋಳನ್‌ಗೆ ಕರೆ ಮಾಡಿ, ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸಭೆ ಕರೆಯುವಂತೆ ಸಲಹೆ ನೀಡಿದರು.ಪ್ರತಿಭಟನೆ ನಿಮ್ಮ ಸಂವಿಧಾನಬದ್ಧ ಹಕ್ಕು, ಅದಕ್ಕೆ ಅಭ್ಯಂತರವಿಲ್ಲ. ಆದರೆ ನಗರದಲ್ಲಿ ಕಸ ವಿಲೇವಾರಿ ಸೇರಿದಂತೆ ಅನೇಕ ಕೆಲಸಗಳು ಸ್ಥಗಿತಗೊಂಡ ಪರಿಣಾಮ ಸಮಸ್ಯೆಯಾಗಿದೆ. ಮಂಗಳೂರಿನ ಜನತೆಗೆ ನಿಮ್ಮ ಸೇವೆ ಅತ್ಯಂತ ಅಗತ್ಯವಾಗಿದ್ದು ಯಾರಿಗೂ ತೊಂದರೆಯಾಗದಂತೆ ದಯವಿಟ್ಟು ಸಹಕರಿಸಿ. ನಿಮ್ಮ ಪರವಾಗಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.