ಎಕರೆಗೆ ₹ 53000ರಂತೆ ಬಲ್ಡೋಟಾಗೆ ಬಸಾಪುರ ಕೆರೆ ಭೂಮಿ

KannadaprabhaNewsNetwork |  
Published : Mar 01, 2025, 01:02 AM IST
28ಕೆಪಿಎಲ್30 ಕೊಪ್ಪಳ ತಾಲೂಕಿನ ಬಸಾಪುರ ಕೆರೆಯ ಬಳಿ ಕೊಪ್ಪಳ ಬಚಾವೋ ಆಂದೋಲನ ಸಮಿತಿ ಆಗ್ರಹಿಸುತ್ತಿರುವುದು. | Kannada Prabha

ಸಾರಾಂಶ

ರೈತರ ಭೂಮಿಯನ್ನು ಎಕರೆಗೆ ₹3ರಿಂದ ₹ 4 ಲಕ್ಷಕ್ಕೆ ಖರೀದಿಸಿದ ಕಂಪನಿಗೆ ಕೇವಲ ₹ 53876ರಂತೆ ಕೆರೆ ಭೂಮಿ ನೀಡಿದ್ದು ಏಕೆ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಕೊಪ್ಪಳ ಬಳಿ ಬೃಹತ್ ಕೈಗಾರಿಕೆ ಸ್ಥಾಪಿಸಲು ಮುಂದಾಗಿರುವ ಬಲ್ಡೋಟಾ ಕಂಪನಿಗೆ ಕೊಪ್ಪಳ ಜಿಲ್ಲಾಡಳಿತ ಕೇವಲ ಎಕರೆಗೆ ₹ 53876ರಂತೆ 44.35 ಎಕರೆ ಕೆರೆ ನೀಡಿದೆ. 2005ರಲ್ಲಿಯೇ ಸರ್ಕಾರದ ಆದೇಶದನ್ವಯ ಜಿಲ್ಲಾಡಳಿತ ಈ ಕೆರೆಯನ್ನೇ ಬಲ್ಡೋಟಾ ಕಂಪನಿಗೆ ನೀಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಕೆರೆಯೊಂದನ್ನು ಕಾರ್ಖಾನೆ ಸ್ಥಾಪಿಸಲು ನೀಡಿದ್ದಾದರೂ ಏಕೆ ಎನ್ನುವುದು ಅಚ್ಚರಿ ವಿಷಯವಾಗಿದೆ. ಆಗ ರೈತರ ಭೂಮಿಯನ್ನು ಎಕರೆಗೆ ₹3ರಿಂದ ₹ 4 ಲಕ್ಷಕ್ಕೆ ಖರೀದಿಸಿದ ಕಂಪನಿಗೆ ಕೇವಲ ₹ 53876ರಂತೆ ಕೆರೆ ಭೂಮಿ ನೀಡಿದ್ದು ಏಕೆ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ.

ಭೂ ಸ್ವಾಧೀನ ಪ್ರಕ್ರಿಯೇ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ಇದ್ದುದ್ದರಿಂದ ಕಾರ್ಖಾನೆ ಸ್ಥಾಪನೆ ಮುಂದೂಡುತ್ತಾ ಬಂದಿದ್ದ ಬಿಎಸ್‌ಪಿಎಲ್ ಕಂಪನಿ ಈಗ ರಾಜ್ಯ ಸರ್ಕಾರದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ₹ 54 ಸಾವಿರ ಕೋಟಿ ಹೂಡಿಕೆ ಮಾಡಿ, ಕಾರ್ಖಾನೆ ಸ್ಥಾಪಿಸಲು ಮುಂದಾಗಿದೆ. ಸ್ಪಾಂಜ್ ಮತ್ತು ಪವರ್ ಪ್ಲಾಂಟ್ ಹಾಕಲು ಮುಂದಾಗಿದ್ದರಿಂದ ಸ್ಥಳೀಯವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ನಡುವೆ ಬಸಾಪುರ ಕೆರೆಯನ್ನು ಜಿಲ್ಲಾಡಳಿತ ಅಗ್ಗದ ಬೆಲೆಗೆ ಮಾರಾಟ ಮಾಡಿರುವುದು ಚರ್ಚೆ ಹುಟ್ಟು ಹಾಕಿದೆ.

ಬಸಾಪುರ ಕೆರೆ ಪುರಾತನವಾಗಿದೆ. ಈ ಕೆರೆಯ ಮಣ್ಣಿನಿಂದಲೇ ಅನೇಕ ಕುಂಬಾರ ಕುಟುಂಬಗಳು ಸಹ ಬದುಕುತ್ತವೆ. ಜನ, ಜಾನುವಾರುಗಳಿಗೂ ಈ ಕೆರೆ ಆಸರೆಯಾಗಿದೆ. ಸುಮಾರು 44.35 ಎಕರೆ ವಿಶಾಲವಾದ ಕೆರೆಯನ್ನೇ ಆಶ್ರಯಿಸಿರುವ ಅನೇಕ ಗ್ರಾಮಗಳು ಇವೆ. ಪ್ರಾಣಿ, ಪಕ್ಷಿ ಸಂಕುಲಗಳು ಇವೆ. ಆದರೂ ಇದ್ಯಾವುದನ್ನು ನೋಡದ ಜಿಲ್ಲಾಡಳಿತ ಈ ಕೆರೆಯನ್ನು ಕೇವಲ ₹ 53876ಕ್ಕೆ ಎಕರೆಯಂತೆ ಮಾರಾಟ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಹೈಕೋರ್ಟ್ ವರೆಗೂ ಹೋರಾಟ:

ಕೆರೆ ಮಾರಾಟ ಪ್ರಶ್ನಿಸಿದ ಕೊಪ್ಪಳ ಬಚಾವೋ ಆಂದೋಲನ ಸಮಿತಿ ಧಾರವಾಡ ಹೈಕೋರ್ಟ್‌ನಲ್ಲಿ ದಾವೆ ಹೂಡಿ ಕೆರೆಯನ್ನು ಸಾರ್ವಜನಿಕ ಬಳಕೆಗೆ ಅವಕಾಶ ನೀಡುವಂತೆ ಮನವಿ ಮಾಡಿತ್ತು. ವಾದ-ವಿವಾದ ಆಲಿಸಿದ ಕೋರ್ಟ್‌ ಬಸಾಪುರ ಕೆರೆಯನ್ನು ಕಾರ್ಖಾನೆಗೆ ನೀಡಿದ್ದರೂ ಸಹ, ಅದನ್ನು ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಮತ್ತು ಸಾರ್ವಜನಿಕರ ಬಳಕೆಗೆ ಅವಕಾಶ ನೀಡಬೇಕು ಮಹತ್ವದ ತೀರ್ಪು ನೀಡಿದೆ.

ಮುಚ್ಚಿದ ಕೆರೆ:

44.35 ಎಕರೆ ವಿಸ್ತಾರವಾದ ಕೆರೆಯನ್ನು ಈಗ ಬಹುತೇಕ ಮುಚ್ಚಲಾಗಿದೆ ಎಂದು ಕೊಪ್ಪಳ ಬಚಾವೋ ಆಂದೋಲನ ಸಮಿತಿ ಆರೋಪಿಸಿದೆ. ಹೈಕೋರ್ಟ್ ಆದೇಶದಂತೆ ಸಾರ್ವಜನಿಕ ಬಳಕೆಗೂ ಅವಕಾಶ ನೀಡಿಲ್ಲ, ಅಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಿ ಕೆರೆಯನ್ನು ಸಾರ್ವಜನಿಕರ ಬಳಕೆಗೆ ಅವಕಾಶ ನೀಡದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ಕೆರೆಯನ್ನು ಸಾರ್ವಜನಿಕ ಬಳಕೆಗೆ ನೀಡಬೇಕು ಎಂದು ಧಾರವಾಡ ಹೈಕೋರ್ಟ್ ಹೇಳಿದ್ದರೂ ಸಹ ಬಿಎಸ್‌ಪಿಎಲ್ ಕಂಪನಿ ಅದನ್ನು ಸಂಪೂರ್ಣ ಕಬ್ಜಾ ಮಾಡಿಕೊಂಡಿದೆ. ಈ ಕೆರೆಯನ್ನು ಕಾರ್ಖಾನೆಗೆ ಅಗ್ಗದ ದರಕ್ಕೆ ಮಾರಾಟ ಮಾಡುವ ಅವಶ್ಯಕತೆ ಏನಿತ್ತು ಎಂದು

ಕೊಪ್ಪಳ ಬಚಾವೋ ಆಂದೋಲನ ಸಮಿತಿ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ಕೆರೆಯ ಸುತ್ತಲೂ ಕಾಂಪೌಂಡ್ ಹಾಕಲಾಗಿದ್ದು, ಅದನ್ನು ತೆರವು ಮಾಡಬೇಕು. ಕೆರೆಯನ್ನು ಸಾರ್ವಜನಿಕ ಬಳಕೆಗೆ ಬಿಡಬೇಕು ಎಂದು ಕೊಪ್ಪಳ ಬಚಾವೋ ಆಂದೋಲನ ಸಮಿತಿ ಸಂಚಾಲಕ ಡಿ.ಎಚ್. ಪೂಜಾರ ಹೇಳಿದರು.

PREV

Recommended Stories

ನೌಕರರ ಮುಂಬಡ್ತಿಗೆ ತರಬೇತಿ ಕಡ್ಡಾಯ
ಬೆಂಗಳೂರಲ್ಲಿ ಭರ್ಜರಿ ಮಳೆಗೆ ವಾಹನ ಸವಾರರ ಪರದಾಟ