ಬಸ್ ಸಿಬ್ಬಂದಿ ಮೇಲಿನ ಹಲ್ಲೆಗೆ ಆಕ್ರೋಶ

KannadaprabhaNewsNetwork | Published : Mar 1, 2025 1:02 AM

ಸಾರಾಂಶ

ಬೆಳಗಾವಿಯ ಬಾಳೆಕುಂದ್ರಿಯಲ್ಲಿ ಕೆಎಸ್‌ಆರ್‌ಟಿಸಿಯ ಚಾಲಕ, ನಿರ್ವಾಹಕರ ಮೇಲೆ ಪುಂಡರು ನಡೆಸಿದ ಹಲ್ಲೆ ಖಂಡಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗದ ನಿವೃತ್ತ ನೌಕರರುವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುಬೆಳಗಾವಿಯ ಬಾಳೆಕುಂದ್ರಿಯಲ್ಲಿ ಕೆಎಸ್‌ಆರ್‌ಟಿಸಿಯ ಚಾಲಕ, ನಿರ್ವಾಹಕರ ಮೇಲೆ ಪುಂಡರು ನಡೆಸಿದ ಹಲ್ಲೆ ಖಂಡಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗದ ನಿವೃತ್ತ ನೌಕರರುವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ದೇವರಾಜ ಅರಸು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಪಾದಯಾತ್ರೆಯಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.ಸಾರಿಗೆ ಸಂಸ್ಥೆಯ ನಿವೃತ್ತ ನೌಕರರ ಹೋರಾಟ ಬೆಂಬಲಿಸಿ ಮಾತನಾಡಿದ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ಬೆಳಗಾವಿಯಲ್ಲಿ ಎಂಇಎಸ್‌ನವರು ಪದೇ ಪದೆ ಕನ್ನಡಿಗರ ಮೇಲೆ ಹಲ್ಲೆ ಮಾಡುತ್ತಿದ್ದಾರೆ, ನಮ್ಮ ಸಾರಿಗೆ ಸಂಸ್ಥೆ ಬಸ್ ಹಾಗೂ ಬಸ್ ಸಿಬ್ಬಂದಿ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಇವರ ಉಪಟಳಕ್ಕೆ ಕಡಿವಾಣ ಹಾಕುವಲ್ಲಿ ಸರ್ಕಾರ ವಿಫಲವಾಗಿದೆ. ಬೆಳಗಾವಿ ರಾಜಕಾರಣಿಗಳು ವೋಟಿಗಾಗಿ ಮರಾಠಿಗರನ್ನು ಓಲೈಕೆ ಮಾಡಿಕೊಂಡು ಕನ್ನಡ ಭಾಷೆ, ಕನ್ನಡಿಗರ ಹಿತಕಡೆಗಣಿಸುತ್ತಿದ್ದಾರೆ ಎಂದು ಟೀಕಿಸಿದರು. ಕನ್ನಡ ಚಲನಚಿತ್ರ ನಟರು ಕನ್ನಡಿಗರ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿ ಬೀದಿಗಿಳಿದು ಹೋರಾಟ ಮಾಡಬೇಕು. ಈ ತಿಂಗಳ 22 ರಂದು ವಿವಿಧ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಚಿತ್ರರಂಗದವರು, ರಾಜ್ಯದ ಎಲ್ಲಾ ಸಂಘಟನೆಗಳೂ ಬೆಂಬಲ ನೀಡಿ ಕನ್ನಡಿಗರ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಧನಿಯಾಕುಮಾರ್ ಮನವಿ ಮಾಡಿದರು.

ಸಾರಿಗೆ ಸಂಸ್ಥೆಯ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್ ಖಜಾಂಚಿ ಶಿವಶಂಕರ್ ಮಾತನಾಡಿ, ಬೆಳಗಾವಿ ಸುಳೆಭಾವಿ ಮಾರ್ಗದಲ್ಲಿ ಕಾರ್ಯಾಚರಣೆಯಲ್ಲಿದ್ದ ಸಂದರ್ಭದಲ್ಲಿ ಬಾಳೆಕುಂದ್ರಿ ಬಸ್ ನಿಲ್ದಾಣದ ಬಳಿ ಬಸ್ ನಿರ್ವಾಹಕ ಮಹಾದೇವಪ್ಪ ಮಲ್ಲಪ್ಪ ಹುಕ್ಕೇರಿ ಅವರ ಮೇಲೆ ಕೆಲವರು ಮರಾಠಿ ಭಾಷೆಯಲ್ಲಿ ಮಾತನಾಡು ಎಂದು ಒತ್ತಾಯಿಸಿ ಹಲ್ಲೆ ಮಾಡಿರುವುದು ಖಂಡನೀಯ ಎಂದರು.ಕರ್ನಾಟಕದಲ್ಲಿ ಕನ್ನಡವೇ ಅಧಿಕೃತ ಭಾಷೆಯಾಗಿದ್ದು, ಕನ್ನಡದಲ್ಲಿ ವ್ಯವಹರಿಸುವುದು ಕರ್ತವ್ಯ. ಹೀಗಿದ್ದೂ ಸಂಸ್ಥೆ ಸಿಬಂದಿ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಪ್ರಕರಣ ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು. ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಸಿಬ್ಬಂದಿಗೆ ವೇತನ ಸಹಿತ ರಜೆ ನೀಡಬೇಕು ಎಂದು ಒತ್ತಾಯಿಸಿದರು.ಸಂಘಟನೆಯ ಮುಖಂಡ ಆರ್.ಎನ್.ವೆಂಕಟಾಚಲ ಮಾತನಾಡಿ, ಕನ್ನಡಿಗರು ಎಲ್ಲರನ್ನೂ ಗೌರವಿಸುವ, ಸೌಹಾರ್ದತೆಯಿಂದ ನಡೆದುಕೊಳ್ಳುವ ಮನೋಭಾವದವರು. ಮಹಾರಾಷ್ಟ್ರದಲ್ಲಿ ಜನಿಸಿದ ಡಾ.ಬಿ.ಆರ್.ಅಂಬೇಡ್ಕರ್, ಶಿವಾಜಿ ಅವರನ್ನೂ ಪೂಜಿಸಿ ಗೌರವಿಸುವ ಕನ್ನಡಿಗರ ಮೇಲೆ ಎಂಇಎಸ್‌ನವರ ದೌರ್ಜನ್ಯ ಸರಿಯಲ್ಲ, ಕನ್ನಡಿಗರ ತಾಳ್ಮೆ ಕೆಣಕುತ್ತಿರುವಅವರಿಗೆ ಸರ್ಕಾರ ತಕ್ಕ ಪಾಠ ಕಲಿಸಬೇಕು. ಎರಡೂ ರಾಜ್ಯಗಳ ಸರ್ಕಾರಗಳು ಈ ಪ್ರಕರಣವನ್ನುಗಂಭೀರವಾಗಿ ತೆಗೆದುಕೊಂಡು ಮರುಕಳಿಸದಂತೆ ಎಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್ ನ ಗೌರವ ಅಧ್ಯಕ್ಷ ವೆಂಕಟನಾರಾಯಣ, ಅಧ್ಯಕ್ಷ ಭೀಮಾ ನಾಯಕ್, ಉಪಾಧ್ಯಕ್ಷ ಜವರುಲ್ಲಾ, ಕಾರ್ಯದರ್ಶಿ ಕೆ.ಎಸ್.ರಾಜಣ್ಣ, ಮುಖಂಡರಾದ ಉಮೇಶ್‌ಕುಮಾರ್, ಜಾಕೋಬ್‌ರಾವ್, ನಾಗರಾಜು, ದೊಡೇಗೌಡ, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಸವರಾಜು, ಕನ್ನಡ ಮತ್ತು ಸಂಸ್ಕೃತಿ ವೇದಿಕೆ ಅಧ್ಯಕ್ಷ ಕನ್ನಡ ಪ್ರಕಾಶ್, ವಿವಿಧ ಸಂಘಟನೆಗಳ ಮುಖಂಡರಾದ ಅರುಣ್‌ಕುಮಾರ್, ಮೀಸೆ ಸತೀಶ್, ಕೊಪ್ಪಳ ನಾಗರಾಜು, ಶಬ್ಬೀರ್‌ ಅಹ್ಮದ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕೋಟ್‌ 1

ಕನ್ನಡಿಗರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಮಾಡುತ್ತಿರುವ ಎಂಇಎಸ್ ಪುಂಡರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಬೆಳಗಾವಿ ರಾಜಕಾರಣಿಗಳು ಎಂಇಎಸ್‌ನ ಕಾರ್ಯಕರ್ತರಿಗೆ ತಿಳುವಳಿಕೆ ಹೇಳಬೇಕು ಇಲ್ಲವೇ ಸರ್ಕಾರ ಎಂಇಎಸ್ ಸಂಘಟನೆಯನ್ನು ನಿಷೇಧಿಸಿಬೇಕು. ರಾಜ್ಯದ ಗಡಿ ಭಾಗದಲ್ಲಿ ಕನ್ನಡಿಗರಿಗೆ ರಕ್ಷಣೆ ನೀಡಬೇಕು. ಅಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು - ಧನಿಯಾಕುಮಾರ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ.

Share this article