ಸುದ್ದಿಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮಾಹಿತಿ
ಡಿ. 14ರಂದು ಜಿಲ್ಲೆಯಾದ್ಯಂತ ಆಯೋಜಿಸಲಾಗಿದ್ದ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ರಾಜಿ ಸಂಧಾನದ ಮೂಲಕ ಒಟ್ಟು 5340 ಪ್ರಕರಣ ಇತ್ಯರ್ಥಪಡಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್. ದರಗದ ಹೇಳಿದರು.
ಸೋಮವಾರ ನಗರದ ಜಿಲ್ಲಾ ನ್ಯಾಯಾಲಯದ ಆವರಣದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿ ಈ ಮಾಹಿತಿ ನೀಡಿದರು.ಕೊಪ್ಪಳ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ ಸಿ. ಅವರ ವಿಶೇಷ ಮುತುವರ್ಜಿಯಿಂದಾಗಿ ಜಿಲ್ಲೆಯಲ್ಲಿ ನಡೆದ ಲೋಕ್ ಅದಾಲತ್‌ನಲ್ಲಿ ವಿಮೆ, ನೀರಿನ ಬಿಲ್, ಬ್ಯಾಂಕ್ ಸಾಲ, ಮನೆ ಕರ, ಕೌಟುಂಬಿಕ ದೌರ್ಜನ್ಯ, ಜೀವನಾಂಶ, ಚೆಕ್ ಬೌನ್ಸ್ ಪ್ರಕರಣಗಳು, ಜನನ ಮರಣ, ಸಿವಿಲ್ ಕೇಸ್, ಕ್ರಿಮಿನಲ್ ಕೇಸ್, ಮೋಟಾರ್ ವಾಹನ ಅಪಘಾತ, ಎಂ.ಎ.ಔ.ಆರ್.ಡಿ ಪ್ರಕರಣಗಳು ಸೇರಿದಂತೆ ಕೊಪ್ಪಳ, ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ನ್ಯಾಯಾಲಯಗಳಲ್ಲಿನ 7006 ಪ್ರಕರಣಗಳ ಪೈಕಿ 5340 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ ಎಂದರು.
ರಾಜೀ ಸಂಧಾನದ ಮೂಲಕ ಇಬ್ಬರೂ ಪಕ್ಷಗಾರರಿಗೂ ನ್ಯಾಯ ಸಿಕ್ಕಿದೆ. ಇದರ ಜೊತೆಗೆ ಇಬ್ಬರ ಮಧ್ಯದಲ್ಲಿ ಬಾಂಧವ್ಯ ಮುಂದುವರೆಯುತ್ತದೆ. ಸಿವಿಲ್ ಪ್ರಕರಣಗಳಲ್ಲಿ ನ್ಯಾಯಾಲಯದ ಶುಲ್ಕ ವಾಪಸ್ ಸಿಗುತ್ತಿದೆ. ರಾಜಿ ಆಗದ ಪ್ರಕರಣಗಳಿಗೆ ಮೇಲ್ಮನವಿ ಸಲ್ಲಿಸಬಹುದು. ಲೋಕ್ ಅದಾಲತ್ ಮೂಲಕ ಪ್ರಕರಣಗಳು ತ್ವರಿತವಾಗಿ ಇತ್ಯರ್ಥವಾಗುವುದರಿಂದ ಜನರ ಸಮಯ ಮತ್ತು ಹಣದ ಉಳಿತಾಯವಾಗುವುದರ ಜೊತೆಗೆ ಪರಸ್ಪರ ಸ್ನೇಹ ಭಾವನೆಯಿಂದಿರುತ್ತಾರೆ ಎಂದರು.ನ್ಯಾಯಾಧೀಶರ ವಿಶೇಷ ಕಾಳಜಿ:
ಈ ಬಾರಿ ಅತಿ ಹೆಚ್ಚು ಸಂಖ್ಯೆಯ ಪ್ರಕರಣಗಳು ಇತ್ಯರ್ಥವಾಗಿದ್ದು, ಇದಕ್ಕೆ ಕಾರಣ ಲೋಕ್ ಅದಾಲತ್ ಬಗ್ಗೆ ನಮ್ಮ ಜನರಿಗೆ ಅರಿವಾಗುತ್ತಿದೆ. ಜನರು ಪ್ರಕರಣಗಳ ಇತ್ಯರ್ಥಕ್ಕೆ ಮುಂದೆ ಬರುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆಯ ಜೊತೆಗೆ ಜಿಲ್ಲೆಯ ಜನರಿಗೆ ಲೋಕ್ ಅದಾಲತ್‌ದಿಂದ ಅನುಕೂಲವಾಗುತ್ತಿದೆ ಎಂದರು.