- 143 ಸಂತ್ರಸ್ತರಿಗೆ ₹114.98 ಲಕ್ಷ ಪರಿಹಾರ ವಿತರಣೆ: ಡಿಸಿ ಗಂಗಾಧರ ಸ್ವಾಮಿ
ಕನ್ನಡಪ್ರಭ ವಾರ್ತೆ ದಾವಣಗೆರೆ
2026ರ ಜನವರಿ 1 ರಿಂದ ಸೆಪ್ಟೆಂಬರ್ 28 ರವರೆಗಿನ ಅವಧಿಯಲ್ಲಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಒಟ್ಟು 143 ಸಂತ್ರಸ್ತರಿಗೆ ₹114.98 ಲಕ್ಷ ಪರಿಹಾರ ಧನ ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಮೂರನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೌರ್ಜನ್ಯ ತಡೆ ಕಾಯ್ದೆಯಡಿ 8 ಪೋಕ್ಸೋ ಹಾಗೂ 47 ಇತರೆ ದೌರ್ಜನ್ಯ ಪ್ರಕರಣಗಳು ಸೇರಿದಂತೆ ಒಟ್ಟು 55 ಪ್ರಕರಣಗಳಲ್ಲಿ ಪರಿಹಾರ ಧನ ಬಿಡುಗಡೆ ಮಾಡಲಾಗಿದ್ದು, (ಕೊಲೆ ಪ್ರಕರಣಗಳು -0), 27 ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಮಂಜೂರಾದ ಒಟ್ಟು ಪರಿಹಾರ ಮೊತ್ತದಲ್ಲಿ ಎಫ್‌ಐಆರ್ ಹಂತದಲ್ಲಿ ₹57.98 ಲಕ್ಷ ಹಾಗೂ ಚಾರ್ಜ್ ಶೀಟ್ ಹಂತದಲ್ಲಿ ₹57.00 ಲಕ್ಷ ಬಿಡುಗಡೆಯಾಗಿದ್ದು, ಒಟ್ಟು 101 ಪರಿಶಿಷ್ಟ ಜಾತಿ ಹಾಗೂ 42 ಪರಿಶಿಷ್ಟ ಪಂಗಡದ ಫಲಾನುಭವಿ ಸಂತ್ರಸ್ತರು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ನ್ಯಾಯಾಲಯದಲ್ಲಿ 2026 ರ ಜೂನ್‌ನಿಂದ ಆಗಸ್ಟ್ ಅಂತ್ಯದವರೆಗಿನ ಅವಧಿಯಲ್ಲಿ ಒಟ್ಟು 7 ಮೊಕದ್ದಮೆಗಳನ್ನು ವಿಲೇವಾರಿ ಮಾಡಲಾಗಿದ್ದು, ಆಗಸ್ಟ್ ಅಂತ್ಯದ ವೇಳೆಗೆ 161 ಪ್ರಕರಣಗಳು ಬಾಕಿ ಉಳಿದಿವೆ ಎಂದು ಸರ್ಕಾರಿ ಅಭಿಯೋಜಕರಾದ ಕೆ. ಜಯಮ್ಮ ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಸಿದ್ದಲಿಂಗೇಶ್, ಮಹಾನಗರ ಪಾಲಿಕೆ ಆಯುಕ್ತ ಡಾ.ಎನ್.ಮಹಾಂತೇಶ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ಡಿಎಚ್‌ಒ ಡಾ.ಕೃಷ್ಣ, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಯೋಗೇಂದ್ರ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
-28ಕೆಡಿವಿಜಿ37: