ಪ್ರತಿ ವರ್ಷ 54 ಲಕ್ಷ ಜನರಿಗೆ ಹಾವು ಕಡಿತದ ಪ್ರಕರಣ

KannadaprabhaNewsNetwork |  
Published : Sep 22, 2025, 01:01 AM IST
21ಡಿಡಬ್ಲೂಡ6ಿಜಿಲ್ಲಾಡಳಿತವು ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಹಾವು ಕಡಿತ ದಿನವನ್ನು ಉದ್ಘಾಟಿಸಲಾಯಿತು.  | Kannada Prabha

ಸಾರಾಂಶ

ಹಾವು ಕಡಿತದ ಭಾಗವನ್ನು ಬಲವಾಗಿ ಕಟ್ಟಿ ರಕ್ತ ಹರಿವನ್ನು ನಿಲ್ಲಿಸುವುದು, ಕತ್ತರಿಸಿ ವಿಷವನ್ನು ಹೊರ ತೆಗೆದು ಹಾಕಲು ಯತ್ನಿಸುವುದು ಅಥವಾ ಮಂತ್ರ – ತಂತ್ರಗಳಿಂದ ಚಿಕಿತ್ಸೆ ಪಡೆಯುವುದು ಸುರಕ್ಷಿತವಲ್ಲ. ತಕ್ಷಣವೇ ಬಾಧಿತ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆ ತರಬೇಕು.

ಧಾರವಾಡ: ಹಾವು ಕಡಿತದ ಸಂದರ್ಭದಲ್ಲಿ ಜನರ ಕೆಲ ತಪ್ಪುಗಳು ಜೀವಕ್ಕೆ ಅಪಾಯಕಾರಿಯಾಗುತ್ತವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್‌.ಎಂ. ಹೊನಕೇರಿ ಹೇಳಿದರು.

ಜಿಲ್ಲಾಡಳಿತವು ವಿವಿಧ ಸಂಘ- ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಹಾವು ಕಡಿತ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಹಾವು ಕಡಿತದ ಭಾಗವನ್ನು ಬಲವಾಗಿ ಕಟ್ಟಿ ರಕ್ತ ಹರಿವನ್ನು ನಿಲ್ಲಿಸುವುದು, ಕತ್ತರಿಸಿ ವಿಷವನ್ನು ಹೊರ ತೆಗೆದು ಹಾಕಲು ಯತ್ನಿಸುವುದು ಅಥವಾ ಮಂತ್ರ – ತಂತ್ರಗಳಿಂದ ಚಿಕಿತ್ಸೆ ಪಡೆಯುವುದು ಸುರಕ್ಷಿತವಲ್ಲ. ತಕ್ಷಣವೇ ಬಾಧಿತ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆ ತರಬೇಕು ಎಂದರು.

ವಿಶ್ವ ಆರೋಗ್ಯ ಸಂಸ್ಥೆ ವರದಿ ಅನುಸಾರ ವಿಶ್ವದಾದ್ಯಂತ ಪ್ರತಿ ವರ್ಷ ಸುಮಾರು 54 ಲಕ್ಷ ಜನರು ಹಾವು ಕಡಿತಕ್ಕೆ ಒಳಗಾಗುತ್ತಾರೆ. ಈ ಪೈಕಿ 80 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಳ್ಳುತ್ತಾರೆ ಮತ್ತು ಬದುಕುಳಿದ ಅನೇಕರು ಜೀವನ ಪರ್ಯಂತ ಸವಾಲುಗಳನ್ನು ಎದುರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಹಾವು ಕಡಿತದಿಂದ ತಪ್ಪಿಸಿಕೊಳ್ಳುವ ಅಥವಾ ಆಕಸ್ಮಿಕವಾಗಿ ಕಡಿಸಿಕೊಂಡ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.

ಜಿಲ್ಲಾ ಆಸ್ಪತ್ರೆ ನೋಡಲ್‌ ಅಧಿಕಾರಿ ಡಾ. ಕಿರಣ ಕುಲಕರ್ಣಿ ಮಾತನಾಡಿ, ಹಾವು ಕಡಿದಾಗ ಮೊದಲಿಗೆ ಬಾಧಿತನನ್ನು ಸಮಾಧಾನ ಪಡಿಸಿ, ಅವನ ಚಲನೆ ಕಡಿಮೆ ಮಾಡಿ, ಕಡಿತದ ಭಾಗವನ್ನು ಶುಚಿಯಾದ ಬಟ್ಟೆಯಿಂದ ಸಡಿಲವಾಗಿ ಕಟ್ಟಿ, ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆತರಬೇಕು. ಮುಖ್ಯವಾಗಿ ಹಾವುಗಳ ಬಗ್ಗೆ ಇರುವ ಅನೇಕ ಅಂಧಶ್ರದ್ದೆಗಳನ್ನು ದೂರವಿಡಬೇಕು. ಮಂತ್ರೋಪಚಾರಣೆ ಮಾಡುವುದು, ಧಾರ್ಮಿಕ ಸ್ಥಳಗಳಿಗೆ ಕರೆದೊಯ್ಯುವ ಕ್ರಮಗಳು ಬೇಡ. ಹಾವು ಕಡಿತಕ್ಕೆ ಪರಿಣಾಮಕಾರಿ ಚಿಕಿತ್ಸೆ ಎಂದರೆ, ಆಂಟಿವೆನಮ್ (ವಿಷ ನಿರೋಧಕ) ಮಾತ್ರ. ಇದು ಸರಿಯಾದ ಸಮಯದಲ್ಲಿ ದೊರಕಿದರೆ ಜೀವ ಉಳಿಯುವುದು ಖಚಿತ. ಆದ್ದರಿಂದ ಎಲ್ಲರೂ ಜಾಗೃತರಾಗಿರಬೇಕು, ಅಂಧ ನಂಬಿಕೆಗಳನ್ನು ಬಿಟ್ಟು ಸರಿಯಾದ ವೈದ್ಯಕೀಯ ಚಿಕಿತ್ಸೆಯ ಕಡೆಗೆ ಒತ್ತು ಕೊಡಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಕೆ. ಬಡಿಗೇರ ಮಾತನಾಡಿದರು. ಡಾ. ಡಿ.ಜಿ. ತಾಪಸ್, ಯುವ ರೆಡ್ ಕ್ರಾಸ್ ಘಟಕದ ಸಂಚಾಲಕಿ ಡಾ. ಲತಾ ಕಿಲ್ಲೆದಾರ ಸ್ವಾಗತಿಸಿದರು. ಡಾ. ಜಯಾನಂದ ಹಟ್ಟಿ ನಿರೂಪಿಸಿದರು. ಡಾ. ವಿಜಯಲಕ್ಷ್ಮಿ ದಾನರೆಡ್ಡಿ ವಂದಿಸಿದರು. ಅಕ್ಷತಾ ಮಡಿವಾಳ ಪ್ರಾರ್ಥಿಸಿದರು.

PREV

Recommended Stories

ಸಿಬ್ಬಂದಿ ಕೊರತೆ ಬೆಂಗಳೂರು ನಗರದಲ್ಲಿ ಜಾತಿ ಗಣತಿ ವಿಳಂಬ
ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ