- ಹರಿಹರ ತಾಲೂಕು ಕಚೇರಿಯಲ್ಲಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಹರೀಶ್
- - -ಕನ್ನಡಪ್ರಭ ವಾರ್ತೆ ಹರಿಹರ
ಕನ್ನಡ ಸಾಹಿತ್ಯದಲ್ಲಿ ತ್ರಿಪದಿ ಕಾವ್ಯ ಪರಂಪರೆಯನ್ನು ಜನಮನಗಳಲ್ಲಿ ಅಚ್ಚಳಿಯದಂತೆ ಮೂಡಿಸಿದ ಮಹಾನ್ ಕವಿ ಸರ್ವಜ್ಞ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಮತ್ತು ನಾಡ ಹಬ್ಬಗಳ ಆಚರಣಾ ಸಮಿತಿಯಿಂದ ಶುಕ್ರವಾರ ನಡೆದ ಸಂತಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 16ನೇ ಶತಮಾನದಲ್ಲಿ ಬದುಕಿದ್ದ ಸರ್ವಜ್ಞ ಅವರು, ತಮ್ಮ ಸರಳ ಹಾಗೂ ತೀಕ್ಷ್ಣ ನುಡಿಗಳ ಮೂಲಕ ಜನರನ್ನು ಎಚ್ಚರಿಸುತ್ತ ಸಮಾಜಕ್ಕೆ ದಾರಿದೀಪವಾದವರು ಎಂದರು.
ಸರ್ವಜ್ಞ ಕವಿಯು ತಮ್ಮ ರಚನೆಗಳಲ್ಲಿ ಜನಜೀವನ, ಧರ್ಮ, ನೈತಿಕತೆ, ಅಹಂಕಾರ, ಜಂಭ, ಸಾಮಾಜಿಕ ವೈಷಮ್ಯಗಳ ಬಗ್ಗೆ ತೀಕ್ಷ್ಣವಾಗಿ ವಿಮರ್ಶೆ ನಡೆಸಿದ್ದಾರೆ. ಅವರ ಕಾವ್ಯಗಳ ವೈಶಿಷ್ಟ್ಯವೆಂದರೆ “ತ್ರಿಪದಿ” ರೂಪ. ಮೂರು ಸಾಲುಗಳಲ್ಲಿ ಗಾಢ ಅರ್ಥವನ್ನು ಸಾರುವ ಅವರ ವಚನಗಳು ಇಂದಿಗೂ ನಮಗೆ ಪ್ರಸ್ತುತವಾಗಿವೆ. ಸರಳ ಕನ್ನಡದಲ್ಲಿ ರಚಿಸಲ್ಪಟ್ಟ ಈ ತ್ರಿಪದಿಗಳು ಸಾಮಾನ್ಯ ಜನರಿಗೂ ಸುಲಭವಾಗಿ ಅರ್ಥವಾಗುವಂತಿವೆ ಎಂದು ತಿಳಿಸಿದರು.
ಸಾಮಾಜಿಕ ಕಪಟತನ, ಮೂಢನಂಬಿಕೆ, ಅಂಧಶ್ರದ್ಧೆಗಳನ್ನು ಅವರು ತಮ್ಮ ಕಾವ್ಯಗಳಲ್ಲಿ ಖಂಡಿಸಿದ್ದಾರೆ. ನೈತಿಕ ಮೌಲ್ಯಗಳನ್ನು ಬೋಧಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ. “ಅರಿವು, ನೀತಿ, ಸತ್ಯ” ಎಂಬ ತತ್ವಗಳನ್ನು ಅವರು ತಮ್ಮ ಬರಹಗಳ ಮೂಲಕ ಸಾರಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಶಾಶ್ವತ ಸ್ಥಾನ ಪಡೆದ ಸರ್ವಜ್ಞರು ಜನಮನಗಳಲ್ಲಿ ಸದಾ ಜೀವಂತವಾಗಿದ್ದಾರೆ ಎಂದರು.
ತಾಲೂಕು ಕುಂಬಾರ ಯುವ ಸೈನ್ಯದ ಅಧ್ಯಕ್ಷ ಚಂದ್ರಶೇಖರ್ ಕುಂಬಾರ್ ಮಾತನಾಡಿ, ತ್ರಿಪದಿ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಸರ್ವಜ್ಞನ ಹಿತವಚನಗಳು ಇಂದಿನವರ ನೆಮ್ಮದಿಯ ಜೀವನಕ್ಕೆ ದಾರಿದೀಪವಾಗಬಲ್ಲವು ಎಂದರು.ಉಪಾಧ್ಯಕ್ಷ ಕೆ.ಈರಪ್ಪ ಕುಂಬಾರ, ಖಜಾಂಚಿ ಮಲ್ಲಿಕಾರ್ಜುನ ಕುಂಬಾರ, ಮುರುಗೇಶಪ್ಪ ಟಿ.ಜಿ., ಎಂ.ಮಲ್ಲಿಕಾರ್ಜುನ, ಮಲ್ಲಿಕಾರ್ಜುನ ಜಿ.ಕೆ., ಎಂ.ಮಲ್ಲೇಶ್, ರವಿ ವೀರೇಶ ರುದ್ರೇಶ್ ಗುರುರಾಜ್ ಅಶೋಕ, ತಹಸೀಲ್ದಾರ್ ಸಂತೋಷ ಜಿ., ಪೌರಾಯುಕ್ತೆ ಈರಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ದುರ್ಗಪ್ಪ, ಎಡಿಎಲ್ ಆರ್.ಕಲ್ಲೇಶ್ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು, ಮುಖಂಡರು ಹಾಗೂ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.
- - --20HRR.01& 01A:
ಹರಿಹರದ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಮತ್ತು ನಾಡಹಬ್ಬಗಳ ಆಚರಣಾ ಸಮಿತಿಯಿಂದ ಸಂತ ಕವಿ ಸರ್ವಜ್ಞ ಜಯಂತ್ಯುತ್ಸವ ಆಚರಿಸಲಾಯಿತು.