ಮೂರೇ ದಿನದಲ್ಲಿ ೫೪ ಲಕ್ಷ ರು. ಹಣ ಅಕ್ರಮ ಪಾವತಿ...!

KannadaprabhaNewsNetwork |  
Published : Feb 04, 2026, 01:30 AM IST
೩ಕೆಎಂಎನ್‌ಡಿ-೫ಮಂಡ್ಯ ತಾಲೂಕಿನ ತಗ್ಗಹಳ್ಳಿ ಗ್ರಾಪಂನಲ್ಲಿ ತಾಪಂ ಇಓ ಲೋಕೇಶ್ ಅವರು ಅಕ್ರಮ ಹಣ ಪಾವತಿ ಬಗ್ಗೆ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಮಂಡ್ಯ ತಾಲೂಕಿನ ತಗ್ಗಹಳ್ಳಿ ಪಂಚಾಯ್ತಿಗೆ ಪ್ರಭಾರಿಯಾಗಿ ಬಂದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಮೂರೇ ದಿನದಲ್ಲಿ ೫೪ ಲಕ್ಷಕ್ಕೂ ಹೆಚ್ಚು ಹಣವನ್ನು ಅಕ್ರಮವಾಗಿ ಪಾವತಿಸಿರುವುದು ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ತಗ್ಗಹಳ್ಳಿ ಪಂಚಾಯ್ತಿಗೆ ಪ್ರಭಾರಿಯಾಗಿ ಬಂದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಮೂರೇ ದಿನದಲ್ಲಿ ೫೪ ಲಕ್ಷಕ್ಕೂ ಹೆಚ್ಚು ಹಣವನ್ನು ಅಕ್ರಮವಾಗಿ ಪಾವತಿಸಿರುವುದು ಬೆಳಕಿಗೆ ಬಂದಿದೆ.

ತಗ್ಗಹಳ್ಳಿ ಪಿಡಿಒ ಎಚ್.ಎಸ್.ಲಕ್ಷ್ಮೀ ಅವರು ೧೬ ದಿನಗಳ ಕಾಲ ರಜೆಯ ಮೇಲೆ ತೆರಳಿದ್ದ ಹಿನ್ನೆಲೆಯಲ್ಲಿ ಮಂಡ್ಯ ತಾಲೂಕು ಆಲಕೆರೆ ಗ್ರಾಪಂ ಪಿಡಿಒ ಶ್ರೀನಿವಾಸಯ್ಯ ಎಂಬುವರನ್ನು ತಗ್ಗಹಳ್ಳಿ ಪಂಚಾಯ್ತಿ ಪಿಡಿಒ ಹುದ್ದೆಯನ್ನು ಪ್ರಭಾರಿಯಾಗಿ ನೀಡಲಾಗಿತ್ತು. ಪ್ರಭಾರ ಹುದ್ದೆ ವಹಿಸಿಕೊಂಡ ನಂತರ ಮೂರೇ ದಿನದಲ್ಲಿ ೪೮ ಲಕ್ಷ ರು. ಹಣವನ್ನು ಆನ್‌ಲೈನ್ ಪಾವತಿ, ೪ ಲಕ್ಷ ರು. ಹಣವನ್ನು ಚೆಕ್ ಹಾಗೂ ತಗ್ಗಹಳ್ಳಿ ಗ್ರಾಮೀಣ ಬ್ಯಾಂಕ್‌ಗೆ ಒಂದೂವರೆ ಲಕ್ಷ ರು. ಹಣವನ್ನು ಪಾವತಿಸಿರುವುದು ಕಂಡುಬಂದಿದೆ.

ಊರಿನ ಗ್ರಾಮಸ್ಥರಿಗೆ ಈ ವಿಷಯ ತಿಳಿದು ತಕ್ಷಣವೇ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಅವರ ಗಮನಕ್ಕೆ ತಂದರು. ತಕ್ಷಣವೇ ಕಾರ್ಯೋನ್ಮುಖರಾದ ಅಧಿಕಾರಿಗಳು ತಗ್ಗಹಳ್ಳಿ ಗ್ರಾಪಂಗೆ ತೆರಳಿ ಪರಿಶೀಲನೆ ನಡೆಸಿದರು. ಅಷ್ಟರಲ್ಲಿ ೯ ಲಕ್ಷ ರು. ಹಣ ಆನ್‌ಲೈನ್ ಮೂಲಕ ಪಾವತಿಯಾಗಿದ್ದು, ಉಳಿದ ಹಣಪಾವತಿಯಾಗುವಷ್ಟರಲ್ಲಿ ಖಾತೆಯನ್ನು ಬಂದ್ ಮಾಡಿಸಿ ಅಕ್ರಮ ಹಣ ಪಾವತಿಗೆ ಬ್ರೇಕ್ ಹಾಕಿದ್ದಾರೆ.

ಮೂರು ದಿನದಲ್ಲಿ ಹಣ ವರ್ಗಾವಣೆ

ತಗ್ಗಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಲಕ್ಷ್ಮೀ ಅವರು ೧೬ ದಿನ ರಜೆಯ ಮೇಲೆ ತೆರಳಿದ್ದರು. ಈ ಸಮಯದಲ್ಲಿ ಮಂಡ್ಯ ತಾಲೂಕು ಆಲಕೆರೆ ಗ್ರಾಪಂ ಪಿಡಿಒ ಶ್ರೀನಿವಾಸ್ ಅವರನ್ನು ತಗ್ಗಹಳ್ಳಿ ಪಿಡಿಒ ಹುದ್ದೆಯನ್ನು ಪ್ರಭಾರಿಯಾಗಿ ನೀಡಲಾಗಿತ್ತು. ಹತ್ತು ದಿನದಲ್ಲಿ ಮೂರು ದಿನ ಸರ್ಕಾರಿ ರಜೆ ಇದ್ದು, ಕೆಲಸ ನಿರ್ವಹಿಸಿರುವುದು ಏಳು ದಿನ ಮಾತ್ರ. ಈ ಏಳು ದಿನದ ಅವಧಿಯಲ್ಲಿ ಜ.೨೯, ೩೦, ೩೧ರ ಮೂರು ದಿನಗಳಲ್ಲೇ ೫೪ ಲಕ್ಷ ರು. ಹಣವನ್ನು ಹದಿನೈದನೇ ಹಣಕಾಸು ಯೋಜನೆಯಡಿ ಸೋಲಾರ್ ಲೈಟ್‌ಗಳು, ಪೈಪ್‌ಗಳು ಹಾಗೂ ಎಲೆಕ್ಟ್ರಿಕ್ ಸಾಮಗ್ರಿಗಳನ್ನು ಖರೀದಿ ಮಾಡಿರುವುದಕ್ಕೆ ಯಾವುದೇ ವೋಚರ್‌ಗಳಿಲ್ಲದಿದ್ದರೂ ಆನ್‌ಲೈನ್ ಪಾವತಿ, ಚೆಕ್‌ಗಳ ಮೂಲಕ ಹಣ ಪಾವತಿಸಿರುವುದು ಕಂಡುಬಂದಿದೆ.

ಇದೆಲ್ಲಾ ಪೂರ್ವ ಯೋಜಿತವೇ?

ಆಲಕೆರೆ ಗ್ರಾಮ ಪಂಚಾಯ್ತಿ ಪಿಡಿಒ ಶ್ರೀನಿವಾಸಯ್ಯ ಅವರು ತಗ್ಗಹಳ್ಳಿ ಗ್ರಾಪಂ ಪ್ರಭಾರಿ ಹುದ್ದೆಯನ್ನು ಜ.೨೩ರಂದು ವಹಿಸಿಕೊಂಡಿದ್ದು, ಅಂದು ಸಂಜೆ ೪ ಗಂಟೆಗೆ ಡಾಂಗಲ್ ದೊರಕಿದೆ. ಜ.೨೪, ೨೫, ೨೬ ರಜೆ ಇದ್ದು, ಜ.೨೭ಕ್ಕೆ ಸಭೆ ನಡೆಸಿದ್ದಾರೆ. ಜ.೨೯, ೩೦, ೩೧ ಮೂರು ದಿನಗಳಲ್ಲಿ ೫೪ ಲಕ್ಷ ರು. ಅಕ್ರಮ ವರ್ಗಾವಣೆ ಮಾಡಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದೆಲ್ಲವೂ ಪೂರ್ವಯೋಜಿತ ಸಂಚು ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ಬಲವಾಗಿ ವ್ಯಕ್ತವಾಗಿವೆ. ಇದೇ ಪಿಡಿಒ ಶ್ರೀನಿವಾಸಯ್ಯ ಬೇಲೂರು ಪಂಚಾಯ್ತಿ ಪ್ರಭಾರ ಪಿಡಿಒ ಆಗಿದ್ದ ವೇಳೆಯೂ ಅಕ್ರಮ ಬಿಲ್ ಮಾಡಿದ್ದ ಕಾರಣಕ್ಕೆ ಕರ್ತವ್ಯದಿಂದ ಅಮಾನತುಗೊಂಡಿದ್ದರು ಎಂದು ತಿಳಿದುಬಂದಿದೆ.

೮೭ ಲಕ್ಷ ರು. ಇದ್ದದ್ದು ೪೮ ಲಕ್ಷ ರು. ಗೆ ಇಳಿಕೆ

ತಗ್ಗಹಳ್ಳಿ ಪಂಚಾಯ್ತಿ ಅಧಿಕಾರಿ ಎಚ್.ಎಸ್.ಲಕ್ಷ್ಮೀ ಅವರು ರಜೆಯ ಮೇಲೆ ತೆರಳಿದ್ದ ವೇಳೆ ಪಂಚಾಯ್ತಿ ಖಾತೆಯಲ್ಲಿ ೮೭ ಲಕ್ಷ ರು. ಇತ್ತು. ಜ.೩೧ರಂದು ಇ-ಸ್ವರಾಜ್ ಆ್ಯಪ್‌ನಲ್ಲಿ ನೋಡಿದಾಗ ೪೮ ಲಕ್ಷ ಆನ್‌ಲೈನ್ ಪಾವತಿಗೆ ಸಿದ್ಧಪಡಿಸಿರುವುದು ಗೊತ್ತಾಗಿ ಮಹೇಂದ್ರ ಎಂಬುವರು ತಾಪಂ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಅವರಿಗೆ ವಿಷಯ ತಿಳಿಸಿದರು. ಈ ಸಂಬಂಧ ತಗ್ಗಹಳ್ಳಿ ಗ್ರಾಪಂಗೆ ಸಿಇಒ ಕೆ.ಆರ್.ನಂದಿನಿ ಅವರು ಭೇಟಿ ನೀಡಿದ್ದ ಸಮಯದಲ್ಲೂ ಸಾರ್ವಜನಿಕರು ಹದಿನೈದನೇ ಹಣಕಾಸು ಯೋಜನೆಯಡಿ ೪೮ ಲಕ್ಷಕ್ಕೂ ಹೆಚ್ಚು ಹಣ ಅಕ್ರಮವಾಗಿ ಪಾವತಿ ಮಾಡಿರುವ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಿದ್ದರು. ಕೂಡಲೇ ತಾಪಂ ಇಒ ಅವರಿಗೆ ಕರೆ ಮಾಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು.

ಅದರಂತೆ ತಾಪಂ ಇಒ ಲೋಕೇಶ್ ಅವರು ತಗ್ಗಹಳ್ಳಿ ಗ್ರಾಪಂಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮಂಗಳವಾರವೂ ಪಂಚಾಯ್ತಿಗೆ ತೆರಳಿದ ಅಧಿಕಾರಿಗಳು ಪಿಡಿಒ ಶ್ರೀನಿವಾಸಯ್ಯ ಅಕ್ರಮ ಹಣ ಪಾವತಿ ವಿರುದ್ಧ ದೂರುಗಳ ಸುರಿಮಳೆಗರೆದರು.

ಹದಿನೈದನೇ ಹಣಕಾಸು ಯೋಜನೆಯಡಿ ವಿವಿಧ ಸಾಮಗ್ರಿಗಳ ಖರೀದಿಗೆ ೫೪ ಲಕ್ಷ ರು. ಹಣವನ್ನು ಅಕ್ರಮವಾಗಿ ಪಾವತಿಸಲಾಗಿದೆ. ಮೂರು ದಿನಗಳಲ್ಲಿ ಇಷ್ಟೊಂದು ಮೊತ್ತದ ಹಣ ಪಾವತಿಸಿರುವುದು ಅಚ್ಚರಿಗೂ ಕಾರಣವಾಗಿದೆ. ಇ-ಸ್ವರಾಜ್ ಆ್ಯಪ್ ಮೂಲಕ ಹಣ ಪಾವತಿ ವಿಷಯ ತಿಳಿದು ಮೇಲಧಿಕಾರಿಗಳಿಗೆ ತಿಳಿಸಿದಾಗ ೯ ಲಕ್ಷ ರು. ಹಣ ಈಗಾಗಲೇ ಹಲವರಿಗೆ ಪಾವತಿಯಾಗಿದ್ದು, ಉಳಿಕೆ ಹಣಕ್ಕೆ ಬ್ರೇಕ್ ಹಾಕಲಾಗಿದೆ.

- ಮಹೇಂದ್ರ, ದೂರುದಾರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುನೀತರಾಜಕುಮಾರ ಪುತ್ಥಳಿ ಅನಾವರಣ
ಬೆಂಗಳೂರು ನಗರದಲ್ಲಿ ಮತ್ತೊಂದು ಮೇಲ್ಸೇತುವೆ ನಿರ್ಮಾಣ