ಕಲ್ಯಾಣ ಕರ್ನಾಟಕಕ್ಕೆ 5600 ಶಿಕ್ಷಕರ ನೇಮಕ: ಮಧು ಬಂಗಾರಪ್ಪ

KannadaprabhaNewsNetwork | Published : Apr 30, 2025 12:31 AM

ಸಾರಾಂಶ

ಕಲ್ಯಾಣ ಕರ್ನಾಟಕಕ್ಕೆ ಶೇ. ೮೦ ಶಿಕ್ಷಕರನ್ನು ನೀಡಲು ೫೬೦೦ ಶಿಕ್ಷಕರ ನೇಮಕ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಅನುದಾನಿತ ಶಾಲೆ ಸೇರಿ ಸುಮಾರು ೩೦-೩೨ ಸಾವಿರ ಶಿಕ್ಷಕರನ್ನು ಮುಂದಿನ ೬ ತಿಂಗಳೊಳಗೆ ನಿಯೋಜಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಕುಮಟಾ: ಶಿಕ್ಷಣ ಕ್ಷೇತ್ರದಲ್ಲಿ ಕೆಲವೊಂದು ಕೊರತೆಗಳು ಹಿಂದೆ ಇದ್ದಂತೆ ಈಗಲೂ ಇದೆ. ಆದರೆ ಶಿಕ್ಷಕರ ಕೊರತೆ ನೀಗಿಸಲು ದಾಪುಗಾಲಿಟ್ಟಿದ್ದೇವೆ. ಕಲ್ಯಾಣ ಕರ್ನಾಟಕಕ್ಕೆ ಶೇ. ೮೦ ಶಿಕ್ಷಕರನ್ನು ನೀಡಲು ೫೬೦೦ ಶಿಕ್ಷಕರ ನೇಮಕ ಮಾಡುತ್ತಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ತಾಲೂಕಿನ ಕಾಗಾಲ ಸರ್ಕಾರಿ ಮಾದರಿ ಶಾಲೆಯಲ್ಲಿ ಸೋಮವಾರ ರಾತ್ರಿ ಶತಮಾನೋತ್ತರ ಸುವರ್ಣ ಸಂಭ್ರಮ ಸಮಾರಂಭದ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ಅನುದಾನಿತ ಶಾಲೆ ಸೇರಿ ಸುಮಾರು ೩೦-೩೨ ಸಾವಿರ ಶಿಕ್ಷಕರನ್ನು ಮುಂದಿನ ೬ ತಿಂಗಳೊಳಗೆ ನಿಯೋಜಿಸಲಾಗುವುದು. ಶೇ. ೩೮ರಷ್ಟು ಸರ್ಕಾರಿ ನೌಕರರಿರುವ ೪೮ ಸಾವಿರ ಅನುದಾನಿತ ಶಾಲೆಗಳು ಸೇರಿ ಒಟ್ಟೂ ೫೬ ಸಾವಿರ ಶಾಲೆಗಳು ರಾಜ್ಯದಲ್ಲಿವೆ. ಅವರೆಲ್ಲರ ಸೇವೆ ಮಾಡುವ ಭಾಗ್ಯ ಮುಖ್ಯಮಂತ್ರಿಗಳು ನನಗೆ ನೀಡಿದ್ದಾರೆ ಎಂದರು.

ಶತಮಾನೋತ್ತರ ಸುವರ್ಣ ಸಂಭ್ರಮದಲ್ಲಿರುವ ಈ ಶಾಲೆಯ ಕಟ್ಟಡ ಮತ್ತು ಈ ಶಾಲೆಗೆ ಆಂಗ್ಲಮಾಧ್ಯಮವನ್ನು ಒಂದು ವರ್ಷದಲ್ಲಿ ಮಂಜೂರಿ ಕೊಡಿಸುತ್ತೇನೆ. ಶಾಲೆಗೆ ಮಕ್ಕಳ ಸಂಖ್ಯೆ ಹೆಚ್ಚಿಸುವುದು ನಿಮ್ಮೆಲ್ಲರ ಜವಾಬ್ದಾರಿ ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ನಾನು ಬಹಳ ವರ್ಷದಿಂದ ಉತ್ತರ ಕನ್ನಡ ಜಿಲ್ಲೆಗೆ ಒಂದು ಯುನಿವರ್ಸಿಟಿ ಬೇಕೆಂಬ ಬೇಡಿಕೆ ಇಡುತ್ತಾ ಬಂದಿದ್ದೇನೆ. ಇದು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯವಾಗಿದ್ದರೂ ಮಧು ಬಂಗಾರಪ್ಪ ಅವರು ಮುಖ್ಯಮಂತ್ರಿಗಳ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವುದರಿಂದ ನಮ್ಮ ಜಿಲ್ಲೆಗೆ ಯುನಿವರ್ಸಿಟಿ ಮಾಡಿಕೊಡುವಲ್ಲಿ ಸಹಕರಿಸಬೇಕು. ಜಿಲ್ಲೆಯ ಶಾಲೆಗಳ ದುರಸ್ತಿಯ ಬಗ್ಗೆ ಗಮನಹರಿಸಬೇಕು. ಶಾಲೆಗಳಲ್ಲಿ ಹಿಂದೆ ಇದ್ದ ಕಲೆ-ಕರಕುಶಲ ಚಟುವಟಿಕೆಗೆ ಪ್ರೋತ್ಸಾಹ ನೀಡುವ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಬೇಕು ಎಂದರು.

ಶಿರಸಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಶಿಕ್ಷಣ ಎಲ್ಲರ ಜವಾಬ್ದಾರಿ. ಸ್ವಾತಂತ್ರ‍್ಯ ಪೂರ್ವದಲ್ಲಿ ಬ್ರಿಟಿಷರ ದೌರ್ಜನ್ಯದ ನಡುವೆಯೂ ಅನೇಕರಿಗೆ ಶಿಕ್ಷಣ ನೀಡಿ, ಅರಿವು ಮೂಡಿಸಲು ಕಾರಣರಾದ ಶಿಕ್ಷಕ ವೃಂದವನ್ನು ಗೌರವಿಸಬೇಕಾಗಿದೆ ಎಂದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ ಶಿರಸಿ, ತಹಸೀಲ್ದಾರ್‌ ಶ್ರೀಕೃಷ್ಣ ಕಾಮಕರ, ಬಿಇಒ ರಾಜೇಂದ್ರ ಭಟ್, ಡಿಡಿಪಿಐ ಹರೀಶ ಗಾಂವಕರ ಇನ್ನಿತರರು ಇದ್ದರು. ಶಾಲೆಯ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

Share this article