ಶಿಗ್ಗಾಂವಿ: ಶಿಗ್ಗಾಂವಿ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ನೇತೃತ್ವದಲ್ಲಿ ಶುಕ್ರವಾರ ಕರೆದಿದ್ದ ಸಂಘಟನಾತ್ಮಕ ಸಭೆಯಲ್ಲಿ 57 ಆಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಂಸದರಾಗಿ ಆಯ್ಕೆಯಾದ ಬಳಿಕ ಶಿಗ್ಗಾಂವಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಉಪಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದ್ದು, ಅಗತ್ಯ ಸಿದ್ಧತೆ ಕೈಗೊಳ್ಳುವ ಕುರಿತು ಬಿಜೆಪಿ ಮುಂದಾಗಿದೆ. ಅದಕ್ಕಾಗಿ ಶುಕ್ರವಾರ ಪಕ್ಷದ ರಾಜ್ಯ ಉಸ್ತುವಾರಿ ಅಗರವಾಲ್ ನೇತೃತ್ವದಲ್ಲಿ ಕರೆದ ಸಭೆಯಲ್ಲಿ ಆಕಾಂಕ್ಷಿಗಳು ಟಿಕೆಟ್‌ಗಾಗಿ ಮುಗಿಬಿದ್ದು ಅರ್ಜಿ ಸಲ್ಲಿಸಿದರು. ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಖುದ್ದಾಗಿ ಅರ್ಜಿ ಸಲ್ಲಿಸದಿದ್ದರೂ ಅವರಿಗೆ ಟಿಕೆಟ್ ನೀಡುವಂತೆ ಬೆಂಬಲಿಗರು ಅರ್ಜಿ ಸಲ್ಲಿಸಿದರು. ಶ್ರೀಕಾಂತ ದುಂಡಿಗೌಡರ, ಶಶಿಧರ ಯಲಿಗಾರ, ಶೋಭಾ ನಿಸ್ಸೀಮಗೌಡ್ರ ಸೇರಿದಂತೆ ಪ್ರಮುಖರು ಶಕ್ತಿ ಪ್ರದರ್ಶನ ಮಾಡುವ ಮೂಲಕ ಅರ್ಜಿ ಸಲ್ಲಿಸಿದರು.ಈ ವೇಳೆ ಆಕಾಂಕ್ಷಿಗಳಿಗೆ ಬಿಜೆಪಿ ನಾಯಕರು ಟಾಸ್ಕ್ ನೀಡಿದ್ದಾರೆ. ಪ್ರತಿ ಬೂತ್‌ನಿಂದ ಕನಿಷ್ಠ 200 ಸದಸ್ಯರನ್ನು ನೋಂದಾಯಿಸುವ ಗುರಿ ಕೊಟ್ಟಿದ್ದಾರೆ. ಯಾರು ಸಂಘಟನೆ ಮಾಡುವುದಿಲ್ಲವೋ ಅಂಥವರಿಗೆ ಮುಂದೆ ಟಿಕೆಟ್ ರೇಸ್‌ನಿಂದ ಕೈಬಿಡುವ ಸೂಚನೆಯನ್ನೂ ನೀಡಿದರು. ಮಾಜಿ ಸಚಿವ ಬಿ.ಸಿ.ಪಾಟೀಲ, ಶಾಸಕ ಅರವಿಂದ ಬೆಲ್ಲದ, ಪಿ.ರಾಜೀವ್, ಮಹೇಶ ಟೆಂಗಿನಕಾಯಿ, ಶಂಕರ ಮುನೇನಕೊಪ್ಪ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಡಾ.ಬಸವರಾಜ ಕೇಲಗಾರ ಮೊದಲಾದ ನಾಯಕರು ಇದ್ದರು.
ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತರ ತುಷ್ಟೀಕರಣ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ. ರಾಹುಲ್ ಗಾಂಧಿ ಅಮೆರಿಕಾಕ್ಕೆ ಹೋದರೆ ಅಲ್ಲಿಯೂ ಹಿಂದೂಗಳಿಗೆ ಬೆದರಿಕೆ ಹಾಕುತ್ತಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ ದಾಸ್ ಅಗರವಾಲ್ ವಾಗ್ದಾಳಿ ನಡೆಸಿದರು.ಶಿಗ್ಗಾಂವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತಂಕವಾದಿಗಳು ಬಿಜೆಪಿ ಕಚೇರಿಯನ್ನು ಸ್ಫೋಟಿಸಲು ಮುಂದಾಗಿದ್ದರು. ಆದರೆ, ಸಾಧ್ಯವಾಗದೇ ಕೊನೆಗೆ ರಾಮೇಶ್ವರಂ ಕೆಫೆ ಸ್ಫೋಟಿಸಿದರು. ವಿಧಾನಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದರು. ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆಯಾಯಿತು. ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಗಲಾಟೆ ಮಾಡಲಾಯಿತು. ಅಲ್ಪಸಂಖ್ಯಾತರ ತುಷ್ಟೀಕರಣದಿಂದಲೇ ಇವೆಲ್ಲ ನಡೆಯುತ್ತಿದೆ ಎಂದು ಆರೋಪಿಸಿದರು.