ಜಿಲ್ಲೆಯಲ್ಲಿ ಶೇ.57ರಷ್ಟು ಹೆಚ್ಚು ಮಳೆ: 3 ಸಾವು

KannadaprabhaNewsNetwork |  
Published : Jul 23, 2024, 12:33 AM IST
ಪೊಟೊ: 22ಆರ್‌ಪಿಟಿ01ರಿಪ್ಪನಪೇಟೆ ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಡಾಹೊಸಳ್ಳಿ ಗ್ರಾಮದ ಹಳ್ಳದ ದಂಡೆ ಒಡೆದಿರುವುದು. | Kannada Prabha

ಸಾರಾಂಶ

ವಾರಗಟ್ಟಲೇ ನಿರಂತರವಾಗಿ ಸುರಿದ ಮಳೆಗೆ ಮೂರು ಮಂದಿ, 6 ಜಾನುವಾರು ಸಾವನ್ನಪ್ಪಿದ್ದರೆ, 7 ಮನೆ ಪೂರ್ಣ ಹಾನಿ, 130 ಮನೆ ಭಾಗಶಃ ಹಾನಿಯಾಗಿವೆ. 610 ಹೇಕ್ಟೆರ್‌ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಜಲಾವೃತವಾಗಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ಜು.21ರ ವರೆಗೆ ಸರಾಸರಿ 529.0 ಮಿ.ಮೀ ವಾಡಿಕೆ ಮಳೆಗೆ ಈ ಪೈಕಿ 831 ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.57ರಷ್ಟು ಹೆಚ್ಚು ಮಳೆ ವರದಿಯಾಗಿದೆ.

ವಾರಗಟ್ಟಲೇ ನಿರಂತರವಾಗಿ ಸುರಿದ ಮಳೆಗೆ ಮೂರು ಮಂದಿ, 6 ಜಾನುವಾರು ಸಾವನ್ನಪ್ಪಿದ್ದರೆ, 7 ಮನೆ ಪೂರ್ಣ ಹಾನಿ, 130 ಮನೆ ಭಾಗಶಃ ಹಾನಿಯಾಗಿವೆ. 610 ಹೇಕ್ಟೆರ್‌ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಜಲಾವೃತವಾಗಿದೆ.

ಮಳೆಗೆ ಮೂವರ ದುರ್ಮರಣ:

ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಹೊಸನಗರ ತಾಲೂಕಿನ ಬೈಸೆ ಗ್ರಾಮದ ಶಶಿಕಲಾ, ತೀರ್ಥಹಳ್ಳಿ ತಾಲೂಕಿನ ಬಿದರಗೋಡು ಗ್ರಾಮದ ನಾಗೇಂದ್ರ ಹಾಗೂ ಶಿಕಾರಿಪುರ ತಾಲೂಕಿನ ಅಮಟೇಕೊಪ್ಪ ಗ್ರಾಮದ ನಾಗರಾಜ ಮಳೆಗೆ ಬಲಿಯಾಗಿದ್ದಾರೆ.

ಶಶಿಕಲಾ ಮತ್ತು ನಾಗೇಂದ್ರ ಕುಟುಂಬದವರಿಗೆ ಎಸ್‍ಡಿಆರ್‌ಎಫ್ ಮತ್ತು ಎನ್‍ಡಿಆರ್‌ಎಫ್ ಮಾರ್ಗಸೂಚಿಯಂತೆ ತಲಾ ₹5 ಲಕ್ಷ ಪರಿಹಾರ ನೀಡಲಾಗಿದೆ. ನಾಗರಾಜ ಕುಟುಂಬಕ್ಕೆ ಎಫ್‍ಎಲ್‍ಸಿ ವರದಿ ಬಂದ ನಂತರ ಪರಿಹಾರ ವಿತರಣೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಜು.19ರ ವರೆಗೆ ಒಟ್ಟು 6 ಜಾನುವಾರು ಮೃತಪಟ್ಟಿದ್ದು ಪರಿಹಾರಕ್ಕೆ ಕ್ರಮ ವಹಿಸಲಾಗುತ್ತಿದೆ. ಅತಿ ಹೆಚ್ಚು ಮಳೆಯಿಂದ ಜೂನ್‍ವರೆಗೆ 7 ಮನೆ ಪೂರ್ಣ ಹಾನಿಗೊಳಪಟ್ಟಿದ್ದು, ಅದರಲ್ಲಿ 4 ಮನೆಗೆ ತಲಾ ₹1.20 ಲಕ್ಷ ಪರಿಹಾರ ನೀಡಲಾಗಿದೆ. 130 ಮನೆ ಭಾಗಶಃ ಹಾನಿಗೊಳಗಾಗಿದ್ದು ಪರಿಹಾರ ನೀಡಲು ಕ್ರಮ ವಹಿಸಲಾಗಿದೆ.

ಜಿಲ್ಲೆಯಲ್ಲಿ 74,916 ಹೇಕ್ಟೆರ್‌ ಭತ್ತದ ಪ್ರದೇಶದ ಪೈಕಿ 9508 ಹೇಕ್ಟೆರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬಿತ್ತನೆಯಾದ ಪ್ರದೇಶದಲ್ಲಿ ಸಾಗರ ತಾಲೂಕಿನ ತಾಳಗುಪ್ಪದಲ್ಲಿ 500 ಹೇಕ್ಟೆರ್‌, ಕಸಬಾದಲ್ಲಿ 20 ಹೇಕ್ಟೆರ್‌, ಆನಂದಪುರದಲ್ಲಿ 10 ಹೇಕ್ಟೆರ್‌ ಸೊರಬ ತಾಲೂಕಿನ ಅಬಸೇ, ಕಡಸೂರು ಗ್ರಾಮಗಳು ಸೇರಿ ಒಟ್ಟು 610 ಹೇಕ್ಟೆರ್‌ ಪ್ರದೇಶ ಜಲಾವೃತಗೊಂಡಿದೆ. ಜಂಟಿ ಸಮೀಕ್ಷೆ ನಂತರ ಹಾನಿ ಪ್ರಮಾಣ ಅಂದಾಜಿಸಲಾಗುವುದು. ಇನ್ನು ಜಿಲ್ಲೆಯಲ್ಲಿ 47000 ಹೇಕ್ಟೆರ್‌ ಪೈಕಿ 43345 ಹೇಕ್ಟೆರ್‌ ಮೆಕ್ಕೆಜೋಳ ಬಿತ್ತನೆಯಾಗಿದ್ದು ಈವರೆಗೆ ಯಾವುದೇ ಹಾನಿಯಾಗಿಲ್ಲ.

ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಮೆಸ್ಕಾಂ ಇಲಾಖೆಗೆ ಸಂಬಂಧಿಸಿದ 767 ವಿದ್ಯುತ್ ಕಂಬ ಹಾನಿಯಾಗಿದೆ ಹಾಗೂ 16 ಟ್ರಾನ್ಸ್‌ ಫಾರ್ಮರ್‌ ಹಾನಿಯಾಗಿವೆ.

ಪ್ರವಾಹದಿಂದ 24.92 ಕಿ.ಮೀ ರಾಜ್ಯ ಹೆದ್ದಾರಿ, 42.13 ಕಿ.ಮೀ ಜಿಲ್ಲೆಯ ಮುಖ್ಯ ರಸ್ತೆ, 421.00 ಕಿ.ಮೀ ಗ್ರಾಮೀಣ ರಸ್ತೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಪ್ರವಾಹದಿಂದಾಗಿ 110 ಸೇತುವೆಗಳು ಹಾನಿಯಾಗಿರುತ್ತದೆ. 143 ಶಾಲಾ ಕಟ್ಟಡಗಳು, 118 ಅಂಗನವಾಡಿ ಕಟ್ಟಡಗಳು ಹಾಗೂ 9 ಆರೋಗ್ಯ ಕೇಂದ್ರಗಳು ಹಾನಿಗೊಳಗಾಗಿವೆ. ಜಿಲ್ಲೆಯಲ್ಲಿ ಪ್ರವಾಹದಿಂದ 64 ಕೆರೆಗಳು ಹಾನಿಗೊಳಗಾಗಿವೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ತಗ್ಗಿದ ಮಳೆ:

ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ 29.61ಮಿ.ಮೀ ಮಳೆಯಾಗಿದೆ. ಶಿವಮೊಗ್ಗದಲ್ಲಿ 6.70 ಮಿ.ಮೀ, ಭದ್ರಾವತಿ 7.50 ಮಿ.ಮೀ, ತೀರ್ಥಹಳ್ಳಿ 36.10 ಮಿ.ಮೀ, ಸಾಗರದಲ್ಲಿ 57 ಮಿ.ಮೀ, ಶಿಕಾರಿಪುರ 20.80 ಮಿ.ಮೀ, ಸೊರಬದಲ್ಲಿ 39.40 ಮಿ.ಮೀ, ಹೊಸನಗರದಲ್ಲಿ 39.80 ಮಿ.ಮೀ ಮಳೆಯಾಗಿದೆ.

ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಜಲಾಶಯಗಳಲ್ಲೂ ಒಳ ಹರಿವಿನ ಪ್ರಮಾಣ ತಗ್ಗಿದೆ. ತುಂಗಾ ಜಲಾಶಯಕ್ಕೆ ಸೋಮವಾರ 44387 ಕ್ಯುಸೆಕ್‌ ನೀರು ಹರಿದು ಬಂದಿದೆ. ಭಾನುವಾರ 53012 ಕ್ಯುಸೆಕ್‌ ನೀರು ಹರಿದು ಬಂದಿತ್ತು.

ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆಯೂ ಮಳೆ ಪ್ರಮಾಣ ಕುಗ್ಗಿದ್ದು, ಭದ್ರಾ ಜಲಾಶಯದ ಒಳ ಹರಿವು ಕಡಿಮೆಯಾಗಿದೆ. ಸೋಮವಾರ 25367 ಕ್ಯುಸೆಕ್‌ ನೀರು ಜಲಾಶಯಕ್ಕೆ ಹರಿದು ಬಂದಿದ್ದರೆ, ಭಾನುವಾರ 46876 ಕ್ಯುಸೆಕ್‌ ನೀರು ಒಳಹರಿವಿತ್ತು. 186 ಗರಿಷ್ಠ ಮಟ್ಟ ಹೊಂದಿರುವ ಜಲಾಶಯದ ಮಟ್ಟ ಸದ್ಯ 166.6ಕ್ಕೆ ಏರಿಕೆಯಾಗಿದೆ. ಒಟ್ಟು 71.5 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಈಗ 49.24 ಟಿಎಂಸಿ ನೀರು ಸಂಗ್ರಹವಾಗಿದೆ.

ಇನ್ನೂ ಶರಾವತಿ ಜಲಾನಯನ ಪ್ರದೇಶದಲ್ಲೂ ಮಳೆ ಪ್ರಮಾಣ ತಗ್ಗಿದ್ದು, ಲಿಂಗನಮಕ್ಕಿ ಭಾನುವಾರ 48793 ಕ್ಯುಸೆಕ್‌ ನೀರು ಹರಿದು ಬಂದಿದ್ದು, ಸೋಮವಾರ 44387 ತಗ್ಗಿದೆ. ಗರಿಷ್ಟ 1819 ಅಡಿ ಸಾಮರ್ಥ್ಯದ ಜಲಾಶಯದ ಮಟ್ಟ ಸದ್ಯ 1797.6 ಅಡಿಗೆ ಏರಿಕೆಯಾಗಿದೆ.

ಹಳ್ಳದ ದಂಡೆ ಒಡೆದು ಅಡಕೆ ತೋಟ ಜಲಾವೃತ್ತ: ಅಪಾರ ಹಾನಿ

ರಿಪ್ಪನ್‍ಪೇಟೆ: ಕಳೆದ ಒಂದು ವಾರದಿಂದ ಎಡಬಿಡದೆ ಸುರಿದ ಭಾರೀ ಮಳೆಯಿಂದಾಗಿ ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿ ವಡಾಹೊಸಳ್ಳಿ ಗ್ರಾಮದ ಹಳ್ಳ ಉಕ್ಕಿಹರಿದು ಪರಿಣಾಮ ಹಳ್ಳದ ದಂಡೆ ಒಡೆದು ವಡಾಹೊಸಳ್ಳಿ ರೈತ ಕಮಲಾಕ್ಷ ಎಂಬುವರ ಅಡಿಕೆ ತೋಟಕ್ಕೆ ನೀರು ನುಗ್ಗಿ ಜಮೀನು ಸಂಪೂರ್ಣ ಜಲಾವೃತ್ತಗೊಂಡಿದೆ.

ಸರ್ವೇ ನಂಬರ್ 41ರ ಕೃಷಿಕ ಕಮಲಾಕ್ಷ ಎಂಬುವರ ಅಡಕೆ ತೋಟಕ್ಕೆ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಹಳ್ಳದ ದಂಡೆ ಒಡೆದು ಅಡಕೆ ತೋಟಕ್ಕೆ ನೀರು ನುಗ್ಗಿ ನೂರಾರು ಅಡಕೆ ಸಸಿಗಳಿಗೆ ಹಾನಿಯಾಗುವ ಮೂಲಕ ಸಾಕಷ್ಟು ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ.

ಸ್ಥಳ ಗ್ರಾಮ ಲೆಕ್ಕಾಧಿಕಾರಿ ಶ್ರೀವಲ್ಲಿ ಗ್ರಾಮಲೆಕ್ಕಾಧಿಕಾರಿ ರಘು ಭೇಟಿ ನೀಡಿ ಪರಿಶೀಲನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌
ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ