ಕನ್ನಡಪ್ರಭ ವಾರ್ತೆ ಬೆಂಗಳೂರು
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ) ಮೂಲಕ ಪ್ರಸ್ತುತ ನಡೆಸುತ್ತಿದ್ದ ರಾಜ್ಯ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಾಂಕನ ಪರೀಕ್ಷೆಯನ್ನು ಶಾಲಾ ಶಿಕ್ಷಣ ಇಲಾಖೆ ಮುಂದೂಡಿದೆ.ಮಾ.11ರಿಂದ 18ರವರೆಗೆ ನಿಗದಿಯಾಗಿದ್ದ ಪರೀಕ್ಷೆಗಳ ಪೈಕಿ ಈಗಾಗಲೇ ಕನ್ನಡ ಮತ್ತು ಇಂಗ್ಲೀಷ್ ಪರೀಕ್ಷೆಗಳು ನಡೆದಿದ್ದು, ಬುಧವಾರದಿಂದ ಮುಂದಿನ ನಾಲ್ಕು ದಿನ ನಡೆಯಬೇಕಿರುವ ಉಳಿಕೆ ವಿಷಯಗಳ ಪರೀಕ್ಷೆಗಳನ್ನು ಸುಪ್ರೀಂ ಕೋರ್ಟ್‌ನ ಮುಂದಿನ ಆದೇಶ ಬರುವವರೆಗೆ ಮುಂದೂಡಿರುವುದಾಗಿ ತಿಳಿಸಿದೆ.ಈ ಮೂರೂ ತರಗತಿ ಮಕ್ಕಳಿಗೆ ಕೆಎಸ್‌ಇಎಬಿಯಿಂದ ಮೌಲ್ಯಾಂಕನ ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ಅವರ್ ಸ್ಕೂಲ್ಸ್, ರುಪ್ಸಾ ಕರ್ನಾಟಕ ಸಂಘಟನೆಗಳು ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಏಕಸದಸ್ಯ ಪೀಠವು ಸರ್ಕಾರ ಪರೀಕ್ಷೆ ನಡೆಸಲು ಹೊರಡಿಸಿದ್ದ ಸುತ್ತೋಲೆ ಕಾನೂನಾತ್ಮಕವಾಗಿಲ್ಲ ಎಂದು ರದ್ದುಪಡಿಸಿತ್ತು. ಇದರ ವಿರುದ್ಧ ಸರ್ಕಾರ ದ್ವಿಸದಸ್ಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದಾಗ ಅಲ್ಲಿ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿ ಪರೀಕ್ಷೆ ನಡೆಸಲು ಮಧ್ಯಂತರ ಆದೇಶ ನೀಡಲಾಗಿತ್ತು. ಈ ಆದೇಶದ ವಿರುದ್ಧ ಖಾಸಗಿ ಶಾಲಾ ಸಂಘಟನೆಗಳು ಸುಪ್ರೀಂ ಕೋರ್ಟ್ ಕದ ತಟ್ಟಿದ್ದು ಮಂಗಳವಾರ ವಿಚಾರಣೆ ನಡೆಸಿದ ಸವೋಚ್ಚ ನ್ಯಾಯಾಲಯ ಹೈಕೋರ್ಟ್‌ನ ದ್ವಿಸದಸ್ಯ ಪೀಠದ ಮಧ್ಯಂತರ ತೀರ್ಪು ರದ್ದುಪಡಿಸಿ ಮುಂದಿನ ವಿಚಾರಣೆಯನ್ನು ವಿಭಾಗೀಯ ಪೀಠಕ್ಕೆ ವರ್ಗಾಯಿಸಿದೆ. ಹಾಗಾಗಿ ಬುಧವಾರದಿಂದ ನಡೆಯಬೇಕಿದ್ದ ಎಲ್ಲ ಬಾಕಿ ವಿಷಯಗಳ ಪರೀಕ್ಷೆಗಳನ್ನು ಮುಂದಿನ ಆದೇಶದವರೆಗೆ ಮುಂದೂಡಿರುವುದಾಗಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸರ್ಕಾರ ಇನ್ನಾದರೂ ಪ್ರತಿಷ್ಠೆ ಬಿಡಲಿ: ನಿರಂಜನಾರಾಧ್ಯಸರ್ಕಾರ ಇನ್ನಾದರೂ ತನ್ನ ಒಣ ಪ್ರತಿಷ್ಠೆ ಬಿಟ್ಟು ಶಾಲಾ ಹಂತದಲ್ಲಿ ನಡೆದಿರುವ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ ಆಧಾರದಲ್ಲಿ 5, 8 ಮತ್ತು 9ನೇ ತರಗತಿ ಮಕ್ಕಳಿಗೆ ಫಲಿತಾಂಶ ನೀಡಲು ಮುಂದಾಗಬೇಕೆಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಒತ್ತಾಯಿಸಿದ್ದಾರೆ.
ಪೋಷಕ ಸಂಘಟನೆಯಿಂದಲೂ ಅರ್ಜಿಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಖಾಸಗಿ ಶಾಲಾ ಕಾಲೇಜು ಪೋಷಕ ಸಂಘಟನೆಗಳ ಸಮನ್ವಯ ಸಮಿತಿಯ ಬಿ.ಎನ್.ಯೋಗಾನಂದ ಅವರು, ಶಿಕ್ಷಣ ಇಲಾಖೆಯು ಯಾವುದೇ ಅಭಿಪ್ರಾಯ ಪಡೆಯದೆ, ಸಾಧಕ ಬಾಧಕ ಚರ್ಚಿಸದೆ ಈ ಮೂರೂ ತರಗತಿಗೆ ಜಾರಿಗೊಳಿಸಿದ ಬೋರ್ಡ್ ಪರೀಕ್ಷೆಗೆ ಪೋಷಕರ ವಿರೋಧವಿದ್ದರೂ ಅಧಿಕಾರಿಗಳು ಮಾತ್ರ ಮಕ್ಕಳು, ಪೋಷಕರ ತಕರಾರಿಲ್ಲ ಎಂದು ಹೇಳುತ್ತಾ ಬಂದಿದ್ದರು. ಈಗ ಖಾಸಗಿ ಶಾಲಾ ಸಂಘಟನೆಗಳ ಜೊತೆಗೆ ನಾವೂ ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಬೋರ್ಡ್ ಪರೀಕ್ಷೆ ವಿರುದ್ಧ ಅರ್ಜಿ ಸಲ್ಲಿಸಿದ್ದೇವೆ. ನಮ್ಮ ಅರ್ಜಿಯನ್ನೂ ವಿಚಾರಣೆಗೆ ಮಾನ್ಯ ಮಾಡಲಾಗಿದೆ ಎಂದು ತಿಳಿಸಿದ್ದಾರೆ.