ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಶೇ.೫೩ರಷ್ಟು ಪ್ರಗತಿ

KannadaprabhaNewsNetwork | Published : Mar 13, 2024 2:03 AM

ಸಾರಾಂಶ

ಮಾ.೧೧ರವರೆಗೆ ರಾಜ್ಯದಲ್ಲಿ ೧,೨೦,೫೯,೩೯೬ ಆಶಾ ಕಾರ್ಯಕರ್ತೆಯರು ಹಾಗೂ ೨,೬೧,೮೫,೦೫೬ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಂಡು ನಡೆಸಿದ ಸರ್ವೇಯಲ್ಲಿ ೩,೮೫,೫೧,೭೪೫ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳು ದೊರಕಿರುವುದಾಗಿ ತಿಳಿದುಬಂದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಶಕ್ತಿ, ಯುವನಿಧಿ, ಗೃಹಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯದೊಳಗೆ ಶೇ.೫೩ರಷ್ಟು ಪ್ರಗತಿ ಸಾಧಿಸಿರುವುದು ಕಂಡುಬಂದಿದೆ. ನಗರಪ್ರದೇಶದಲ್ಲಿ ಈ ಯೋಜನೆಗಳಿಗೆ ತೀವ್ರ ಹಿನ್ನಡೆಯಾಗಿರುವುದರಿಂದ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಇತರೆ ಇಲಾಖೆ ಸಿಬ್ಬಂದಿ ಮೂಲಕ ಮನೆ ಮನೆ ಸಮೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರೆದಿರುವ ಪತ್ರದ ಅನ್ವಯ ಜನರ ಜೀವನೋಪಾಯಕ್ಕೆ ಅನುಕೂಲವಾಗುವಂಂತೆ , ಹಣದುಬ್ಬರ ಹಾಗೂ ನಿರುದ್ಯೋಗ ಸಮಸ್ಯೆ ಎದುರಿಸಲು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ನಾಗರಿಕರು ಇದರ ಪ್ರಯೋಜನವನ್ನು ಯಾವ ರೀತಿ ಪಡೆಯುತ್ತಿದ್ದಾರೆ ಹಾಗೂ ಗ್ಯಾರಂಟಿಗಳನ್ನು ಪಡೆಯಲು ಸಮಸ್ಯೆ ಎದುರಿಸುತ್ತಿದ್ದಾರೆಯೇ ಎಂಬ ಬಗ್ಗೆ ಮನೆ ಮನೆಗೆ ತೆರಳಿ ಸರ್ವೆ ನಡೆಸಲು ಕ್ರಮ ವಹಿಸುವಂತೆ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ ತಿಳಿಸಿದ್ದಾರೆ.

ಈ ಸಮೀಕ್ಷೆಯ ಜವಾಬ್ದಾರಿಯನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ನೀಡಲಾಗಿದೆ. ರಾಜ್ಯ ಮಟ್ಟದಲ್ಲಿ ಇದರ ಮೇಲುಸ್ತುವಾರಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರು, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನೀಡಲಾಗಿದೆ. ಈ ಸಮೀಕ್ಷೆಯನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಸಿ ಮುಂದಿನ ೧೦ ರಿಂದ ೧೫ ದಿನಗಳೊಳಗೆ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.

ಮಾ.೧೧ರವರೆಗೆ ರಾಜ್ಯದಲ್ಲಿ ೧,೨೦,೫೯,೩೯೬ ಆಶಾ ಕಾರ್ಯಕರ್ತೆಯರು ಹಾಗೂ ೨,೬೧,೮೫,೦೫೬ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಂಡು ನಡೆಸಿದ ಸರ್ವೇಯಲ್ಲಿ ೩,೮೫,೫೧,೭೪೫ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳು ದೊರಕಿರುವುದಾಗಿ ತಿಳಿದುಬಂದಿದೆ. ಇದರಲ್ಲಿ ಗೃಹಲಕ್ಷ್ಮೀ-೬೮,೩೨,೯೭೭ ಮಂದಿ, ಗೃಹಜ್ಯೋತಿ-೯೨,೨೫,೮೪೦, ಯುವನಿಧಿ-೩,೮೦,೬೯೦, ಅನ್ನಭಾಗ್ಯ-೧,೫೧,೯೩,೭೬೬, ಶಕ್ತಿ-೭೧,೧೪,೦೬೦ ಫಲಾನುಭವಿಗಳು ಪಡೆದುಕೊಂಡಿದ್ದು, ಇದರಲ್ಲಿ ನಗರವಾಸಿಗಳು ೩,೯೯,೮೧೧ ಮಂದಿ ಮಾತ್ರ ಪಡೆದಿರುವುದಾಗಿ ಸಮೀಕ್ಷೆಯಿಂದ ತಿಳಿದುಬಂದಿರುವುದಾಗಿ ಹೇಳಿದ್ದಾರೆ.

Share this article