ನರಗುಂದ: ಮಾತೃಹೃದಯ ಅಂತಃಕರಣದ ಕರುಣಾಮಯಿಗಳಾಗಿದ್ದ ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಭಕ್ತರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದವರು ಎಂದು ನವಲಗುಂದ ಗವಿಮಠದ ಬಸವಲಿಂಗ ಶ್ರೀಗಳು ಹೇಳಿದರು.
ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಶ್ರೀ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ. ತೋಂಟದ ಸಿದ್ಧಲಿಂಗ ಶ್ರೀಗಳ 77ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜ ಸೇವೆಯೇ ಶಿವಪೂಜೆ ಎಂದರತಿದ್ದ ಶ್ರೀಗಳು ಧಾರ್ಮಿಕ ಆಚರಣೆ ಮತ್ತು ಸಾಮಾಜಿಕ ಸುಧಾರಣೆಗಳಲ್ಲಿ ಜನಸಾಮಾನ್ಯರ ಪರ ಧ್ವನಿ ಎತ್ತಿ ಸರ್ವ ಜನಾಂಗದವರನ್ನೂ ಅಪ್ಪಿ ಒಪ್ಪಿಕೊಂಡಿದ್ದರು ಎಂದು ಹೇಳಿದರು.ಕನ್ನಡ ನಾಡು-ನುಡಿಗಾಗಿ ಅವರು ಮಾಡಿದ ಹೋರಾಟ ಕನ್ನಡ ಸಾರಸ್ವತ ಲೋಕದ ಚರಿತ್ರೆಯಲ್ಲಿ ಅಜರಾಮರವಾದುದು. ಲಿಂಗಾಯತ ಅಧ್ಯಯನ ಸಂಸ್ಥೆಯ ಮೂಲಕ 500ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ಒಂದು ವಿಶ್ವವಿದ್ಯಾಲಯ ಮಾಡಬಹುದಾದ ಕೆಲಸವನ್ನು ಶ್ರೀಗಳು ಸಾಧಿಸಿದ್ದು, ಅವರ ಪುಸ್ತಕ ಪ್ರೀತಿಯನ್ನು ತೋರಿಸುತ್ತದೆ. ಜಗದ್ಗುರುಗಳಾದವರು ತಮ್ಮ ಸ್ಥಾನಮಾನಗಳ ಬಿಗುಮಾನಗಳನ್ನು ಬದಿಗಿರಿಸಿ ಶ್ರೀಸಾಮಾನ್ಯರೊಂದಿಗೆ ಡಂಬಳದ ರಥಬೀದಿಯಲ್ಲಿ ನಿಂತಿದ್ದು, ಅವರ ಪ್ರಗತಿಪರ ಚಿಂತನೆಯನ್ನು ತೋರಿಸುತ್ತದೆ ಎಂದು ಹೇಳಿದರು.
ವಿಶ್ರಾಂತ ಉಪನ್ಯಾಸಕ ಪ್ರೊ. ಎಸ್.ಬಿ. ಭಜಂತ್ರಿ ಮಾತನಾಡಿ, ದುಡಿಯುವವರ, ಶ್ರಮಿಕರ ಪರವಾದ ಉದಾರತೆ ತೋರಿದ ತೋಂಟದ ಶ್ರೀಗಳು ಈ ಶತಮಾನದ ಬಸವಣ್ಣ. ಅರಣ್ಯ, ಪ್ರಾಣಿ, ರೈತ ಹಾಗೂ ಶ್ರಮಿಕರು ಹೀಗೆ ಸಮಾಜದಲ್ಲಿರುವ ಪ್ರತಿಯೊಬ್ಬರಿಗೂ ಅನ್ಯಾಯವಾದಾಗ ಹೋರಾಟದ ಮೂಲಕ ಅವರಿಗೆ ನ್ಯಾಯ ಕೊಡಿಸಲು ಪ್ರಯತ್ನಿಸಿದ ಶ್ರೀಗಳು ಸರ್ವರಿಗೂ ಆದರ್ಶಪ್ರಾಯರು ಎಂದು ಹೇಳಿದರು.ಜಾತಿ ಭೇದವರಿಯದೆ ಮನುಕುಲದ ಒಳಿತಿಗಾಗಿ ಶ್ರಮಿಸಿದ ಎಲ್ಲ ಜನಾಂಗದ ಮಹನೀಯರ ಜಯಂತಿಯನ್ನು ಶ್ರೀಮಠದಲ್ಲಿ ಆಚರಿಸಿ, ಭಾವೈಕ್ಯದ ಸಂದೇಶ ಸಾರಿದವರು. ಭಾಷೆ, ನಾಡು, ಜನರ ಹಿತಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟವರು. ಕನ್ನಡ ಭಾಷೆ ಉಳಿದರೆ ನಾವು ಉಳಿದೇವು ಎಂಬ ನಿಲುವನ್ನು ಹೊಂದಿದ್ದ ಶ್ರೀಗಳು, ತಮ್ಮ ಉಸಿರು ಇರುವ ವರೆಗೂ ಕನ್ನಡದ ಸಂರಕ್ಷಣೆಗೆ ಕಂಕಣಬದ್ಧರಾಗಿದ್ದರು ಎಂದರು.
ಮುಖ್ಯ ಶಿಕ್ಷಕ ವಿ.ಜಿ. ಬೋಗಾರ ಅವರನ್ನು ಶ್ರೀಮಠದಿಂದ ಶಾಂತಲಿಂಗ ಶ್ರೀಗಳು ಗೌರವಿಸಿದರು. ಭೈರನಹಟ್ಟಿ-ಶಿರೋಳ ಮಠದ ಪೀಠಾಧಿಪತಿ ಶಾಂತಲಿಂಗ ಶ್ರೀಗಳು, ಬಿ.ಎಂ. ಲಂಕೆನ್ನವರ, ಎಸ್.ಎಸ್. ಪಾಟೀಲ, ಪ್ರೊ. ರಮೇಶ ಐನಾಪುರ, ಪ್ರೊ. ಆರ್.ಬಿ. ಚಿನಿವಾಲರ, ಶಿಕ್ಷಕ ಮಹಾಂತೇಶ ಹಿರೇಮಠ ಇದ್ದರು.