ಗೋವಾಕ್ಕೆ ಸಾಗಿಸುತ್ತಿದ್ದ 50 ಸಾವಿರ ಲೀಟರ್ ಸ್ಪಿರಿಟ್ ವಶಕನ್ನಡಪ್ರಭ ವಾರ್ತೆ ಕಾರವಾರ
ಕಾರವಾರ ಮತ್ತು ದಾಂಡೇಲಿ ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ದಾವಣಗೆರೆಯಿಂದ ಗೋವಾಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 50 ಸಾವಿರ ಲೀಟರ್ ರೆಕ್ಟಿಫೈಡ್ ಸ್ಪಿರಿಟ್ ತುಂಬಿದ್ದ ಎರಡು ಟ್ಯಾಂಕರ್ ಲಾರಿಗಳನ್ನು ವಶಪಡಿಸಿಕೊಂಡಿದ್ದಾಗಿ ಅಬಕಾರಿ ಜಂಟಿ ಆಯುಕ್ತ ಎ.ಎಲ್. ನಾಗೇಶ ಮಾಹಿತಿ ನೀಡಿದರು.ಸೋಮವಾರ ಅಬಕಾರಿ ಇಲಾಖೆ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜೋಯಿಡಾ ತಾಲೂಕಿನ ರಾಮನಗರ ಸಮೀಪದ ಅನಮೋಡ್ ಚೆಕ್‌ಪೋಸ್ಟ್ ಬಳಿ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆದಿದ್ದು, ವಶಪಡಿಸಿಕೊಂಡ ಸ್ಪಿರಿಟ್ ಮೌಲ್ಯ ಸುಮಾರು 35ರಿಂದ ₹40 ಲಕ್ಷ ಎಂದು ಅಂದಾಜಿಸಲಾಗಿದೆ. ಟ್ಯಾಂಕರ್ ಲಾರಿಗಳು ಸೇರಿದಂತೆ ಒಟ್ಟು ₹90 ಲಕ್ಷ ಮೌಲ್ಯದ ಸೊತ್ತನ್ನು ಜಪ್ತಿ ಮಾಡಲಾಗಿದ್ದು, ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.
ಕೈಗಾರಿಕಾ ಉದ್ದೇಶದ (ಡಿನೇಚರ್ಡ್ ಸ್ಪಿರಿಟ್) ನೆಪದಲ್ಲಿ ದಾವಣಗೆರೆಯ ಡಿಸ್ಟಿಲರಿಯಿಂದ ಗೋವಾಕ್ಕೆ ಸಾಗಿಸಲಾಗುತ್ತಿದ್ದ ಈ ಸ್ಪಿರಿಟ್ ಬಳಸಿ, ನಕಲಿ ಮದ್ಯ ತಯಾರಿಸುವ ಬೃಹತ್ ಜಾಲವೊಂದು ಕಾರ್ಯಾಚರಿಸುತ್ತಿತ್ತು ಎನ್ನುವುದು ತನಿಖೆಯಿಂದ ಬಯಲಾಗಿದೆ. ಕೇವಲ ₹50 ಲಕ್ಷ ಬಂಡವಾಳದಲ್ಲಿ ಈ ಸ್ಪಿರಿಟ್ ಬಳಸಿ, ಕೆರಮೆಲ್ ಹಾಗೂ ಇತರ ರಾಸಾಯನಿಕಗಳನ್ನು ಬೆರೆಸಿ ಸುಮಾರು 2 ಲಕ್ಷದ 40 ಸಾವಿರ ನಕಲಿ ಮದ್ಯದ ಬಾಟಲಿಗಳನ್ನು ತಯಾರಿಸಬಹುದಾಗಿದೆ. ಗೋವಾದಲ್ಲಿ ತಯಾರಾಗುವ ಈ ಅಕ್ರಮ ಮದ್ಯವನ್ನು ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಮಹಾರಾಷ್ಟ್ರಕ್ಕೆ ಸರಬರಾಜು ಮಾಡಿ ಬರೋಬ್ಬರಿ ₹40 ರಿಂದ 48 ಕೋಟಿಗಳಷ್ಟು ಅಕ್ರಮ ಲಾಭ ಗಳಿಸುವ ದೊಡ್ಡ ಹುನ್ನಾರ ಇದಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಅಬಕಾರಿ ಇಲಾಖೆ ಇತಿಹಾಸದಲ್ಲೇ ಇದೊಂದು ಪ್ರಥಮ ಹಾಗೂ ಅತಿ ದೊಡ್ಡ ಕಾರ್ಯಾಚರಣೆ ಎನ್ನಲಾಗಿದೆ.ಗೋವಾ ಮದ್ಯದ ಅಕ್ರಮ ಸಾಗಾಣಿಕೆ ತಡೆಗಟ್ಟಲು ರಾಜ್ಯ ಸರ್ಕಾರ ಹಾಗೂ ಅಬಕಾರಿ ಆಯುಕ್ತರಾದ ವೆಂಕಟೇಶ್ ಕುಮಾರ್ ಅವರ ನಿರ್ದೇಶನದಂತೆ ಗೋವಾ ಕರ್ಬಿಂಗ್ ಲಿಕ್ಕರ್ ಟೀಮ್ ಹೆಸರಿನಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ಈ ಕಾರ್ಯಾಚರಣೆ ಅದರ ಭಾಗವಾಗಿದೆ ಎಂದು ಅಬಕಾರಿ ಜಂಟಿ ಆಯುಕ್ತರು ಮಾಹಿತಿ ನೀಡಿದರು. ಈ ಅಕ್ರಮ ದಂಧೆಯಲ್ಲಿ ಭಾಗಿಯಾಗಿರುವ ದೊಡ್ಡ ಕುಳಗಳನ್ನು ಬಯಲಿಗೆಳೆಯಲು ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಾರವಾರ ಅಬಕಾರಿ ವಿಭಾಗದಲ್ಲಿ ಕಳೆದ ಒಂದು ವರ್ಷದಲ್ಲಿ 1337 ಪ್ರಕರಣ ದಾಖಲಿಸಿ, 6161 ಲೀಟರ್ ಗೋವಾ ಮದ್ಯ, 9550 ಲೀಟರ್ ಬಿಯರ್ ಸೇರಿದಂತೆ ಅಪಾರ ಪ್ರಮಾಣದ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಅಲ್ಲದೇ ಅಕ್ರಮ ಮದ್ಯ ಮಾರಾಟದ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಾರ್ವಜನಿಕರು ಹಾಗೂ ಮಾಧ್ಯಮಗಳು ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಉತ್ತರಕನ್ನಡ ಅಬಕಾರಿ ಉಪಆಯುಕ್ತ ಅಮಾನುಲ್ಲಾ ಖಾನ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.ಪೊಲೀಸ್ ಮಾದರಿಯಲ್ಲಿ ಅಬಕಾರಿ ಇಲಾಖೆ ಮೇಲ್ದರ್ಜೆಗೆ
ಅಕ್ರಮ ಮದ್ಯ ಸಾಗಾಣಿಕೆಯನ್ನು ಸಂಪೂರ್ಣವಾಗಿ ಮಟ್ಟಹಾಕಲು ಮತ್ತು ಕಾಡು ದಾರಿ ಹಾಗೂ ಜಲಮಾರ್ಗಗಳ ಮೂಲಕ ನಡೆಯುವ ಸಾಗಾಣಿಕೆಯನ್ನು ತಡೆಯಲು ಅಬಕಾರಿ ಇಲಾಖೆ ಮೇಲ್ದರ್ಜೆಗೇರುತ್ತಿದೆ. ಇಲಾಖೆಗೆ ಪೊಲೀಸ್ ಮಾದರಿಯಲ್ಲಿ ಶಸ್ತ್ರಾಸ್ತ್ರ, ಡಾಗ್ ಸ್ಕ್ವಾಡ್, ಡಿಂಗಿ ಸ್ಕ್ವಾಡ್ ಮತ್ತು ವಾಹನಗಳನ್ನು ತಪಾಸಣೆ ಮಾಡಲು ಹ್ಯಾಂಡ್ ಮೇಡ್ ಸ್ಕ್ಯಾನರ್‌ಗಳ ಅಗತ್ಯವಿದ್ದು, ಈ ಬಗ್ಗೆ ₹20 ಕೋಟಿಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅಲ್ಲದೇ ಅಧಿಕಾರಿ, ಸಿಬ್ಬಂದಿಗೆ ಶಸ್ತ್ರಾಸ್ತ್ರ ತರಬೇತಿಗೆ ಪ್ರತ್ಯೇಕ ಅಬಕಾರಿ ಅಕಾಡೆಮಿ ಮತ್ತು ಅಕ್ರಮ ಮದ್ಯ ಸಾಗಾಟ ಜಾಲದ ಸಂಪರ್ಕ ಪತ್ತೆಗೆ ಹಾಗೂ ಇಲಾಖೆಯೊಳಗಿನ ಮಾಹಿತಿ ಸೋರಿಕೆ ತಡೆಯಲು ಸಿಡಿಆರ್ ಟ್ರ್ಯಾಕಿಂಗ್ ಅಧಿಕಾರ ನೀಡುವಂತೆ ಸರ್ಕಾರಕ್ಕೆ ಕೋರಲಾಗಿದೆ ಎಂದು ಜಂಟಿ ಆಯುಕ್ತರು ತಿಳಿಸಿದ್ದಾರೆ.