5, 6 ರಂದು ರಾಜ್ಯ, ಅಂತಾರಾಜ್ಯ ಜೋಡಿ ಎತ್ತುಗಳ ಖಾಲಿ ಗಾಡಾ ಶರತ್ತು

KannadaprabhaNewsNetwork | Published : Dec 31, 2023 1:31 AM

ಸಾರಾಂಶ

ಕರುನಾಡ ವಿಜಯಸೇನೆ ತಾಲೂಕು ಘಟಕದ ಆಶ್ರಯದಲ್ಲಿ ಜ.5 ಮತ್ತು 6 ರಂದು ರಾಜ್ಯ ಮತ್ತು ಅಂತಾರಾಜ್ಯ ಮಟ್ಟದ ಜೋಡಿ ಎತ್ತುಗಳಿಂದ ಖಾಲಿ ಗಾಡಾ ಓಡಿಸುವ ಭಾರೀ ಜಂಗೀ ಶರತ್ತು ನಡೆಯಲಿದೆ.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಪ್ರಪ್ರಥಮ ಬಾರಿಗೆ ಕರುನಾಡ ವಿಜಯಸೇನೆ ತಾಲೂಕು ಘಟಕದ ಆಶ್ರಯದಲ್ಲಿ ಜ.5 ಮತ್ತು 6 ರಂದು ರಾಜ್ಯ ಮತ್ತು ಅಂತಾರಾಜ್ಯ ಮಟ್ಟದ ಜೋಡಿ ಎತ್ತುಗಳಿಂದ ಖಾಲಿ ಗಾಡಾ ಓಡಿಸುವ ಭಾರೀ ಜಂಗೀ ಶರತ್ತು ಪಟ್ಟಣದ ಬೈಲವಾಡ ರಸ್ತೆಯ ವಿದ್ಯಾನಗರ 4ನೇ ಅಡ್ಡರಸ್ತೆಯ ಶಿವಾನಂದ ಮುದಕವಿ, ಬಿ.ಎಸ್.ತಳವಾರ ಅವರ ಜಮೀನಿನಲ್ಲಿ ಅದ್ಧೂರಿಯಾಗಿ ಜರುಗಲಿದೆ. ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹಿರಿಯರಾದ ಗಂಗಪ್ಪ ಬೋಳಣ್ಣವರ ಮನವಿ ಮಾಡಿದರು.

ಪಟ್ಟಣದಲ್ಲಿ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಸ್ವಾತಂತ್ರ್ಯದ ಬೆಳ್ಳಿ ಚುಕ್ಕಿ ವೀರರಾಣಿ ಕಿತ್ತೂರು ಚನ್ನಮ್ಮ ಅವರು 23.10.1824 ರಂದು ಬ್ರಿಟಿಷ್ ಕಂಪನಿ ಸರ್ಕಾರದ ವಿರುದ್ಧ ಯುದ್ಧ ಮಾಡಿ ಅವರನ್ನು ಸೋಲಿಸಿದ ದಿನವಾಗಿದೆ. ಈ ಘಟನೆ ನಡೆದು 200 ವರ್ಷಗಳು ಆಗಿವೆ. ಇದರ ಸ್ಮರಣಾರ್ಥ ಭಾರಿ ಜಂಗೀ ಜೋಡೆತ್ತುಗಳ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಇದರಿಂದ ರೈತ ಬಾಂಧವರಿಗೆ ತಮ್ಮ ಹೋರಿಗಳನ್ನು ಶರತ್ತಿನಲ್ಲಿ ಭಾಗವಹಿಸಲು ಅವಕಾಶ ಇದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಪುರಸಭೆ ಸದಸ್ಯ ವಿಜಯ ಬೋಳಣ್ಣವರ, ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ ಮಾತನಾಡಿ, ಕರುನಾಡ ವಿಜಯ ಸೇನೆಯ ಆಶ್ರಯದಲ್ಲಿ ರೈತರ ಅಭಿಲಾಷೆಯಂತೆ ಭಾರೀ ಜಂಗೀ ಶರತ್ತು ಏರ್ಪಡಿಸಲಾಗಿದ್ದು, ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ವಿಜೇತರಿಗೆ ಅತ್ಯಾಕರ್ಷಕ ಬಹುಮಾನವನ್ನು ನೀಡಲಾಗುತ್ತದೆ ಎಂದರು.

ಸಮಾರಂಭವನ್ನು ನ್ಯಾಯವಾದಿ ಶ್ರೀಶೈಲ ಬೋಳಣ್ಣವರ ಉದ್ಘಾಟಿಸಲಿದ್ದು, ಸಾನ್ನಿಧ್ಯವನ್ನು ಬೆಳವಡಿಯ ಮಹಾಗಣಪತಿ ಶಕ್ತಿ ಪೀಠದ ಶಿವಪಂಚಾಕ್ಷರಿ ಸ್ವಾಮೀಜಿ, ಮಹಾಂತೇಶಶಾಸ್ತ್ರೀ ಆರಾದ್ರಿಮಠ ವಹಿಸಲಿದ್ದರೆ. ಅತಿಥಿಗಳಾಗಿ ಗಂಗಪ್ಪ ಬೋಳಣ್ಣವರ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಕರುನಾಡ ವಿಜಯ ಸೇನೆ ರಾಜ್ಯಾಧ್ಯಕ್ಷ ಎಚ್.ಎನ್.ದೀಪಕ, ಪುರಸಭೆ ಮಾಜಿ ಉಪಾಧ್ಯಕ್ಷ ಬಿ.ಎಂ.ಕುಡಸೋಮಣ್ಣವರ, ಸದಸ್ಯ ಬಾಬು ಕುಡಸೋಮಣ್ಣವರ, ಜಿಲ್ಲಾಧ್ಯಕ್ಷ ಸುರೇಶ ಇಟಗಿ, ಪತ್ರಕರ್ತರಾದ ಮಹಾಂತೇಶ ತುರಮರಿ, ಈಶ್ವರ ಹೋಟಿ, ಕಲಾವಿದ ಸಿ.ಕೆ.ಮೆಕ್ಕೇದ, ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ, ತಾಲೂಕಾಧ್ಯಕ್ಷ ವಿಠ್ಠಲ ಕಡಕೋಳ, ಕಾರ್ಖಾನೆ ನಿರ್ದೇಶಕ ರಾಜು ಕುಡಸೋಮಣ್ಣವರ, ಬಸಪ್ಪ ಕಡಕೋಳ ಆಗಮಿಸಲಿದ್ದಾರೆ ಎಂದರು.

ಪ್ರಥಮ ಬಹುಮಾನ ₹1 ಲಕ್ಷ, ದ್ವಿತೀಯ ಬಹುಮಾನ ₹80 ಸಾವಿರ, ತೃತೀಯ ಬಹುಮಾನ ₹70 ಸಾವಿರ ಹಾಗೂ ಇನ್ನೂ 20 ಆಕರ್ಷಕ ಬಹುಮಾನಗಳನ್ನು ನೀಡಲಿದ್ದು, ಪ್ರವೇಶ ಫೀ ₹8 ಸಾವಿರ ನಿಗದಿ ಪಡಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.

ಪುರಸಭೆ ಸದಸ್ಯ ಉಳವಪ್ಪ ಬಡ್ಡಿಮನಿ, ವಿಠ್ಠಲ ಅಂದಾನಿ, ಆನಂದ ಯರಗಟ್ಟಿ, ಬಸವರಾಜ ಯಾಸನ್ನವರ, ಅನೀಲ ಬೋಳಣ್ಣವರ, ಸೋಮಪ್ಪ ಪಟ್ಟೇದ, ಅದೃಶ್ಯಪ್ಪ ಹುಚ್ಚನ್ನವರ, ಮಲ್ಲಿಕಾರ್ಜುನ ಕಮತಗಿ, ವಿಜಯ ದಳವಾಯಿ, ಶ್ರೀಕಾಂತ ಮತ್ತಿಕೊಪ್ಪ ಉಪಸ್ಥಿತರಿದ್ದರು.

Share this article