ಮಹಿಳೆಯರು ವಿದ್ಯಾವಂತರಾಗಿ ಸಮಾಜಮುಖಿ ಕೆಲಸ ಮಾಡಿ

KannadaprabhaNewsNetwork | Published : Dec 31, 2023 1:31 AM

ಸಾರಾಂಶ

ಹೇಮರಡ್ಡಿ ಮಲ್ಲಮ್ಮ ಕಾರ್ತಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ ಮಹಿಳೆಯರು ವಿದ್ಯಾವಂತರಾಗಿ ಸಮಾಜಮುಖಿ ಕೆಲಸ ಮಾಡಿ ಎಂದು ಹೇಳಿದರು.

ಕನ್ನಡ ಪ್ರಭ ವಾರ್ತೆ ಮುಧೋಳ

ಪ್ರತಿಯೊಬ್ಬ ಮಹಿಳೆಯರು ವಿದ್ಯಾವಂತರಾಗಬೇಕು, ಮಹಿಳೆಯರ ಕ್ಷೇಮಾಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು, ಮಹಿಳೆಯರು ಒಗ್ಗಟ್ಟಾಗಿ ಕೆಲಸ ಕಾರ್ಯ ಮಾಡಬೇಕು, ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಎಲ್ಲ ರೀತಿಯ ಸಹಾಯ ಸಹಕಾರ ನೀಡಬೇಕೆಂದು ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಹೇಳಿದರು.

ಮುಧೋಳ ತಾಲೂಕು ರೆಡ್ಡಿ ಸಮಾಜದ ಮಹಿಳೆಯರು ಶುಕ್ರವಾರ ಸಂಜೆ ಸ್ಥಳೀಯ ಹೆಮರಡ್ಡಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ ಕಾರ್ತಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮುಧೋಳ ತಾಲೂಕಿನಲ್ಲಿ ರೆಡ್ಡಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತಮ್ಮ ಸಮಾಜದ ಅಭಿವೃದ್ಧಿ ಜತೆಗೆ ಇತರೆ ಸಮಾಜದ ಅಭಿವೃದ್ಧಿಗೆ ಒತ್ತು ನೀಡಬೇಕು. ರೆಡ್ಡಿ ಸಮಾಜದ ಮಹಿಳೆಯರು ಒಂದಾಗಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಬೇಕು. ಕಷ್ಟದಲ್ಲಿರುವವರನ್ನು ಗುರುತಿಸಿ ಅವರಿಗೆ ಸಹಾಯ ಮಾಡಬೇಕು. ರಡ್ಡಿ ಸಮಾಜದ ಮಹಿಳೆಯರು ಕಾರ್ತಿಕೋತ್ಸವದಂತಹ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಎಲ್ಲರೂ ಒಂದೆಡೆ ಸೇರಿ ಹೊಸ ಹೊಸ ವಿಚಾರ ವಿನಿಮಯ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರಡ್ಡಿ ಪತ್ನಿ ಚಾಮುಂಡೇಶ್ವರಿ ಮಾತನಾಡಿ, ರಡ್ಡಿ ಸಮಾಜದ ಮಹಿಳೆಯರು ಇಂತಹ ಬೃಹತ್ ಕಾರ್ಯ ಕ್ರಮ ಆಯೋಜನೆ ಮಾಡಿರುವುದಕ್ಕೆ ಅಭಿನಂದಿಸುವುದಾಗಿ ಹೇಳಿದರು.

ಎರೆಹೊಸಳ್ಳಿಯ ವೇಮನಾನಂದ ಮಹಾಸ್ವಾಮೀಜಿ ಹಾಗೂ ವಿಶ್ವಪ್ರಭು ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಮಹಿಳೆಯರು ಮನಸ್ಸು ಮಾಡಿದರೆ ಎಂತಹ ಕಾರ್ಯಕ್ರಮವನ್ನು ಸರಳ ಮತ್ತು ಸುಂದರವಾಗಿ ಮಾಡಬಹುದು ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ ಎಂದು ಹೇಳಿದ ಅವರು, ತಾವು ಹೇಮರಡ್ಡಿ ಮಲ್ಲಮ್ಮನ ತತ್ವ, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಸೌಮ್ಯಾ ರಡ್ಡಿ, ತಾಯಿ ಚಾಮುಂಡೇಶ್ವರಿ ರೆಡ್ಡಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ರನ್ನ ಶುಗರ್ಸ್‌ ಮಾಜಿ ಅಧ್ಯಕ್ಷ ಲಕ್ಷ್ಮಣ ತಳೇವಾಡ, ಡಾ.ಸಂಕ್ರಟ್ಟಿ, ಜ್ಯೋತಿ ಪಾಟೀಲ, ನಿರ್ಮಲಾ ಮಲಘಾಣ, ಡಾ.ವೀಣಾ ಕಕರಡ್ಡಿ, ಡಾ.ಆಶಾ ಮಲಘಾಣ, ಡಾ.ಪಾರ್ವತಿ ನಾಯಿಕ ಸೇರಿದಂತೆ ಸಪ್ತಸ್ವರ ಸಂಗೀತ ಹಾಗೂ ನೃತ್ಯ ಸಂಸ್ಥೆಯ ಪದಾಧಿಕಾರಿಗಳು, ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.

Share this article