ಇಂದು 5, 8, 9ನೇ ಕ್ಲಾಸ್‌ ಬೋರ್ಡ್‌ ಪರೀಕ್ಷೆ ಫಲಿತಾಂಶ

KannadaprabhaNewsNetwork |  
Published : Apr 08, 2024, 01:03 AM ISTUpdated : Apr 08, 2024, 07:41 AM IST
ಪರೀಕ್ಷೆ | Kannada Prabha

ಸಾರಾಂಶ

ರಾಜ್ಯ ಪಠ್ಯಕ್ರಮದ ಶಾಲೆಗಳ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಾಗಿದ್ದ ಮೌಲ್ಯಾಂಕನ ಪರೀಕ್ಷೆಯ ಫಲಿತಾಂಶವನ್ನು ಆಯಾ ಶಾಲೆಗಳಲ್ಲಿ ಸೋಮವಾರ (ಏ.8) ಪ್ರಕಟಿಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸೂಚಿಸಿದೆ.

  ಬೆಂಗಳೂರು : ರಾಜ್ಯ ಪಠ್ಯಕ್ರಮದ ಶಾಲೆಗಳ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಾಗಿದ್ದ ಮೌಲ್ಯಾಂಕನ ಪರೀಕ್ಷೆಯ ಫಲಿತಾಂಶವನ್ನು ಆಯಾ ಶಾಲೆಗಳಲ್ಲಿ ಸೋಮವಾರ (ಏ.8) ಪ್ರಕಟಿಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸೂಚಿಸಿದೆ. 2023-24ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಿಗೆ ಕಳೆದ ಮಾರ್ಚ್‌ನಲ್ಲಿ ಮೌಲ್ಯಾಂಕನ ಪರೀಕ್ಷೆ ನಡೆಸಲಾಗಿತ್ತು. ಬ್ಲಾಕ್ ಹಂತದಲ್ಲಿ ಮೌಲ್ಯಮಾಪನ ಕಾರ್ಯವನ್ನು ಪೂರ್ಣಗೊಳಿಸಿ ಉತ್ತರ ಪತ್ರಿಕೆಗಳ ಸಹಿತ ಶಾಲಾವಾರು ವಿದ್ಯಾರ್ಥಿಗಳ ಅಂಕಗಳನ್ನು ದಾಖಲಿಸಿರುವ ಪ್ರತಿಯನ್ನು ಆಯಾ ಶಾಲೆಗಳಿಗೆ ರವಾನಿಸಲಾಗಿದೆ.

ಯಾವುದೇ ಕಾರಣಕ್ಕೂ ವಿಳಂಬ ಮಾಡದಂತೆ ಸೋಮವಾರ ಶಾಲಾ ಹಂತದಲ್ಲಿ ಫಲಿತಾಂಶ ಪ್ರಕಟಿಸಬೇಕು. ಫಲಿತಾಂಶ ಪ್ರಕಟಿಸಿರುವ ಬಗ್ಗೆ ಜಿಲ್ಲಾ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಂಡಳಿಗೆ ಹಾಗೂ ಶಾಲಾ ಮುಖ್ಯಸ್ಥರು, ಆಡಳಿತ ಮಂಡಳಿಗಳು ತಮ್ಮ ಕಚೇರಿಗೆ ಮಾಹಿತಿ ನೀಡಬೇಕೆಂದು ಮಂಡಳಿಯ ಅಧ್ಯಕ್ಷರು ಸೂಚಿಸಿದ್ದಾರೆ.ಇಂದು ಸುಪ್ರೀಂಕೋರ್ಟಲ್ಲಿ ವಿಚಾರಣೆ

5, 8 ಮತ್ತು 9ನೇ ತರಗತಿ ಮೌಲ್ಯಾಂಪನ ಪರೀಕ್ಷೆ ಪ್ರಶ್ನಿಸಿ ಖಾಸಗಿ ಶಾಲಾ ಸಂಘಟನೆಗಳಾದ ಅವರ್‌ ಸ್ಕೂಲ್ಸ್‌ ಮತ್ತು ರುಪ್ಸಾ ಕರ್ನಾಟಕ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯು ಸೋಮವಾರ ವಿಚಾರಣೆಗೆ ಬರಲಿದೆ ಎಂದು ತಿಳಿದುಬಂದಿದೆ. ಸವೋಚ್ಚ ನ್ಯಾಯಾಲಯದಿಂದ ಯಾವ ರೀತಿಯ ಆದೇಶ ಬರುವುದೋ ಎಂಬ ಆತಂಕದಿಂದಲೇ ಶಿಕ್ಷಣ ಇಲಾಖೆಯು ಸೋಮವಾರ 9 ಗಂಟೆಗೆ ಶಾಲೆಗಳಲ್ಲಿ ಈ ಮೂರು ತರಗತಿಯ ಫಲಿತಾಂಶ ಪ್ರಕಟಿಸುವಂತೆ ಸೂಚಿಸಿದೆ.

ತರಾತುರಿಯಲ್ಲಿ ಇಲಾಖೆಯ ಉನ್ನತ ಅಧಿಕಾರಿಗಳು ಬಿಇಒ, ಡಿಡಿಪಿಐಗಳ ಸಭೆ ನಡೆಸಿ ತಮ್ಮ ವ್ಯಾಪ್ತಿಯ ಶಾಲೆಗಳಲ್ಲಿ ಸೋಮವಾರ ಫಲಿತಾಂಶ ಪ್ರಕಟಿಸಲು ಕ್ರಮ ವಹಿಸಲು ಸೂಚಿಸಿದ್ದಾರೆ. ಅದರಂತೆ ಭಾನುವಾರ ರಜೆ ದಿನವೂ ಕೂಡ ಎಲ್ಲ ಬಿಇಒಗಳೂ ತಮ್ಮ ವ್ಯಾಪ್ತಿಯ ಶಾಲಾ ಮುಖ್ಯಸ್ಥರ ಸಭೆ ನಡೆಸಿ ಸೋಮವಾರ ಬೆಳಗ್ಗೆ 9 ಗಂಟೆಗೆ ಫಲಿತಾಂಶ ಪ್ರಕಟಿಸಬೇಕೆಂದು ಸೂಚಿಸಿದ್ದಾರೆ. ಈ ಮಧ್ಯೆ, ಇನ್ನು ಕೆಲವೆಡೆ ಈ ತರಗತಿಗಳ ಮೌಲ್ಯಾಂಕನ ಕಾರ್ಯ ಪೂರ್ಣಗೊಂಡಿಲ್ಲದಿದ್ದರೂ ಫಲಿತಾಂಶ ಪ್ರಕಟಣೆಯಲ್ಲಿ ಕೇವಲ ಪಾಸ್‌ ಎಂದು ನಮೂದಿಸಲು ಸೂಚಿಸಲಾಗಿದೆ ಎಂದು ಕೆಲ ಖಾಸಗಿ ಶಾಲಾ ಮುಖ್ಯಸ್ಥರ ವಲಯದಲ್ಲಿ ಆರೋಪಗಳು ಕೇಳಿಬಂದಿವೆ.ಮೌಲ್ಯಾಂಕನದಲ್ಲಿ 

ಲೋಪ: ಶಿಕ್ಷಕರಿಗೆ ಇಲಾಖೆ ನೋಟಿಸ್‌

ಬೆಂಗಳೂರು: ರಾಜ್ಯ ಪಠ್ಯಕ್ರಮದ ಶಾಲೆಗಳ 5, 8, 9ನೇ ತರಗತಿ ಮಕ್ಕಳ ಬೋರ್ಡ್‌ ಪರೀಕ್ಷೆಯ ಮೌಲ್ಯಮಾಪನ ಕಾರ್ಯದಲ್ಲಿ ಅನೇಕ ಲೋಪದೋಷಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಕೆಲ ಶಾಲಾ ಮುಖ್ಯ ಶಿಕ್ಷಕರಿಗೆ ಶಿಕ್ಷಣ ಇಲಾಖೆ ನೋಟಿಸ್‌ ಜಾರಿ ಮಾಡಿದೆ. ಅಲ್ಲದೆ, ಈ ನೋಟಿಸ್‌ಗೆ ಮೂರು ದಿನಗಳಲ್ಲಿ ಉತ್ತರ ನೀಡದಿದ್ದರೆ ತಮ್ಮ ಶಾಲಾ ಮಾನ್ಯತೆ ರದ್ದುಪಡಿಸುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ದಂಡಿಪುರದ ನಿಸರ್ಗ ವಿದ್ಯಾಮಂದಿರ ಮುಖ್ಯ ಶಿಕ್ಷಕ ಮಧು ಅವರಿಗೆ ಸ್ಥಳೀಯ ಬಿಇಒ ನೋಟಿಸ್‌ ನೀಡಿದ್ದು, ತಾವು 5ನೇ ತರಗತಿ ಫಲಿತಾಂಶ ಪ್ರಕಟಣೆಗೂ ಮುನ್ನ ಗೌಪ್ಯತೆ ಕಾಯ್ದುಕೊಳ್ಳದೆ ತಮ್ಮ ಶಾಲೆಯ ಮೌಲ್ಯಮಾಪನ ಕುರಿತಾದ ಮಾರ್ಕ್‌ ಶೀಟ್‌ ಪ್ರತಿಯು ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇದು ನಿಮ್ಮ ಬೇಜವಾಬ್ದಾರಿಯನ್ನು ತೋರಿಸುತ್ತದೆ. ಇದಕ್ಕೆ ಮೂರು ದಿನದಲ್ಲಿ ಉತ್ತರ ನೀಡಿ. ಇಲ್ಲದಿದ್ದರೆ ತಮ್ಮ ಶಾಲೆಯ ಮಾನ್ಯತೆ ರದ್ದುಪಡಿಸುವುದಾಗಿ ತಿಳಿಸಿದ್ದಾರೆ.

ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಈ ಮೂರು ತರಗತಿ ಮೌಲ್ಯಾಂಕನದ ಬಳಿಕ ಶಾಲೆಗಳಿಗೆ ಕಳುಹಿಸಿರುವ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿದಾಗ ಕೆಲ ಬಂಡಲ್‌ಗಳು ಕಟ್ಟಿದ ದಾರ ಬಿಚ್ಚಿದ ಸ್ಥಿತಿಯಲ್ಲಿವೆ. ಮತ್ತೆ ಕೆಲವು ಬಂಡಲ್‌ಗಳಲ್ಲಿ ಕೆಲ ಉತ್ತರ ಪತ್ರಿಕೆಗಳು ಮೌಲ್ಯಮಾಪವಾಗದಿರುವುದು, ಮೌಲ್ಯಾಂಕನ ಮಾಡಿದ್ದರೂ ಕೆಲ ಪತ್ರಿಕೆಗಳಲ್ಲಿ ಅಂಕಗಳನ್ನೇ ನೀಡದಿರುವುದು, ಇನ್ನು ಕೆಲವಲ್ಲಿ ಅಂಕಗಳ ಸಂಕಲನ ಮಾಡದೆ ಇರುವುದು ಸೇರಿದಂತೆ ಅನೇಕ ಲೋಪಗಳಾಗಿರುವ ಬಗ್ಗೆ ಖಾಸಗಿ ಶಾಲಾ ವಲಯದಲ್ಲಿ ಆರೋಪಗಳು ಕೇಳಿಬಂದಿದ್ದವು. ಅಲ್ಲದೆ, ಜವಾಬ್ದಾರಿಯಿಂದ ಮೌಲ್ಯಾಂಕನ ಮಾಡದ ಶಿಕ್ಷಕರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಲಾಗಿತ್ತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ