
ಗದಗ:ಗದಗ, ಬೆಟಗೇರಿ ಅವಳಿ ನಗರದಲ್ಲಿ 5 ನೇ ದಿನದ ಗಣೇಶ ವಿಸರ್ಜನೆ ಸಡಗರ, ಸಂಭ್ರಮ ಹಾಗೂ ಭಕ್ತಿಭಾವದಿಂದ ಜರುಗಿತು.
ಮೆರವಣಿಗೆಯಲ್ಲಿ ಯುವಕರು, ಮಕ್ಕಳು ಹಾಗೂ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಡೊಳ್ಳಿನ ಸದ್ದು, ವಿಶೇಷ ಹಾಡುಗಳು ಹಾಗೂ ಭಕ್ತಿಗೀತೆಗಳಿಗೆ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಕೆಲವೆಡೆ ವಿವಿಧ ಕಲಾತಂಡಗಳ ಪ್ರದರ್ಶನವೂ ಮೆರವಣಿಗೆಗೆ ಮೆರುಗು ನೀಡಿತು. ಗಣೇಶನಿಗೆ ಜಯಘೋಷ ಮೊಳಗಿಸುತ್ತ ಭಕ್ತರು ಸಾಗಿದರು.
ವಿಸರ್ಜನಾ ಸ್ಥಳಗಳಲ್ಲಿ ಭಕ್ತರ ಅನುಕೂಲಕ್ಕಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹಾಗೂ ನಗರಸಭೆ ಸಿಬ್ಬಂದಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು.ಸಂಜೆ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ವಿಸರ್ಜನಾ ಸ್ಥಳಗಳಿಗೆ ಆಗಮಿಸಿದ್ದರಿಂದ ಅವಳಿ ನಗರದ ಪ್ರಮುಖ ರಸ್ತೆಗಳು ಜನದಟ್ಟಣೆಯಿಂದ ಕೂಡಿದ್ದವು, ವಿಶೇಷ ಪೂಜೆ ಸಲ್ಲಿಸಿದ ನಂತರ ಗಣೇಶ ವಿಸರ್ಜನೆ ಮಾಡಲಾಯಿತು.