ಅಭಿಯಾನದ ವೇಳೆ ಸಾರ್ವಜನಿಕರಿಗೆ ಯಾವುದೇ ಗೊಂದಲ ಅಥವಾ ತೊಂದರೆಯಾಗದಂತೆ ಪ್ರಕ್ರಿಯೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು. ಅರ್ಹ ನಾಗರಿಕರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಸೂಕ್ತ ಮಾರ್ಗದರ್ಶನ ನೀಡಬೇಕು.
ಗದಗ: ಜಿಲ್ಲೆಯಲ್ಲಿ ನಡೆಯಲಿರುವ ವಿಶೇಷ ಅಭಿಯಾನದಲ್ಲಿ ಮತದಾರರ ನೋಂದಣಿ, ಆಕ್ಷೇಪಣೆ ಹಾಗೂ ತಿದ್ದುಪಡಿಗಳನ್ನು ನಿಯಮಾನುಸಾರ ಪಾರದರ್ಶಕವಾಗಿ ಕೈಗೊಂಡು, ಯಾವುದೇ ಒಬ್ಬ ಅರ್ಹ ಮತದಾರನೂ ಪಟ್ಟಿಯಿಂದ ಹೊರಗುಳಿಯದಂತೆ ಅಧಿಕಾರಿಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.
ಅವರು ಜಿಲ್ಲೆಯಲ್ಲಿ ಸೆಪ್ಟೆಂಬರ್ 19 ಮತ್ತು 20ರಂದು ಹಮ್ಮಿಕೊಳ್ಳಲಾಗಿರುವ ಮತದಾರರ ನೋಂದಣಿ ಹಾಗೂ ಆಕ್ಷೇಪಣೆ ಸಲ್ಲಿಕೆಯ ವಿಶೇಷ ಅಭಿಯಾನದ ಹಿನ್ನೆಲೆಯಲ್ಲಿ, ಶುಕ್ರವಾರ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಲಾಗಿದ್ದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಭಿಯಾನದ ವೇಳೆ ಸಾರ್ವಜನಿಕರಿಗೆ ಯಾವುದೇ ಗೊಂದಲ ಅಥವಾ ತೊಂದರೆಯಾಗದಂತೆ ಪ್ರಕ್ರಿಯೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು. ಅರ್ಹ ನಾಗರಿಕರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ನಿರ್ದೇಶಿಸಿದ ಜಿಲ್ಲಾಧಿಕಾರಿಗಳು, ಈ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಭಿಯಾನದ ಪ್ರಯೋಜನ ಪಡೆಯುವಂತೆ ನೋಡಿಕೊಳ್ಳಲು ತಿಳಿಸಿದರು. ಇದೇ ವೇಳೆ ಸಭೆಯಲ್ಲಿದ್ದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಅಭಿಯಾನದ ಸಮಗ್ರ ಮಾಹಿತಿ ಹಂಚಿಕೊಂಡು, ಪ್ರಕ್ರಿಯೆ ಸುಗಮವಾಗಿ ನಡೆಯಲು ಸಹಕರಿಸುವಂತೆ ಕೋರಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಪ್ರತಿನಿಧಿಗಳು ಉಪಸ್ಥಿತರಿದ್ದರು.
ಇಂದು, ನಾಳೆ ಮತದಾರರ ನೋಂದಣಿಗೆ ವಿಶೇಷ ಅಭಿಯಾನ
ಗದಗ: ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಹಾಗೂ ಹೊಸ ಮತದಾರರ ನೋಂದಣಿಗಾಗಿ ಸೆ 19 ಮತ್ತು 20 ರಂದು ವಿಶೇಷ ಅಭಿಯಾನಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಜಿಲ್ಲೆಯಲ್ಲಿ 5-9-2026 ರಲ್ಲಿದ್ದಂತೆ ಒಟ್ಟು 784325 ಮತದಾರರಿದ್ದು, ಈ ಪೈಕಿ 393459 ಪುರುಷ, 390818 ಮಹಿಳಾ ಹಾಗೂ 48 ತೃತೀಯ ಲಿಂಗಿ ಮತದಾರರಿದ್ದಾರೆ. ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಒಟ್ಟು 25973 ನೋಟೀಸ್‌ಗಳನ್ನು ಸಿದ್ಧಪಡಿಸಲಾಗಿದ್ದು, ಈಗಾಗಲೇ 24941 ಮತದಾರರಿಗೆ ನೋಟೀಸ್ ಕಳುಹಿಸಲಾಗಿದೆ. ಬಾಕಿ ಉಳಿದಿರುವ 1032 ನೋಟೀಸ್ ಗಳನ್ನು ಶೀಘ್ರವೇ ತಲುಪಿಸಲಾಗುವುದು. ಈ ಪೈಕಿ 11773 ನೋಟೀಸ್‌ಗಳ ವಿಚಾರಣೆ ಪೂರ್ಣಗೊಂಡಿದ್ದು, ಮೊದಲನೇ ವಿಚಾರಣೆಯು ದಿನಾಂಕ 5-9-2026 ರಂದು ಪ್ರಾರಂಭವಾಗಿ ಕೊನೆಯ ವಿಚಾರಣೆಯನ್ನು ಅಕ್ಟೋಬರ್ 6 ರಂದು ನಡೆಸಲಾಗುವುದು. ನೋಟೀಸ್ ನೀಡಲಾದ ಮತದಾರರ ಪಟ್ಟಿಯನ್ನು ದಿನಾಂಕ 4-9-2026 ರಂದೇ ಗದಗ ಜಿಲ್ಲಾ ವೆಬ್‌ಸೈಟ್ https://gadag.nic.in ಹಾಗೂ ಸಿಇಒ ಕರ್ನಾಟಕ ವೆಬ್‌ಸೈಟ್ https://ceo.karnataka.gov.in/notices_issued.html ನಲ್ಲಿ ಪ್ರಕಟಿಸಲಾಗಿದೆ. ಇದಲ್ಲದೆ ಸಾರ್ವಜನಿಕರಿಂದ ಸ್ವೀಕರಿಸಲಾಗಿರುವ ಹಕ್ಕು ಮತ್ತು ಆಕ್ಷೇಪಣೆಗಳ ವಿವರಗಳನ್ನು (ಫಾರಂ ನಂ. 9, ಫಾರಂ 10, ಫಾರಂ 11, ಫಾರಂ 11ಎ ಮತ್ತು ಫಾರಂ 11ಬಿ) ಗದಗ ಜಿಲ್ಲಾ ವೆಬ್‌ಸೈಟ್ https://gadag.nic.in ಮತ್ತು ಭಾರತ ಚುನಾವಣಾ ಆಯೋಗದ ವೆಬ್‌ಸೈಟ್ https://voters.eci.gov.in/download ನಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರು ಹಾಗೂ ಅರ್ಹ ನಾಗರಿಕರು ಸೆಪ್ಟೆಂಬರ್ 19 ಮತ್ತು 20 ರ ವಿಶೇಷ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.