ಡ್ಯಾಂನಲ್ಲಿ ನೀರಿದ್ದರೂ ರೈತರ ಒಡಲಲ್ಲಿ ಬೆಂಕಿ

KannadaprabhaNewsNetwork |  
Published : Sep 19, 2026, 02:00 AM IST
ಮುಳ್ಳುಕಂಟಿಗಳು ಬೆಳೆದಿರುವ ಕಾಲುವೆಯಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದು.  | Kannada Prabha

ಸಾರಾಂಶ

ಲಿಫ್ಟ್ ಇರಿಗೇಶನ್ ಹಂತ-2 (ಕಲಕೇರಿ) ಮತ್ತು ಹಂತ-3 (ಚುರ್ಚಿಹಾಳ) ನಡುವಿನ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಬಳಿ ಸುಮಾರು 1.2 ಕಿ.ಮೀ. ಕಾಲುವೆ ಸಂಪೂರ್ಣವಾಗಿ ಶಿಥಿಲ

ಶಿವಕುಮಾರ ಕುಷ್ಟಗಿ

ಗದಗ: ಬರಗಾಲದ ಸಂಕಷ್ಟದಲ್ಲೂ ಅನ್ನದಾತನ ಹೊಲಗಳಿಗೆ ಹಸಿರು ತುಂಬಬೇಕಿದ್ದ ಮಹತ್ವಾಕಾಂಕ್ಷೆಯ ಸಿಂಗಟಾಲೂರು ಏತ ನೀರಾವರಿ ಯೋಜನೆ, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಮತ್ತು ಇಚ್ಛಾಶಕ್ತಿಯ ಕೊರತೆಯಿಂದಾಗಿ ಹಳ್ಳಹಿಡಿದಿದೆ. ಡ್ಯಾಂನಲ್ಲಿ ಗರಿಷ್ಠ ಮಟ್ಟದ ನೀರಿದ್ದರೂ, ಕಾಲುವೆಗಳ ದುರಸ್ತಿ ಕಾಣದೆ ಬರಗಾಲದಂತಹ ಕೆಟ್ಟ ಸ್ಥಿತಿಯಲ್ಲಿ ಅನ್ನದಾತರು ಕಣ್ಣೀರಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸುಮಾರು 58 ಸಾವಿರ ಹೆಕ್ಟೇರ್‌ಗೂ ಅಧಿಕ ಭೂಮಿಗೆ ನೀರು ಒದಗಿಸುವ ಉದ್ದೇಶದಿಂದ ಸಾವಿರಾರು ಕೋಟಿ ರುಪಾಯಿ ವೆಚ್ಚದಲ್ಲಿ ಈ ಯೋಜನೆ ಜಾರಿಗೆ ಬಂದಿತು. 2012ರಲ್ಲೇ ಕಾಮಗಾರಿ ಪೂರ್ಣಗೊಂಡಿದ್ದರೂ, ಸಿಂಗಟಾಲೂರು ಡ್ಯಾಂನಿಂದ ಹಿರೇಹಂದಿಗೋಳವರೆಗಿನ ಸುಮಾರು 72 ಕಿ.ಮೀ. ಉದ್ದದ ಕಾಲುವೆಯು ಇದುವರೆಗೂ ಒಮ್ಮೆಯೂ ಸಮಗ್ರ ದುರಸ್ತಿ ಕಂಡಿಲ್ಲ. ನೀರು ಹರಿಸುವ ಸಮಯದಲ್ಲಿ ಕೇವಲ ಅಲ್ಪಸ್ವಲ್ಪ ತೇಪೆ ಹಚ್ಚುವ ಕರ್ನಾಟಕ ನೀರಾವರಿ ನಿಗಮ ನಿಯಮಿತ ಅಧಿಕಾರಿಗಳು, ಕಾಮಗಾರಿಯನ್ನು ಬೇಕಾಬಿಟ್ಟಿಯಾಗಿ ನಿರ್ವಹಿಸುತ್ತಿರುವುದರಿಂದಾಗಿ ಬರಗಾಲದಲ್ಲಿ ವರವಾಗಬೇಕಾಗಿದ್ದ ಯೋಜನೆ ಈಗ ಇದ್ದೂ ಇಲ್ಲದಂತಾಗಿದೆ.

ಡೋಣಿ ಗ್ರಾಮಸ್ಥರ ಗೋಳು: ಲಿಫ್ಟ್ ಇರಿಗೇಶನ್ ಹಂತ-2 (ಕಲಕೇರಿ) ಮತ್ತು ಹಂತ-3 (ಚುರ್ಚಿಹಾಳ) ನಡುವಿನ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಬಳಿ ಸುಮಾರು 1.2 ಕಿ.ಮೀ. ಕಾಲುವೆ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಸೋರುತ್ತಿದೆ. ಕಾಲುವೆಯ ನೀರು ಅಕ್ಕಪಕ್ಕದ ರೈತರ ಸಾವಿರಾರು ಎಕರೆ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯಾಗುತ್ತಿದೆ. ವರ್ಷಗಳಿಂದ ರೈತರು ಮನವಿ ಸಲ್ಲಿಸುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ರೈತರು ಕಾಲುವೆಯಲ್ಲಿ ನೀರು ಹರಿಸಲು ವಿರೋಧ ವ್ಯಕ್ತಪಡಿಸುತ್ತಿದ್ದು, ಇದರಿಂದ ಗದಗ ತಾಲೂಕಿನ ಬಹುತೇಕ ಗ್ರಾಮಗಳ ರೈತರ ಜಮೀನುಗಳಿಗೆ ನೀರು ಹರಿಸಲು ಇದುವರೆಗೂ ಸಾಧ್ಯವಾಗಿಲ್ಲ. ಈ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನವನ್ನೂ ಅಧಿಕಾರಿಗಳು ಮಾಡಿಲ್ಲ.

ಫೆಬ್ರವರಿಯಲ್ಲಿ ಪ್ರಸ್ತಾವನೆ: ಪ್ರಸ್ತುತ ಯೋಜನೆಯ ವ್ಯಾಪ್ತಿಯ ಕಾಲುವೆಗಳ ದುರಸ್ತಿ ಕೆಲವೆಡೆ ಸಂಪೂರ್ಣ ಕಾಲುವೆಯ ಪುನರ್ ನಿರ್ಮಾಣ ಮತ್ತು ಸ್ಥಗಿತಗೊಂಡಿರುವ ನೀರೆತ್ತುವ ಮೋಟಾರ್‌ ರಿಪೇರಿಗೆ ಕನಿಷ್ಠ ₹50 ಕೋಟಿಗೂ ಅಧಿಕ ಅನುದಾನದ ಅಗತ್ಯವಿದೆ. ಆದರೆ ಅಧಿಕಾರಿಗಳು ಪ್ರಸಕ್ತ ವರ್ಷದ ಫೆಬ್ರವರಿಯಲ್ಲಿ ಸರ್ಕಾರಕ್ಕೆ ಕೇವಲ ₹10 ಕೋಟಿ ವೆಚ್ಚದ ಅಲ್ಪ ಮೊತ್ತದ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ಇದುವರೆಗೂ ಸರ್ಕಾರದಿಂದ ಕಾಲುವೆಗಳ ದುರಸ್ತಿಗೆ ಒಂದು ಪೈಸೆಯೂ ಹಣ ಬಿಡುಗಡೆಯಾಗಿಲ್ಲ.

ಸಿಂಗಟಾಲೂರ ಡ್ಯಾಂ ತುಂಬಿದ್ದರೂ ಕಾಲುವೆಗಳ ಬಿರುಕು ಹಾಗೂ ಕೆಟ್ಟುನಿಂತ ಮೋಟಾರ್‌ಗಳಿಂದಾಗಿ ರೈತರಿಗೆ ನೀರು ಸಿಗದಂತಾಗಿದೆ. ಕಾಲುವೆಗಳ ದುರಸ್ತಿಗೆ ಅನುದಾನ ನೀಡುವಂತೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿ ಹಲವಾರು ತಿಂಗಳುಗಳೇ ಕಳೆದಿದ್ದರೂ ಸರ್ಕಾರ ಮಾತ್ರ ಇದರ ಬಗ್ಗೆ ಗಮನ ಹರಿಸದೇ ಇರುವುದು ಜಿಲ್ಲೆಯ ರೈತರಿಗೆ ಮಾಡುತ್ತಿರುವ ಘೋರ ಅನ್ಯಾಯವಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು ಸಮಗ್ರ ಕಾಮಗಾರಿ ಕೈಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಬಿಜೆಪಿ ಯುವ ಮುಖಂಡ ವಸಂತ ಪಡಗದ ತಿಳಿಸಿದ್ದಾರೆ.

ಡ್ಯಾಂನಲ್ಲಿ ಕಣ್ಣೆದುರೇ ನೀರಿದ್ದರೂ ಹೊಲಗಳಿಗೆ ಹರಿಸಲಾಗದ ಇಂತಹ ಅಧಿಕಾರಿಗಳು ನಮಗೆ ಬೇಕಾ? ಡೋಣಿ ಬಳಿ ಕಾಲುವೆ ಕೂಡಲೇ ರಿಪೇರಿ ಮಾಡಿ ಎಂದು ಹಲವಾರು ವರ್ಷಗಳಿಂದ ಹೇಳುತ್ತಲೇ ಬಂದಿದ್ದರೂ ಇದುವರೆಗೂ ಅದರ ಬಗ್ಗೆ ಲಕ್ಷ್ಯ ಕೊಡುತ್ತಿಲ್ಲ. ಮಳೆ ಕೊರತೆ, ಬರಗಾಲದಿಂದಾಗಿ ಬೆಳೆಗಳು ಒಣಗುತ್ತಿವೆ. ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಡೋಣಿ ಹಾಗೂ ಚುರ್ಚಿಹಾಳ ಗ್ರಾಮದ ರೈತರು ತಿಳಿಸಿದ್ದಾರೆ.

ಕಾಲುವೆಗಳ ದುರಸ್ತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಿಂಗಟಾಲೂರ ಏತ ನೀರಾವರಿ ಯೋಜನೆ ಇಇ ಶಿವಮೂರ್ತಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಕ್ರಮ ವಹಿಸಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್
ದಸರಾ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಿ: ಬಿ.ಬಿ. ಅಸೂಟಿ