ಹಾವೇರಿ: ದಶಕಗಳಿಂದ ವಾಸವಿದ್ದರೂ ಮನೆಗಳ ಹಕ್ಕುಪತ್ರ ನೀಡಿಲ್ಲ ಎಂದು ಆರೋಪಿಸಿ ರಾಣಿಬೆನ್ನೂರು ತಾಲೂಕಿನ ಮಾಗೋಡು ಗ್ರಾಮದ ಬಳಿ ವಾಸಿಸುತ್ತಿರುವ ನೂರಾರು ಬಡ ಕುಟುಂಬಗಳ ಮಹಿಳೆಯರು ಹಾಗೂ ಕಾರ್ಮಿಕರು ಶುಕ್ರವಾರ ವಿನೂತನವಾಗಿ ರೊಟ್ಟಿ ಬುತ್ತಿ ಕಟ್ಟಿಕೊಂಡು ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ವಾಸಿಸುವವನೇ ಮನೆಯೊಡೆಯ ಎಂಬ ಆಶಯದಡಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ, ತಾವು ಹಲವು ವರ್ಷಗಳಿಂದ ವಾಸಿಸುತ್ತಿರುವ ಮನೆಗಳಿಗೆ ಇದುವರೆಗೂ ಹಕ್ಕುಪತ್ರ ನೀಡದಿರುವುದು ಬೇಸರದ ಸಂಗತಿ. ಆರನೇ ಗ್ಯಾರಂಟಿ, ಭೂ ಗ್ಯಾರಂಟಿ ಎಂದು ಹೇಳುವ ಸರ್ಕಾರ ನಮಗೂ ಭೂಮಿ ಹಾಗೂ ಮನೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಗೋಮಾಳ ಜಾಗದಲ್ಲಿ ವಾಸಿಸುತ್ತಿದ್ದೇವೆ ಎಂಬ ಕಾರಣ ಸೇರಿದಂತೆ ನೂರೆಂಟು ನೆಪಗಳನ್ನು ಹೇಳಿ ಹಕ್ಕುಪತ್ರ ನೀಡುತ್ತಿಲ್ಲ. ತಮ್ಮ ಬದುಕಿನ ಬಹುಭಾಗವನ್ನು ಇಲ್ಲಿಯೇ ಕಳೆದಿರುವ ಬಡ ಕುಟುಂಬಗಳಿಗೆ ಮನೆಗಳ ಕಾನೂನುಬದ್ಧ ಹಕ್ಕು ಕಲ್ಪಿಸಬೇಕು ಎಂದು ಆಗ್ರಹಿಸಿದರು.ಹಕ್ಕುಪತ್ರ ದೊರೆಯುವವರೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಕುಳಿತು ಪ್ರತಿಭಟನೆ ನಡೆಸಲು ಸಿದ್ಧರಿದ್ದು, ಸರ್ಕಾರ ಹಾಗೂ ಜಿಲ್ಲಾಡಳಿತ ಕೂಡಲೇ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.