3ನೇ ದಿನವೂ ಕೃಷಿ ಮೇಳಕ್ಕೆ 6 ಲಕ್ಷ ಜನ

KannadaprabhaNewsNetwork | Published : Sep 24, 2024 1:47 AM

ಸಾರಾಂಶ

ಭಾರತ ದೇಶದ ಶೇ. 60ರಿಂದ 70ರಷ್ಟು ರೈತರಿಗೆ ಕೃಷಿಯು ಆದಾಯದ ಮೂಲವಾಗಿದೆ. ಹೆಚ್ಚಾಗುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಪೌಷ್ಟಿಕ ಆಹಾರ ಒದಗಿಸುವುದು ಸವಾಲಾಗಿದೆ.

ಧಾರವಾಡ:

ಇಲ್ಲಿಯ ಕೃಷಿ ವಿವಿ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಸೋಮವಾರವೂ ಲಕ್ಷಾಂತರ ಜನರು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಮೇಳದ ಲಾಭ ಪಡೆದರು.

2ನೇ ದಿನ ಭಾನುವಾರ ಅತ್ಯಧಿಕ ಏಳು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಮಳೆ ಮಧ್ಯೆಯೂ ಜನರು ಉತ್ಸುಕತೆಯಿಂದ ಭಾಗವಹಿಸಿದ್ದರು. ಅದೇ ರೀತಿ ಸೋಮವಾರವೂ ಬೆಳಗ್ಗೆ 10ರಿಂದಲೇ ಮೇಳದಲ್ಲಿ ಜನಸ್ತೋಮ ತುಂಬಿ ತುಳುಕುತ್ತಿತ್ತು. ಬೆಳಗ್ಗೆ “ಪರಿಕರಗಳ ಸಾಮರ್ಥ್ಯ ಹೆಚ್ಚಿಸಲು ಮತ್ತು ಉತ್ಪನ್ನಗಳ ಮೌಲ್ಯವರ್ಧನೆ ವೃದ್ಧಿಸಲು ದ್ವಿತೀಯ ಕೃಷಿ” ವಿಚಾರಗೋಷ್ಠಿಯಲ್ಲಿ ಕೃಷಿ ವಿವಿ ಸಮುದಾಯ ವಿಜ್ಞಾನ ಕಾಲೇಜು ನಿವೃತ್ತ ವಿದ್ಯಾಧಿಕಾರಿ ಡಾ. ಉಷಾ ಮಳಗಿ,

ಭಾರತ ದೇಶದ ಶೇ. 60ರಿಂದ 70ರಷ್ಟು ರೈತರಿಗೆ ಕೃಷಿಯು ಆದಾಯದ ಮೂಲವಾಗಿದೆ. ಹೆಚ್ಚಾಗುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಪೌಷ್ಟಿಕ ಆಹಾರ ಒದಗಿಸುವುದು ಸವಾಲಾಗಿದೆ. ಈ ಕೊರತೆಯನ್ನು ನಿರ್ವಹಿಸಲು ದ್ವಿತೀಯ ಕೃಷಿಯ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವುದು ಅತ್ಯವಶ್ಯಕ ಎಂದರು.

ವ್ಯವಸ್ಥಾಪನಾ ಮಂಡಳಿ ಸದಸ್ಯ ರವಿಕುಮಾರ ಮಾಳಿಗೇರ, ಪರಿಕರಗಳ ಸಾಮರ್ಥ್ಯ ಹೆಚ್ಚಿಸಲು ಮತ್ತು ಉತ್ಪನ್ನಗಳ ಮೌಲ್ಯವರ್ಧನೆ ವೃದ್ಧಿಸಲು ವಿವಿ ಸಂಶೋಧನೆ ನಡೆಸುತ್ತಿದೆ. ಇವುಗಳ ಫಲಿತಾಂಶವು ಪ್ರತಿಯೊಬ್ಬ ರೈತನಿಗೂ ತಲುಪುವಂತಾಗಬೇಕು ಎಂದರು. ರಾಯಚೂರ ಕೃಷಿ ವಿವಿ ಕುಲಪತಿ ಡಾ. ಎಂ. ಹನುಮಂತಪ್ಪ, ಕೃಷಿ ವಿವಿ ಕುಲಪತಿ ಡಾ. ಪಿ. ಎಲ್ ಪಾಟೀಲ ಇದ್ದರು.

ಮಹಿಳೆಯರಿಗೆ ರಂಗೋಲಿ, ಸಿರಿಧಾನ್ಯ ಆಧಾರಿತ ಖಾದ್ಯ ತಯಾರಿಕೆ, ಕಸೂತಿ ಮತ್ತು ಮಕ್ಕಳಿಗೆ ವಿವಿಧ ಚಿತ್ರಕಲಾ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯಕ್ಕೆ ಕೃಷಿ ತ್ಯಾಜ್ಯದಿಂದ ತಯಾರಿಸಿದ ರಬ್ಬರ್ ಮ್ಯಾಟ್‌ನ್ನು ವಿಶೇಷ ಕೊಡುಗೆಯಾಗಿ ನೀಡಿದ ಕೇರಳದಿಂದ ಆಗಮಿಸಿದ ಪ್ರಗತಿಪರ ರೈತ ಓಮನ್ ಕುಟ್ಟಿ ಅವರನ್ನು ಸನ್ಮಾನಿಸಲಾಯಿತು.

ಆನಂತರ ಬರ ನಿರ್ವಹಣೆಯಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣಾ ಕ್ರಮ, ಹವಾಮಾನ ವೈಪರೀತ್ಯ ನಿರ್ವಹಣೆಯಲ್ಲಿ ಕೈಗೊಳ್ಳಬೇಕಾದ ಬೆಳೆ ಪದ್ಧತಿ ಹಾಗೂ ಕೃಷಿ ತಾಂತ್ರಿಕತೆಗಳು ವಿಚಾರಗೋಷ್ಠಿಗಳು ನಡೆದವು. ನಂತರ ರೈತರಿಂದ ರೈತರಿಗಾಗಿ ಕಾರ್ಯಕ್ರಮ ನಡೆಯಿತು. ಕಲಬುರ್ಗಿ ಕೊಂಚೂರಿನ ಸವಿತಾ ಪೀಠ ಮಹಾಸಂಸ್ಥಾನ ಮಠದ ಸವಿತಾನಂದನಾಥ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಡಾ. ಚಂದ್ರಶೇಖರ ಸ್ವಾಮೀಜಿ, ಬಳ್ಳಾರಿಯ ಕಲ್ಯಾಣ ಸ್ವಾಮೀಜಿ ಹಾಗೂ ನಂದಿಪುರದ ಮಹೇಶ್ವರ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. ಆರು ವರೆ ಲಕ್ಷ ಜನರ ಭೇಟಿ:

ಕೃಷಿ ಮೇಳದ 3ನೇ ದಿನ ಸೋಮವಾರ ಬೀಜ ಘಟಕದಿಂದ 567.30 ಕ್ವಿಂಟಲ್ ಹಿಂಗಾರಿ ಬೆಳೆಗಳ ಬೀಜಗಳನ್ನು ಮಾರಾಟ ಮಾಡಲಾಯಿತು. ಸುಮಾರು ಆರುವರೆ ಲಕ್ಷ ರೈತ ಬಾಂಧವರು, ವಿಸ್ತರಣಾ ಕಾರ್ಯಕರ್ತರು ಹಾಗೂ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು ಎಂದು ಕೃಷಿ ವಿವಿ ಪ್ರಕಟಣೆ ತಿಳಿಸಿದೆ.

ಇಂದು ಮೇಳಕ್ಕೆ ತೆರೆ:

ಸೋಮವಾರವೂ ನಿರೀಕ್ಷೆಯಂತೆ ಮಧ್ಯಾಹ್ನ ಮಳೆಯಿಂದ ಮೇಳದ ಉತ್ಸಾಹಕ್ಕೆ ಅಡ್ಡಿಯಾಯಿತು. ಲಕ್ಷಾಂತರ ಜನರು ಉತ್ಸಾಹದಿಂದ ಭಾಗವಹಿಸಿದ್ದ ಸಮಯದಲ್ಲಿ ಮಧ್ಯಾಹ್ನದ ಹೊತ್ತು ಗುಡುಗಿನೊಂದಿಗೆ ಮಳೆ ಸುರಿಯಿತು. ಭಾನುವಾರದ ಮಳೆಗೆ ಸುಸ್ತಾಗಿದ್ದ ಮಳಿಗೆಯಲ್ಲಿದ್ದ ಜನರು ಸೋಮವಾರ ಮತ್ತೆ ಮಳೆಗೆ ಮೈಯೊಡ್ಡಬೇಕಾಯಿತು. ಸೆ. 21ರಿಂದ ಶುರುವಾಗಿರುವ ಕೃಷಿ ಮೇಳಕ್ಕೆ ಸೆ. 24ರಂದು ತೆರೆ ಬೀಳಲಿದ್ದು, ಮಂಗಳವಾರವೂ ಮಳೆ ಮುಂದುವರಿಯಲಿದೆಯೇ ಕಾದು ನೋಡಬೇಕಿದೆ.

Share this article