ಕಾವೇರಿ ನದಿಯಲ್ಲಿ ಈಜುವಾಗ 6 ಜನ ನೀರು ಪಾಲು

KannadaprabhaNewsNetwork |  
Published : Apr 20, 2026, 02:00 AM IST
Death

ಸಾರಾಂಶ

ಕಾವೇರಿ ನದಿಯಲ್ಲಿ ಭಾನುವಾರ ಈಜಲು ಹೋದ ಆರು ಮಂದಿ ಜಲಸಮಾಧಿ ಆಗಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್‌.ನಗರದ ಅರ್ಕೇಶ್ವರಸ್ವಾಮಿ ದೇವಸ್ಥಾನದ ಬಳಿ ಭಾನುವಾರ ನಡೆದಿದೆ. ಉರುಸ್ ಮತ್ತು ಖವ್ವಾಲಿ ಕಾರ್ಯಕ್ರಮ ವೀಕ್ಷಿಸಲು ಇವರು ಬಂದಿದ್ದರು.

  ಭೇರ್ಯ : ಕಾವೇರಿ ನದಿಯಲ್ಲಿ ಭಾನುವಾರ ಈಜಲು ಹೋದ ಆರು ಮಂದಿ ಜಲಸಮಾಧಿ ಆಗಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್‌.ನಗರದ ಅರ್ಕೇಶ್ವರಸ್ವಾಮಿ ದೇವಸ್ಥಾನದ ಬಳಿ ಭಾನುವಾರ ನಡೆದಿದೆ.

ಬೆಂಗಳೂರಿನ ಹೈಮಾ (13), ಮೈಸೂರಿನ ಉದಯಗಿರಿಯ ಉಮೇರ್ (7), ಕೆ.ಆರ್.ನಗರದ ಆಫೀಫಾ‌ ಮೊಹಮ್ಮದಿ (13), ತಮಿಳುನಾಡಿನ ಊಟಿಯ ಸಯ್ಯದ್ ಫಾತಿಮಾ (32), ಸಯ್ಯದ್‌ ಇಸ್ಮಾಯಿಲ್ (38), ಬೆಂಗಳೂರಿನ ಯಾಸೀನ್ (23) ಮತ್ತು ಬನ್ನೂರಿನ‌ ನೇಹಾ ಮೃತಪಟ್ಟರು. ಮೃತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ ಎಂದು ತಿಳಿದು ಬಂದಿದೆ.

ಉರುಸ್ ಮತ್ತು ಖವ್ವಾಲಿ ಕಾರ್ಯಕ್ರಮ

ಕೆ.ಆರ್‌.ನಗರದ ಹೊರವಲಯದ ಹಳೆ ಎಡತೊರೆಯಲ್ಲಿರುವ ಸೈಯದ್ ಖಾದರ್ ಲಿಂಗಾವಲಿ ಅವರ ದರ್ಗಾದಲ್ಲಿ ನಡೆಯುವ ಉರುಸ್ ಮತ್ತು ಖವ್ವಾಲಿ ಕಾರ್ಯಕ್ರಮ ವೀಕ್ಷಿಸಲು ಇವರು ಬಂದಿದ್ದರು. ರಾತ್ರಿ ವೇಳೆ ಖವ್ವಾಲಿ ನಡೆಯುವುದರಿಂದ ಭಾನುವಾರ ಸಂಜೆ ಸುಮಾರು 4 ರಿಂದ 4.30ರ ಸುಮಾರಿಗೆ ಅರ್ಕೇಶ್ವರ ದೇವಸ್ಥಾನದ ಸಮೀಪಕ್ಕೆ ಬಂದಿದ್ದರು. ನದಿ ದಡದಲ್ಲಿ ನೀರು ಕಡಿಮೆ ಇದ್ದುದರಿಂದ ನೀರಿನಲ್ಲಿಯೇ ನಡೆಯುತ್ತ ಒಂದಷ್ಟು ದೂರ ತೆರಳಿ, ಈಜಲು ಮುಂದಾದರು. ಈ ವೇಳೆ ಏಕಾಏಕಿ ನದಿ ಮಧ್ಯದಲ್ಲಿದ್ದ ಹೊಂಡಕ್ಕೆ ಕಾಲಿಟ್ಟು ಆರು ಮಂದಿ ಜಲಸಮಾಧಿಯಾಗಿದ್ದಾರೆ. ಇವರ ಜತೆಗಿದ್ದ ಮತ್ತಿಬ್ಬರು ಅದೃಷ್ಟವಶಾತ್‌ ಬದುಕುಳಿದಿದ್ದಾರೆ. ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಸ್ಥಳೀಯ ಈಜುಗಾರರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಗಳನ್ನು ಹೊರಕ್ಕೆ ತೆಗೆದಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಸರ್ಕಾರದಿಂದ 5 ಲಕ್ಷ ಪರಿಹಾರ

ದುರಂತದಲ್ಲಿ ಮೃತಪಟ್ಟವರ 6 ಮಂದಿ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದ್ದಾರೆ.

ಪಟ್ಟಣದ ತಾಲೂಕು ಆಸ್ಪತ್ರೆಯ ಶವಗಾರದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಸಹಾಯಧನದ ಜತೆಗೆ ನಾನು ವೈಯಕ್ತಿಕವಾಗಿ ಮೃತರ ಕುಟುಂಬಸ್ಥರಿಗೆ ತಲಾ ₹50 ಸಾವಿರ ನೀಡುತ್ತೇನೆ. ಅಂತ್ಯಕ್ರಿಯೆಗೆ ಅಗತ್ಯವಿರುವ ಎಲ್ಲಾ ರೀತಿಯ ಅನುಕೂಲ ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದರು.

ಮಾಜಿ ಸಚಿವ ಸಾ.ರಾ.ಮಹೇಶ್ ಅವರು ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ, ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ವೈಯಕ್ತಿಕವಾಗಿ ತಲಾ ₹50 ಸಾವಿರ ನೆರವು ನೀಡುವುದಾಗಿ ತಿಳಿಸಿದರು. ಅಲ್ಲದೆ, ಸರ್ಕಾರದಿಂದ ಹೆಚ್ಚಿನ ಪರಿಹಾರ ನೀಡುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸುವುದಾಗಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಅತಿಥಿ ತಂದು ಕೊಟ್ಟಿದ್ದ ಮಾವಿನ ಹಣ್ಣು ಸೇವಿಸಿ ಇಬ್ಬರು ಬಾಲಕಿಯರು ಸಾವು!
ಮೆಡಿಕಲ್‌ ಸೀಟು ಶುಲ್ಕ ಈ ವರ್ಷ ಹೆಚ್ಚಿಸದಿರಲು ಸರ್ಕಾರ ನಿರ್ಧಾರ