ಚಂದ್ರು ಕೊಂಚಿಗೇರಿ
ಹೌದು, ತಾಲೂಕು ಕೇಂದ್ರದಲ್ಲೇ ಮಿನಿ ವಿಧಾನಸೌಧ ಹೆಸರಿನಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಇದು.
ಈ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ, 1 ರಿಂದ 7ನೇ ತರಗತಿವರೆಗೂ ತರಗತಿ ನಡೆಯುತ್ತಿವೆ. 2018ರಲ್ಲಿ ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲು ಈ ಶಾಲೆಗೆ ಅನುಮತಿ ಸಿಕ್ಕಿದೆ. ಪಟ್ಟಣದ ಮಕ್ಕಳು ಸೇರಿ ತಾಲೂಕಿನ ಅಕ್ಕಪಕ್ಕದ ಹಳ್ಳಿಗಳ ಪಾಲಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಲು ದುಂಬಾಲು ಬಿದ್ದಿರುವ ಕಾರಣ ಆಂಗ್ಲ ಮಾಧ್ಯಮ ಶಾಲೆಗೆ ಬೇಡಿಕೆ ಹೆಚ್ಚಾಗಿದೆ. ಕಳೆದ 7 ವರ್ಷಗಳ ಹಿಂದೆ ಆಂಗ್ಲ ಮಾಧ್ಯಮ ತರಗತಿಗಳು ಆರಂಭವಾಗಿದ್ದು, ಅಂದಿನಿಂದ ಈವರೆಗೂ ಆಂಗ್ಲ ಮಾಧ್ಯಮ ಶಾಲೆಗೆ, ಅಗತ್ಯವಿರುವ ತರಗತಿ ನಡೆಸಲು ಕೊಠಡಿಗಳೇ ಇಲ್ಲ.ಇತ್ತ ಪೂರ್ಣಾವಧಿ ಶಿಕ್ಷಕರೂ ಇಲ್ಲದೇ ಅತಿಥಿ ಶಿಕ್ಷಕರೇ ಆಸರೆಯಾಗಿದ್ದಾರೆ.ಇಲ್ಲಿ 7 ಕೋಣೆಗಳಿವೆ. ಇದರಲ್ಲಿ 5 ಕೋಣೆಗಳು ಮಳೆಗೆ ಸೋರುತ್ತಿದ್ದವು. ಅಕ್ಷರ ಆವಿಷ್ಕಾರ ಯೋಜನೆಯಡಿ ಅವುಗಳ ಚಾವಣಿ ಮೇಲೆ ತಗಡಿನ ಸೀಟ್ ಹಾಕಲಾಗಿದೆ. ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರಿಗೆ ಒಂದು ಕೊಠಡಿ ಮೀಸಲಿದೆ. ಉಳಿದಂತೆ 6 ಕೋಣೆಗಳು ಶಿಥಿಲವಾಗಿವೆ. ಚಾವಣಿಯ ಸಿಮೆಂಟ್ ಉದುರುತ್ತಿದೆ. ಇಂತಹ ಅಪಾಯಕಾರಿ ಸ್ಥಿತಿಯಲ್ಲಿ ಸರ್ಕಾರಿ ಶಾಲೆಗೆ ಸೇರಿದ ಮಕ್ಕಳು ಓದುವ ಪರಿಸ್ಥಿತಿ ಬಂದಿದೆ.
ಈ ಶಾಲೆಯ ಅಕ್ಷರ ದಾಸೋಹ ಯೋಜನೆಯ ಬಿಸಿಯೂಟದ, ಕೋಣೆ ಕುಸಿದು ಬೀಳಲು ದಿನ ಎಣಿಸುತ್ತಿದೆ. ಮಳೆ ಬಂದಾಗ ಸಂಪೂರ್ಣ ಸೋರುತ್ತಿದೆ. ಮಹಿಳೆಯರು ಅಪಾಯದಡಿ ಅನ್ನ ಬೇಯಿಸುತ್ತಿದ್ದಾರೆ. 30 ಮೀಟರ್ ಉದ್ದ, 40 ಮೀಟರ್ ಅಗಲ ಈ ಶಾಲೆ ನಿವೇಶನ ಹೊಂದಿದೆ. ಇಂತಹ ಕಿರಿದಾದ ಜಾಗದಲ್ಲಿ ಕೋಣೆಗಳು ಮಂಜೂರಾದರೂ ನಿರ್ಮಾಣಕ್ಕೆ ನಿವೇಶನವಿಲ್ಲ.
ಆಂಗ್ಲ ಮಾಧ್ಯಮ ಶಾಲೆ ಆಗಿರುವ ಕಾರಣ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಾಗಿದೆ. ಅಕ್ಕಪಕ್ಕದೂರಿನ ಮಕ್ಕಳು ಈ ಶಾಲೆಯ ಪ್ರವೇಶ ಪಡೆಯುತ್ತಿದ್ದಾರೆ. ತರಗತಿ ನಡೆಸಲು ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಹೂವಿನಹಡಗಲಿ ಮಿನಿ ವಿಧಾನಸೌಧ ಶಾಲೆಯ ಮುಖ್ಯ ಶಿಕ್ಷಕಿ ಎಲ್.ಲಲಿತಾಬಾಯಿ.