ಕನ್ನಡಪ್ರಭ ವಾರ್ತೆ ಮಡಿಕೇರಿ ಜಿಲ್ಲೆಯಲ್ಲಿರುವ ಎಲ್ಲಾ ಅಂಗಡಿ, ಹೋಟೆಲ್, ವಾಣಿಜ್ಯ ಸಂಕೀರ್ಣ, ಕೈಗಾರಿಕೋದ್ಯಮ, ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳು ಹಾಗೂ ಪ್ರವಾಸೋದ್ಯಮ ಕೇಂದ್ರಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷಾ ಬಳಕೆ ಕಡ್ಡಾಯವಾಗಿದ್ದು, ಈ ಸಂಬಂಧ ತಮ್ಮ ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ(ತಿದ್ದುಪಡಿ, ವಿದೇಯಕ, 2024 ಈ ಸಂಬಂಧ ಫೆ. 25 ರಂದು ರಾಜ್ಯಪಾಲರಿಂದ ಒಪ್ಪಿಗೆ ದೊರೆತಿದ್ದು, ಜಿಲ್ಲೆಯ ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು, ವಹಿವಾಟು ಕೇಂದ್ರಗಳು, ಉದ್ಯಮಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಇರಲೇಬೇಕು. ಆ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸ್ಪಷ್ಟ ನಿರ್ದೇಶನ ನೀಡಿದರು.
ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ, ಮಂಜೂರಾತಿ ಪಡೆದ ಎಲ್ಲಾ ಸಂಸ್ಥೆಗಳಿಗೂ ಈ ಕಾಯ್ದೆ ಅನ್ವಯವಾಗಲಿದೆ. ಖಾಸಗಿ ಶಾಲಾ ಕಾಲೇಜುಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನರಂಜನಾ ಕೇಂದ್ರಗಳು, ಹೋಟೆಲ್ ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ನಾಮಫಲಕಗಳ ಮೇಲ್ಬಾಗದಲ್ಲಿ ಕನ್ನಡಭಾಷೆಯನ್ನು ಶೇ.60 ರಷ್ಟು ಪ್ರದರ್ಶಿಸಬೇಕು/ಬರೆಸಿರಬೇಕು ಎಂದು ಜಿಲ್ಲಾಧಿಕಾರಿ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.ಜಿಲ್ಲೆಯ ಗಡಿ ಪ್ರದೇಶಗಳು, ಖಾಸಗಿ ಶಾಲೆಗಳಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು. ಈ ಕಾರ್ಯ ಆಗದಿದ್ದಲ್ಲಿ ಪ್ರಥಮ ಹಂತದಲ್ಲಿ 5 ಸಾವಿರ, ಎರಡನೇ ಹಂತದಲ್ಲಿ 10 ಸಾವಿರ ದಂಡ ಪಾವತಿಸಬೇಕಾಗುತ್ತದೆ. ನಂತರ ಪರವಾನಿಗೆಯನ್ನು ರದ್ದು ಪಡಿಸಬೇಕು. ಆ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು.
ಜಿ.ಪಂ.ಸಿಇಒ ವರ್ಣಿತ್ ನೇಗಿ ಮಾತನಾಡಿ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಬಳಕೆ ಸಂಬಂಧಿಸಿದಂತೆ ಜಿ.ಪಂ., ತಾ.ಪಂ. ಮತ್ತು ಗ್ರಾ.ಪಂ. ಮಟ್ಟದಲ್ಲಿ ಅಗತ್ಯ ಕ್ರಮವಹಿಸಲಾಗುವುದು ಎಂದರು.
ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಎಂ.ಚಂದ್ರಕಾಂತ್, ನಗರಸಭೆಯ ಪರಿಸರ ಎಂಜಿನಿಯರ್ ಸೌಮ್ಯ, ವಿವಿಧ ಇಲಾಖೆ ಅಧಿಕಾರಿಗಳು ಇತರರು ಇದ್ದರು.ಗ್ಯಾರಂಟಿ ಸಮಾವೇಶ: ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳ ಸಂಬಂಧ ‘ಗ್ಯಾರಂಟಿ ಸಮಾವೇಶ’ವು ಮಾ. 14 ರಂದು ಮಡಿಕೇರಿ ನಗರದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಜೊತೆ ಚರ್ಚಿಸಿದ ಜಿಲ್ಲಾಧಿಕಾರಿ ಅವರು ಉಪ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಯೋಜನೆಗಳ ಸಮಾವೇಶ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸಲಹೆ ಮಾಡಿದರು.
ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಸೇರಿದಂತೆ ಹಲವು ಯೋಜನೆಗಳ ಫಲಾನುಭವಿಗಳ ಸಮಾವೇಶವು ನಗರದ ಗಾಂಧಿ ಮೈದಾನದಲ್ಲಿ ನಡೆಯಲಿದೆ ಎಂದು ತಿಳಿಸಿದರು.ಜಿ.ಪಂ.ಸಿಇಒ ವರ್ಣಿತ್ ನೇಗಿ, ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಅನಿತಾ ಬಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನಟರಾಜು, ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಖಾ ಗಣಪತಿ, ಆಹಾರ ಇಲಾಖೆ ಶಿರಸ್ತೇದಾರರಾದ ವೀಣಾ, ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕದ ಮೆಹಬೂಬ್ ಅಲಿ ಇತರರು ಇದ್ದರು.