ಕನ್ನಡಪ್ರಭ ವಾರ್ತೆ ಮೈಸೂರು
ಇವ ನಮ್ಮವ ಇವ ನಮ್ಮವ ಹೆಸರಿನ ಆರು ದಿನಗಳ ಈ ನಾಟಕೋತ್ಸವ ಪ್ರಸಿದ್ಧ ನಾಟಕಗಳ ಪ್ರದರ್ಶನ, ಜಾನಪದ ಗಾಯನ, ಸಂಗೀತ, ಸಾಹಿತ್ಯಾತ್ಮಕ ಚರ್ಚೆಗೆ ವೇದಿಕೆಯಾಗಿತ್ತು.
ರಂಗಾಯಣದ ವನರಂಗ, ಭೂಮಿಗೀತ, ಕಿಂದರಿಜೋಗಿ, ಶ್ರೀರಂಗ, ಲಂಕೇಶ್ ಗ್ಯಾಲರಿ, ಕಲಾಮಂದಿರ, ಕಿರುರಂಗ ಮಂದಿರ ಹೀಗೆ ಎಲ್ಲಾ ವೇದಿಗಳಲ್ಲಿಯೂ ಒಂದೊಂದು ಕಾರ್ಯಕ್ರಮದ ಮೂಲಕ ಜನಮನ ಸೆಳೆಯಿತು.ಸಾಮಾಜಿಕ ಕಳಕಳಿ, ಬಹುತ್ವದ ಭಾವನೆ ಮೂಡಿಸುವ ಮೂಲಕ ಉರಿ ಬಿಸಿಲ ಬೇಸಿಗೆಯಲ್ಲೂ ರಂಗ ಪ್ರಿಯರ ಮನ ತಣಿಸಿತು. ಕಡೆಯ ದಿನವಾದ ಸೋಮವಾರ ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಎಳೆಕೊರಳು ಉಳಿದಾವೆ ಕೇಳ ಶೀರ್ಷಿಕೆಯಲ್ಲಿ ನಡೆಸಿಕೊಟ್ಟು ರಂಗಸಂಗೀತ, ಬಹುರೂಪಿಯ ಯಶಸ್ಸಿನ ಸಾರ್ಥಕತೆಯನ್ನು ಅನಾವರಣಗೊಳಿಸಿತು.
ನಂತರ ಕಿಂದರಿಜೋಗಿ ವೇದಿಕೆಯಲ್ಲಿ ಜಾನಪದ ಕಲಾ ವೈಭವ ಮೇಳೈಸಿತು. ಉಡುಪಿ ಉದ್ಯಾವರದ ಪುನೀತ್ ಮತ್ತು ತಂಡ ಕರಗ ಕೋಲಾಟ ಸಾಂಪ್ರದಾಯಿಕ ನೃತ್ಯ ಅಪಾರ ಮೆಚ್ಚುಗೆ ಪಡೆಯಿತು. ನಾದಸ್ವರಕ್ಕೆ ಅನುಗುಣವಾಗಿ ತಲೆಯ ಮೇಲೆ ಕಳಸ ಹೊತ್ತು ಕೋಲಾಟ ಪ್ರದರ್ಶನ ನೀಡಿದ ಕಲಾವಿದರು ಶಿಳ್ಳೆ- ಚಪ್ಪಾಳೆ ಸುರಿಮಳೆ ಪಡೆದರು. ಹಾಗೆಯೇ ಸುಳ್ಯ ಬಂಗ್ಲೆ ಗುಡ್ಡೆಯ ಸುಗಿಪು ಜಾನಪದ ಕಲಾತಂಡದ ಕಂಗೀಲು ನೃತ್ಯ ಸುಗ್ಗಿಯ ಸಂಭ್ರಮ ತೆರೆದಿಟ್ಟಿತು.
ಕಿರುರಂಗ ಮಂದಿರದಲ್ಲಿ ರಂಗವಲ್ಲಿ ತಂಡದವರು ಪಾರ್ಶ್ವ ಸಂಗೀತ ನಾಟಕವನ್ನು ಪ್ರಸ್ತುತಪಡಿಸಿದರು. ಭೂಮಿ ಗೀತಾದಲ್ಲಿ ಮಣಿಪುರದ ಅಖೋಕಾ ಥಿಯೇಟರ್ ತಂಡದವರು ಅಬೊರಿಜನಲ್ ಕ್ರೈ ನಾಟಕವನ್ು ಸಂಭಾಷಣೆ ಸಹಿತ ಪ್ರದರ್ಶಿಸಿದರು.
ಕಲಾಮಂದಿರದಲ್ಲಿ ಮಂಜೇಶ್ವರದ ಶಾರದಾ ಆರ್ಟ್ಸ್ ಕಲಾವಿದರು ಕಥೆ ಎಡ್ಡೆಂಡು ಎಂಬ ತುಳು ನಾಟಕ ಪ್ರದರ್ಶಿಸಿದರು.