ಬೆಂಗಳೂರು : ಕೋಟ್ಯಂತರ ರು.ಬೆಲೆ ಬಾಳುವ ವಿವಾದಿತ ಜಾಗವೊಂದಕ್ಕೆ ಬಿಬಿಎಂಪಿ ಅಧಿಕಾರಿಗಳು ಮೂಲ ಮಾಲೀಕನ ಹೆಸರಿನಲ್ಲಿ ಖಾತಾ ಇದ್ದರೂ ಅಕ್ರಮವಾಗಿ ಬೇರೊಬ್ಬರಿಗೆ ಖಾತಾ ಮಾಡಿಕೊಟ್ಟಿರುವ ಆರೋಪವೊಂದು ಕೇಳಿ ಬಂದಿದೆ.

ಮೂಲ ಮಾಲೀಕನ ಹೆಸರಿನಲ್ಲಿ ಖಾತಾ ಇದ್ದರೂ ಕೂಡ, ಅಕ್ರಮವಾಗಿ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿದವರೊಂದಿಗೆ ಶಾಮೀಲಾಗಿ ಅವರಿಗೆ ಖಾತಾ ಮಾಡಿಕೊಟ್ಟಿರುವ ದಾಖಲೆಗಳನ್ನು ಬಿಡುಗಡೆ ಮಾಡಲಾಗಿದ್ದು, ಮೂಲ ಮಾಲೀಕ ತನ್ನ ಆಸ್ತಿ ತೆರಿಗೆ ಕಟ್ಟದಂತೆ ಆನ್‌ಲೈನ್‌ ವಿಂಡೋವನ್ನು ಬ್ಲಾಕ್‌ ಮಾಡಿ ಸತಾಯಿಸುತ್ತಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

ತಿಮ್ಮಯ್ಯ ರಸ್ತೆಯಲ್ಲಿರುವ ಜಾಗ

ವಸಂತ ನಗರದ ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣ ಸಮೀಪದ ತಿಮ್ಮಯ್ಯ ರಸ್ತೆಯಲ್ಲಿರುವ ಸರ್ವೆ ನಂ.18ರಲ್ಲಿರುವ ಸುಮಾರು 96,500 ಚ.ಅಡಿಗಳಷ್ಟಿರುವ ಜಾಗವು ಫರಾನುಲ್ಲಾಖಾನ್‌ ಎಂಬುವರಿಗೆ ಸೇರಿದ್ದಾಗಿದೆ. 1955ರಲ್ಲಿ ಈ ಜಾಗವು ಗೌಸ್‌ಖಾನ್‌ ಎಂಬುವರಿಗೆ ಮಂಜೂರಾಗಿತ್ತು. ಅವರ ನಿಧನದ ನಂತರ ಅವರ ಮಗ ಹಾಗೂ ಸದ್ಯ ಮೊಮ್ಮಗ ಫರಾನುಲ್ಲಾಖಾನ್‌ ಅವರ ಸ್ವಾಧೀನಕ್ಕೆ ಬಂದಿದೆ. ಬಿಬಿಎಂಪಿ ಮಾಜಿ ಸದಸ್ಯ ಗೋವಿಂದರಾಜು ಎಂಬುವರು ಒಪಂದದ ಮೂಲಕ ನೋಡಿಕೊಳ್ಳುತ್ತಿದ್ದರು.


ಸುಪ್ರೀಂ ಕೋರ್ಟ್ ಆದೇಶವನ್ನು ನೀಡಿತ್ತು

ಈ ಸಂಬಂಧ ಫರಾನುಲ್ಲಾಖಾನ್‌ ತಮ್ಮ ಹೆಸರಿಗೆ ಖಾತಾ ಬದಲಾವಣೆ ಮಾಡಿಕೊಳ್ಳಲು ಹೋದಾಗ ಬಿಬಿಎಂಪಿ ಅಧಿಕಾರಿಗಳು ಇದು ಟ್ಯಾಂಕ್‌ಬೆಡ್‌(ಕೆರೆ ಅಂಗಳ) ಪ್ರದೇಶವಾಗಿದ್ದು ಖಾತಾ ಮಾಡಿಕೊಡಲು ಸಾಧ್ಯವಿಲ್ಲ ಎಂದು ಆಕ್ಷೇಪಿಸಿದ್ದರು. ಈ ವಿವಾದವು ಪ್ರಾದೇಶಿಕ ಆಯುಕ್ತರು, ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಮುಂದೆ ವಿಚಾರಣೆಗೆ ಬಂದಿದ್ದು, ಫರಾನುಲ್ಲಾಖಾನ್‌ ಅವರ ಪರವಾಗಿಯೇ ಆದೇಶ ನೀಡಿ, ಖಾತಾ ಬದಲಾಯಿಸಿಕೊಂಡುವಂತೆ ಸುಪ್ರೀಂ ಕೋರ್ಟ್ ಆದೇಶವನ್ನು ಸಹ ನೀಡಿತ್ತು. ಈ ಹಿನ್ನೆಲೆಯಲ್ಲಿ 2020 ಫೆಬ್ರವರಿ 8ರಂದು ಐದು ನಿವೇಶನಗಳಿಗೆ ಖಾತೆಗಳನ್ನು ಮಾಡಿಕೊಟ್ಟಿದ್ದರು.

ಈ ಮಧ್ಯೆ ರಾಜಕೀಯ ಮುಖಂಡರೊಬ್ಬರು ಈ ಜಾಗಕ್ಕೆ ಸಂಬಂಧವೇ ಇಲ್ಲದ ಈರಮ್ಮ ಎಂಬ ಮಹಿಳೆಯ ಹೆಸರಿನಲ್ಲಿ ನಕಲಿ ಮಂಜೂರಾತಿ ಪತ್ರ ಸೃಷ್ಟಿಸಿದ್ದರು. ವಿಶೇಷವೆಂದರೆ ಅವರು ಸೃಷ್ಟಿಸಿದ ನಕಲಿ ಪತ್ರದ ದಿನಾಂಕವು ಭಾನುವಾರ (ರಜೆದಿನ) ಆಗಿತ್ತು. ಈ ನಕಲಿ ದಾಖಲೆಗಳನ್ನು ಇಟ್ಟುಕೊಂಡು ಈರಮ್ಮ ಮತ್ತು ಅವರ ಮಕ್ಕಳು, ಜಾಗವನ್ನು ಯಶೋಲಕ್ಷ್ಮಿ ಕನ್‌ಸ್ಟ್ರಕ್ಷನ್‌ ಕಂಪನಿಯ ರಾಜೇಂದ್ರ ಬಾಬುಲಾಲ್‌ ಮಾಲು ಎಂಬುವರಿಗೆ ಮಾರಾಟ ಮಾಡಿದ್ದರು. ಈ ವಂಚನೆ ಬಯಲಿಗೆ ಬಂದಾಗ ಗೋವಿಂದರಾಜು ಅವರು ಅಂದಿನ ಪೊಲೀಸ್‌ ಕಮಿಷನರ್‌ ಶಂಕರ್‌ ಬಿದರಿ ಅವರಿಗೆ ದೂರು ನೀಡಿದ್ದರು. ತನಿಖೆಯ ನಂತರ ರಾಜಕೀಯ ಮುಖಂಡ ಸೇರಿದಂತೆ ಒಟ್ಟು ಎಂಟು ಜನರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಈರಮ್ಮ ಅವರಿಂದ ಜಾಗವನ್ನು ಖರೀದಿಸಿದ್ದ ರಾಜೇಂದ್ರ ಬಾಬುಲಾಲ್‌ ಮಾಲು ಕೂಡ ತನಗೆ ವಂಚನೆಯಾಗಿದೆ ಎಂದು ಕೊರ್ಟ್‌ನಲ್ಲಿ ಕೇಸು ದಾಖಲಿಸಿದ್ದರು.

ನಕಲಿ ದಾಖಲೆ ಸೃಷ್ಟಿ, ನಕಲಿ ಖಾತಾ ಪ್ರಕರಣದಲ್ಲಿ ಕ್ರಿಮಿನಲ್‌ ಕೇಸು ದಾಖಲಾಗಿ ಆರೋಪಿಗಳು ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದರು. ಈ ಸಿವಿಲ್ ವಿವಾದವು ಹೈಕೋರ್ಟ್‌ನಲ್ಲಿ ಇನ್ನೂ ಬಾಕಿ ಇರುವಾಗಲೇ ಬಿಬಿಎಂಪಿ ಅಧಿಕಾರಿಗಳು ಸುಪ್ರೀಂ ಕೋರ್ಟ್‌ ಆದೇಶ ಹೊಂದಿರುವ ಮೂಲ ಮಾಲೀಕ ಫರಾನುಲ್ಲಾ ಖಾನ್‌ ಅವರಿಗೆ ಖಾತಾ ನಿರಾಕರಿಸಿ, ನಕಲಿ ದಾಖಲೆ ಸೃಷ್ಟಿಸಿ ಜೈಲಿಗೆ ಹೋಗಿ ಬಂದಿದ್ದ ವಂಚಕರ ಪರವಾಗಿ ಖಾತಾ ಮಾಡಿಕೊಟ್ಟಿದ್ದಾರೆ. ಅಲ್ಲದೇ ಫರಾನುಲ್ಲಾಖಾನ್‌ ಅವರು ಮುಂದೆ ತೆರಿಗೆ ಕಟ್ಟದಂತೆ ಅವರ ವಿಂಡೋವನ್ನು ಬ್ಲಾಕ್‌ ಮಾಡಿದ್ದಾರೆ.

ಈ ಕುರಿತು ಅನೇಕ ಬಾರಿ ಮನವಿ ಮಾಡಿದ್ದರೂ ಬಿಬಿಎಂಪಿ ಅಧಿಕಾರಿಗಳು ತೆರಿಗೆ ಕಟ್ಟಲು ಸಹಕರಿಸಿಲ್ಲ ಎಂದು ಜಾಗದ ಮೂಲ ಮಾಲೀಕ ಫರಾನುಲ್ಲಾಖಾನ್‌ ಆರೋಪಿಸಿದ್ದಾರೆ. ಈ ಸಂಬಂಧ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.