ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಅನುದಾನ ಹಾಗೂ ಬಿಬಿಎಂಪಿಯಿಂದ ಕೈಗೊಳ್ಳಲಾದ ವಿವಿಧ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗಳಲ್ಲಿ ಸುಮಾರು ₹300 ಕೋಟಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ ಶಾಸಕ ಎಸ್. ಸುರೇಶ್ ಕುಮಾರ್ ಮತ್ತು ಬಿಬಿಎಂಪಿ ಅಧಿಕಾರಿಗಳು ವಿರುದ್ಧ ವಕೀಲರಾದ ಸೂರ್ಯ ಮುಕುಂದರಾಜ್ ಅವರು ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರು ಸಲ್ಲಿಸಿದ್ದಾರೆ.

ಗುರುವಾರ ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೂರ್ಯ ಮುಕುಂದರಾಜ್, ಶಾಸಕ ಸುರೇಶ್‌ ಕುಮಾರ್‌ ಅವರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು, ನಿಯಮಗಳನ್ನು ಗಾಳಿಗೆ ತೂರಿ, ತಮಗೆ ಬೇಕಾದ ಬೇನಾಮಿ ಗುತ್ತಿಗೆದಾರರಿಗೆ ಲಾಭ ಮಾಡಿಕೊಟ್ಟಿದ್ದಾರೆ. ಈ ಮೂಲಕ ಸರ್ಕಾರಿ ಖಜಾನೆಗೆ ಭಾರಿ ಆರ್ಥಿಕ ನಷ್ಟ ಉಂಟುಮಾಡಿದ್ದಾರೆ. ಜಿಎಸ್‌ಟಿ ಹಾಗೂ ಇಲಾಖೆಯ ಇತರೆ ವೆಚ್ಚಗಳೂ ಸೇರಿದರೆ ಈ ಹಗರಣದ ಮೊತ್ತ ಸುಮಾರು 300 ಕೋಟಿ ರು. ಮೀರುತ್ತದೆ ಎಂದು ಹೇಳಿದರು.

ಸಾರ್ವಜನಿಕ ಹಿತಾಸಕ್ತಿ ಹಾಗೂ ಸಾರ್ವಜನಿಕ ಹಣದ ಸಂರಕ್ಷಣೆಯ ದೃಷ್ಟಿಯಿಂದ ಲೋಕಾಯುಕ್ತರು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಶಾಸಕರು ಹಾಗೂ ಅವರಿಗೆ ಸಹಕರಿಸಿದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸಮಗ್ರ ತನಿಖೆ ನಡೆಸಿ, ಕಾನೂನು ರೀತ್ಯಾ ಕಠಿಣ ಶಿಕ್ಷೆ ಜರುಗಿಸಬೇಕು ಎಂದು ಒತ್ತಾಯಿಸಿದರು.

ಎಲ್1 ಗುತ್ತಿಗೆದಾರರನ್ನು ತಪ್ಪಿಸಿ 14 ಕೋಟಿ ನಷ್ಟ:


2020 ರಲ್ಲಿ 72.25 ಕೋಟಿ ರು. ಮೊತ್ತದ ರಸ್ತೆ ಮತ್ತು ಚರಂಡಿ ಕಾಮಗಾರಿಗಳ ಟೆಂಡರ್‌ನಲ್ಲಿ ಅತ್ಯಂತ ಕಡಿಮೆ ಬಿಡ್ ಮಾಡಿದ್ದ ಅರ್ಹ ಗುತ್ತಿಗೆದಾರರನ್ನು ತಪ್ಪಿಸಲು ಶಾಸಕರು ಅಧಿಕಾರಿಗಳ ಮೇಲೆ ದೂರವಾಣಿ ಮೂಲಕ ಒತ್ತಡ ಹೇರಿದ್ದಾರೆ. ಬಿಬಿಎಂಪಿಯ ಟಿವಿಸಿಸಿ ವಿಭಾಗದ ಮುಖ್ಯ ಅಭಿಯಂತರರ ಕಚೇರಿ ಟಿಪ್ಪಣಿಯಲ್ಲೇ ಶಾಸಕರ ಈ ದಬ್ಬಾಳಿಕೆ ದಾಖಲಾಗಿದೆ. ತದನಂತರ ಎಲ್ 2 ಬಿಡ್‌ದಾರರು ನಿರಾಕರಿಸಿದಾಗ, ತಮ್ಮ ಬೇನಾಮಿಗಳಿಗೆ ಲಾಭ ಮಾಡಲು 53 ಕೋಟಿಯ ಕಾಮಗಾರಿಯನ್ನು 67 ಕೋಟಿಗೆ ಏರಿಸಿ, ಸರ್ಕಾರಕ್ಕೆ ನೇರವಾಗಿ 14 ಕೋಟಿ ರು. ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ರಸ್ತೆ ನಿಧಿಯ ದುರುಪಯೋಗ:

ಭಾಷಾನಗರದ ರಸ್ತೆ ಡಾಂಬರೀಕರಣದ 60 ಲಕ್ಷ ರು. ಮೊತ್ತದ ಟೆಂಡರ್‌ನ ಹಣಕಾಸು ಬಿಡ್ ಅನ್ನು ಕಳೆದ 4 ವರ್ಷಗಳಿಂದ ತೆರೆಯದೆ ತಡೆಹಿಡಿಯಲಾಗಿದೆ. ನಾಗರಿಕರ ಮೂಲಸೌಕರ್ಯಕ್ಕೆ ಮೀಸಲಿದ್ದ ಈ ಹಣವನ್ನು ನಿಯಮಬಾಹಿರವಾಗಿ ವರ್ಗಾಯಿಸಿ ಪಾರ್ಕ್‌ಗಳ ಸೌಂದರ್ಯೀಕರಣಕ್ಕೆ ಬಳಸಲಾಗುತ್ತಿದ್ದು, ಕ್ಷೇತ್ರದ ರಸ್ತೆಗಳು ಗುಂಡಿಮಯವಾಗಲು ಶಾಸಕರ ತಪ್ಪು ನಿರ್ಧಾರಗಳೇ ಕಾರಣ ಎಂದರು.

ಏಕೈಕ ಬಿಡ್‌ದಾರರಿಗೆ ಮಣೆ:

2022-23 ನೇ ಸಾಲಿನ 150 ಕೋಟಿ ರು. ಮೊತ್ತದ ಬೃಹತ್ ಕಾಮಗಾರಿಗಳು ಹಾಗೂ 2025-26 ನೇ ಸಾಲಿನ 10 ಕೋಟಿ ಮತ್ತು 9 ಕೋಟಿ ವೆಚ್ಚದ ಸರಣಿ ಟೆಂಡರ್‌ಗಳಲ್ಲೂ ನಿಯಮಾವಳಿಗಳನ್ನು ಗಾಳಿಗೆ ತೂರಿ ಮುಕ್ತ ಸ್ಪರ್ಧೆಯನ್ನು ನಿರ್ಬಂಧಿಸಿ, ಏಕೈಕ ಬಿಡ್‌ದಾರರಿಗೆ ಅನುಕೂಲ ಮಾಡಿಕೊಡಲಾಗಿದೆ. ಟೆಂಡರ್‌ನಲ್ಲಿ ಭಾಗವಹಿಸುವ ಮುನ್ನ ಸೈಟ್ ವಿಸಿಟ್ ಮಾಡಿ ರಿಜಿಸ್ಟರ್‌ನಲ್ಲಿ ಸಹಿ ಮಾಡಬೇಕೆಂಬ ಕಡ್ಡಾಯ ನಿಯಮ ತರಲಾಗಿದೆ. ಇದು ಯಾರು ಬಿಡ್ ಮಾಡುತ್ತಿದ್ದಾರೆ ಎಂದು ಮೊದಲೇ ತಿಳಿದು ಬೇರೆಯವರನ್ನು ಹೊರದಬ್ಬುವ ತಂತ್ರವಾಗಿದೆ. ಅಷ್ಟೇ ಅಲ್ಲದೆ, ತಮ್ಮ ಬೇನಾಮಿಗಳ ಬಳಿ ಯಂತ್ರೋಪಕರಣಗಳು ಇಲ್ಲದ ಕಾರಣ ಒಂದು ಕೋಟಿಗೂ ಹೆಚ್ಚಿನ ಟೆಂಡರ್‌ಗಳಲ್ಲಿ ಇರಬೇಕಾದ ಕಡ್ಡಾಯ ಯಂತ್ರೋಪಕರಣಗಳ ನಿಯಮವನ್ನೇ ಡಿಲೀಟ್ ಮಾಡಲಾಗಿದೆ. ಡಿಫರೆನ್ಷಿಯಲ್ ಇಎಂಡಿ ವಿವರಗಳನ್ನು ತಾಂತ್ರಿಕ ಬಿಡ್ ತೆರೆದ ತಕ್ಷಣವೇ ಅಧಿಕಾರಿಗಳು ನೋಡುವಂತೆ ಮಾಡಿ, ಹಣಕಾಸು ಬಿಡ್ ತೆರೆಯುವ ಮುನ್ನವೇ ಯಾರು ಎಷ್ಟು ಕಡಿಮೆ ದರ ಹಾಕಿದ್ದಾರೆ ಎಂಬುದನ್ನು ಮೊದಲೇ ಅಂದಾಜು ಮಾಡಿ ವಂಚಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.ಇನ್ನೆರಡು ದಿನದಲ್ಲಿ ಲೋಕಾಯುಕ್ತರಿಗೆ

ಉತ್ತರ ನೀಡುವೆ: ಸುರೇಶ್‌ಕುಮಾರ್

ತಮ್ಮ ವಿರುದ್ಧ ಲೋಕಾಯುಕ್ತದಲ್ಲಿ ದಾಖಲಿಸಿರುವ ದೂರಿನ ಬಗ್ಗೆ ಇನ್ನೆರಡು ದಿನಗಳಲ್ಲಿ ಲೋಕಾಯುಕ್ತರಿಗೆ ನಾನು ಸುದೀರ್ಘ ಉತ್ತರ ನೀಡುತ್ತೇನೆ ಎಂದು ತಿಳಿಸಿರುವ ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್, ಇದೊಂದು ಪೂರ್ಣ ಸುಳ್ಳಿನಿಂದ ಕೂಡಿರುವ ಹಾಗೂ ಶುದ್ಧ ಹಾಸ್ಯಾಸ್ಪದವಾದ ದೂರು ಇದಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.ತಮ್ಮ ವಿರುದ್ಧ ಲೋಕಾಯುಕ್ತದಲ್ಲಿ ದಾಖಲಾಗಿರುವ ದೂರಿನ ಸಂಬಂಧ ಪ್ರಕಟಣೆ ನೀಡಿರುವ ಅವರು, ಆಕಸ್ಮಿಕವಾಗಿ ವಕೀಲ ವೃತ್ತಿಯನ್ನೂ ಮಾಡುತ್ತಿರುವ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಸೂರ್ಯ ಮುಕುಂದರಾಜು ಅವರು ನನ್ನ ವಿರುದ್ಧ ಲೋಕಾಯುಕ್ತಕ್ಕೆ ಅಧಿಕೃತ ದೂರು ಸಲ್ಲಿಸಿರುವುದು ಮಾಧ್ಯಮಗಳ ಮೂಲಕ ನನ್ನ ಗಮನಕ್ಕೆ ಬಂದಿದೆ ಎಂದಿದ್ದಾರೆ.ಸೂರ್ಯ ಮುಕುಂದರಾಜ್ ಅವರ ಹಿನ್ನೆಲೆ ಅವರ ಉದ್ದೇಶ, ಅವರು ಯಾರ ಪರವಾಗಿ ಈ ಎಲ್ಲಾ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಿದೆ. ಇದೊಂದು ಪೂರ್ಣ ಸುಳ್ಳಿನಿಂದ ಕೂಡಿರುವ, ಶುದ್ಧ ಹಾಸ್ಯಾಸ್ಪದವಾದ ದೂರು ಇದಾಗಿದೆ. ಲೋಕಾಯುಕ್ತವು ಈ ಕುರಿತು ಸಂಪೂರ್ಣವಾದ ನಿಷ್ಪಕ್ಷಪಾತವಾದ ತನಿಖೆ ನಡೆಸಬೇಕು ಎಂಬುದಾಗಿ ನಾನು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.