ಕನ್ನಡಪ್ರಭ ವಾರ್ತೆ ಬೆಳಗಾವಿ

ಗ್ಯಾರಂಟಿ ಯೋಜನೆಗಳಲ್ಲಿ ಕಂಡು ಬರುತ್ತಿರುವ ಸಣ್ಣಪುಟ್ಟ ನೂನ್ಯತೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಪಾಟೀಲ (ಬ್ಯಾಡಗಿ) ಹೇಳಿದರು.

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಜರುಗಿದ ಜಿಲ್ಲಾ ಗ್ಯಾರಂಟಿ ಯೊಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚುನಾವಣಾ ಪೂರ್ವದಲ್ಲಿ ರಾಜ್ಯ ಸರ್ಕಾರ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿತ್ತಿದೆ. ಗ್ಯಾರಂಟಿ ಯೋಜನೆಗಳು ಪ್ರಾರಂಭವಾಗಿ 3 ವರ್ಷಗಳು ಕಳೆದಿವೆ ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ಭರವಸೆಗಳನ್ನು ಈಡೇರಿಸಿದೆ. ಶಕ್ತಿ ಯೋಜನೆಯಡಿ ಇಲ್ಲಿಯವರೆಗ ರಾಜ್ಯದ ₹750 ಕೋಟಿಗೂ ಹೆಚ್ಚಿನ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದು ದಾಖಲೆಯಾಗಿದೆ ಎಂದರು.ಗೃಹಲಕ್ಷ್ಮಿ ಯೋಜನೆ ಜಾರಿಯಿಂದಾಗಿ ರಾಜ್ಯದ ಸಾವಿರಾರು ಕುಟುಂಬಗಳು ಆರ್ಥಿಕವಾಗಿ ಸ್ವಾವಲಂಬಿಗಳಾಗಿವೆ. ಆದರೆ, ಈ ಯೋಜನೆಯಡಿ ನೋಂದಾಯಿಸಿಕೊಂಡ ಫಲಾನುಭವಿಗಳು ಮೃತಪಟ್ಟ ನಂತರವು ಅವರ ಖಾತೆಗೆ ಯೋಜನೆಯ ನಗದು ಮೊತ್ತ ಜಮೆ ಆಗುತ್ತಿರುವುದು ಕಂಡು ಬಂದಿದ್ದು, ರಾಜ್ಯದಲ್ಲಿ ಮೃತ ಫಲಾನುಭವಿಗಳ ಖಾತೆಗೆ ಜಮೆ ಆದಂತಹ ಅಂದಾಜು ₹16 ಕೋಟಿ ಗಳನ್ನು ವಾಪಸ್‌ ಪಡೆಯಲಾಗಿದೆ. ಜಿಲ್ಲೆಯಲ್ಲಿಯೂ ಗೃಹಲಕ್ಷ್ಮಿ ಯೋಜನೆಯ ಮೃತ ಫಲಾನುಭವಿಗಳನ್ನು ಗುರುತಿಸಿ ಅಂತಹವರ ಹೆಸರುಗಳನ್ನು ಯೋಜನೆಯಿಂದ ಕೈ ಬಿಡಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.ಗೃಹ ಜ್ಯೋತಿ ಯೋಜನೆಯ ಸದುಪಯೋಗ ಬೇರೆ ರಾಜ್ಯದ ಫಲಾನುಭವಿಗಳು ಬಳಸುತ್ತಿದ್ದು. ಅಂತಹ ಜನರನ್ನು ಗುರುತಿಸುವ ಕಾರ್ಯವನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ವಯ ಮೀಟರ್ ರೀಡರಗಳು ಮನೆ ಮನೆಗೆ ಭೇಟಿ ನೀಡಿ ಫಲಾನುಭವಿಗಳಿಂದ ಅಗತ್ಯ ದಾಖಲೆಗಳನ್ನು ಪಡೆಯಬೇಕು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳನ್ನು ಪಡೆಯುವಂತಹ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಫಲಾನುಭವಿಗಳ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡುವ ಕಾರ್ಯದಲ್ಲಿ ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷರು, ಸದಸ್ಯರು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು ಎಂದರು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಮಾತನಾಡಿ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳು ದುರುಪಯೋಗವಾಗಬಾರದು. ಗೃಹಲಕ್ಷ್ಮಿ ಯೋಜನೆಯಡಿ ಮೃತ ಫಲಾನುಭವಿಗಳ ವಿವರಗಳನ್ನು ನೀಡಿ ಅಂತಹ ಫಲಾನುಭವಿಗಳ ಹೆಸರನ್ನು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿಯಿಂದ ಹೆಸರನ್ನು ಕೈಬಿಡಬೇಕು. ಈ ಕಾರ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯವರು ತಮ್ಮ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಗೃಹಲಕ್ಷ್ಮಿ ಯೋಜನೆಯಡಿ ಮೃತ ಫಲಾನುಭವಿಗಳ ವಿವರಗಳನ್ನು ತ್ವರಿತವಾಗಿ ಪಡೆದು ಫಲಾನುಭವಿಗಳ ಪಟ್ಟಿಯಿಂದ ಹೆಸರನ್ನು ಕೈಬಿಡಲು ಸೂಚಿಸಿದರು. ಮುಂದಿನ ಮೂರು ವಾರಗಳಲ್ಲಿ ಈ ಕಾರ್ಯ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಚುನಿಟ್ಟಿನ ಸೂಚನೆ ನೀಡಿದರು.ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಸಮರ್ಪಕ ಮಾಹಿತಿ ಒದಗಿಸದೇ ಇರುವುದು ಹಾಗೂ ಜಿಲ್ಲಾ, ತಾಲೂಕು ಸಭೆಗಳಿಗೆ ಅಧಿಕಾರಿಗಳು ನಿಯಮಿತವಾಗಿ ಜರುಗುವ ಸಭೆಗಳಿಗೆ ಹಾಜರಾಗದೇ ಇರುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿಗಳು ಇನ್ನೂ ಪರಿಣಾಮಕಾರಿಯಾಗಿ ಜಾರಿಯಾಗಲು ಅನರ್ಹರನ್ನು ಗುರುತಿಸಲು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕುಗಳ ಅಧ್ಯಕ್ಷರು, ಸದಸ್ಯರು ಸಹಕಾರ ನೀಡಲು ಮನವಿ ಮಾಡಿದರು.ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ವಿವಿಧ ತಾಲೂಕು ಅಧ್ಯಕ್ಷರು, ಸದಸ್ಯರುಗಳು, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಬಸವರಾಜ ಹೆಗನಾಯಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.ಗ್ಯಾರಂಟಿ ಯೋಜನೆಯಡಿ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಫಲಾನುಭವಿಗಳ ಪಟ್ಟಿಯಿಂದ ಕೈಬಿಟ್ಟಲ್ಲಿ ಸರ್ಕಾರದಿಂದ ಅರ್ಹ ಫಲಾನುಭವಿಗಳಿಗೆ ಇನ್ನೂ ಹೆಚ್ಚಿನ ಸೌಲಭ್ಯ ನೀಡಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ, ಜಿಲ್ಲಾ, ತಾಲೂಕು ಅಧ್ಯಕ್ಷರುಗಳು, ಸದಸ್ಯರುಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು.


-ಎಸ್.ಆರ್.ಪಾಟೀಲ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರು.