ಬೆಂಗಳೂರು : ಪ್ರಜಾಸೇವೆ ಇಲಾಖೆ ಅಭಿಯಾನದ ಭಾಗವಾಗಿ ಜಿಲ್ಲಾ ಸಚಿವರು ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶನಿವಾರದ ಎರಡು ದಿನಗಳ ಕಾಲ ತಲಾ ಒಂದೊಂದು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪ್ರತಿ ತಿಂಗಳು 2 ದಿನ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಪ್ರತಿ ಜಿಲ್ಲಾ ಉಸ್ತುವಾರಿ ಸಚಿವರು ಕಡ್ಡಾಯವಾಗಿ ಪ್ರತಿ ಮೊದಲ ಹಾಗೂ ಮೂರನೇ ಶನಿವಾರ ಕಾರ್ಯಕ್ರಮ ನಡೆಸಬೇಕು. ಶನಿವಾರ ಸರ್ಕಾರಿ ರಜೆ ಇದ್ದರೆ ಅದರ ಹಿಂದಿನ ದಿನವೇ ನಡೆಸಬೇಕು ಎಂದು ಹೇಳಿದರು.

ಸರ್ಕಾರವೇ ಜನರ ಮನೆಗೆ ಹೋಗಬೇಕು:

ಈ ವೇಳೆ ಎಲ್ಲಾ ಇಲಾಖೆಗಳ ಶಾಖೆಗಳು ಅಲ್ಲಿ ತೆರೆಯಲಾಗುವುದು. ಆ ಜಿಲ್ಲೆಗೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿರಬೇಕು. ಆ ಭಾಗದ ಜನರಿಗೆ ಈ ಸಭೆ ಕುರಿತು ಮುಂಚಿತವಾಗಿ ಮಾಹಿತಿ ನೀಡಬೇಕು. ಸರ್ಕಾರವೇ ಜನರ ಮನೆ ಬಾಗಿಲಿಗೆ ಹೋಗುವಂತಾಗಬೇಕು. ನಾನು ಕೂಡ ಕೆಲವು ತಾಲೂಕುಗಳಿಗೆ ಮಧ್ಯೆ ಮಧ್ಯೆ ಭೇಟಿ ಮಾಡುತ್ತೇನೆ ಎಂದು ಶಿವಕುಮಾರ್‌ ಹೇಳಿದರು.


ಜನರ ಸಮಸ್ಯೆ ಆಲಿಸಲು ಪ್ರಜಾಸೇವೆ ಎಂಬ ಪ್ರತ್ಯೇಕ ಸಚಿವಾಲಯ

ಜನರ ಸಮಸ್ಯೆ ಆಲಿಸಲು ಪ್ರಜಾಸೇವೆ ಎಂಬ ಪ್ರತ್ಯೇಕ ಸಚಿವಾಲಯ ರೂಪಿಸುತ್ತಿದ್ದು, ಸಚಿವರಿಗೆ ಇದರ ಜವಾಬ್ದಾರಿ ವಹಿಸಲಾಗುವುದು. ಯಾರ ದೂರೇ ಇರಲಿ, ಸಮಸ್ಯೆ ಇರಲಿ, ಪ್ರತಿಭಟನೆ ಮಾಡುವವರು ತಮ್ಮ ನೋವು ಹೇಳಿಕೊಳ್ಳಲು ಹಾಗೂ ಅವರ ಸಮಸ್ಯೆ ಬಗೆಹರಿಸಲು ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಹಾಗೂ ಜಿಲ್ಲಾ ಸಚಿವರಿಗೆ ಆ ವಿಚಾರ ತಲುಪಿಸಲು ಈ ಇಲಾಖೆ ಕಾರ್ಯನಿರ್ವಹಿಸಲಿದೆ ಎಂದು ಮಾಹಿತಿ ನೀಡಿದರು.

ಇದಕ್ಕೆ ಐಎಎಸ್ ಅಧಿಕಾರಿಯನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದ್ದು, ಅಗತ್ಯ ಅಧಿಕಾರಿಗಳನ್ನು ನೀಡಲು ಇಂದು ತೀರ್ಮಾನಿಸಲಾಗಿದೆ. ಎಲ್ಲೇ ಪ್ರತಿಭಟನೆ ನಡೆದರೂ ಅವರ ಅರ್ಜಿ ಸ್ವೀಕರಿಸಿ ಕಾನೂನುಬದ್ಧವಾಗಿ ಸಹಾಯ ಮಾಡಲು ಅವಕಾಶವಿದ್ದರೆ ನಾವು ಕಾರ್ಯನಿರ್ವಹಿಸುತ್ತೇವೆ ಎಂದು ತಿಳಿಸಿದರು.