ಕನ್ನಡ ನಾಮಫಲಕ ಶೇ.60 ರಷ್ಟು ಕಡ್ಡಾಯ: ವೆಂಕಟ್ ರಾಜಾ

KannadaprabhaNewsNetwork |  
Published : Oct 15, 2025, 02:08 AM IST

ಸಾರಾಂಶ

ನಾಮಫಲಕಗಳಲ್ಲಿ ಶೇ. 60 ಕನ್ನಡ ಭಾಷೆ ಬಳಕೆ ಕಡ್ಡಾಯವಾಗಿದ್ದು ಈ ಸಂಬಂಧ ತಮ್ಮ ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಸಮರ್ಪಕ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲೆಯಲ್ಲಿರುವ ಎಲ್ಲಾ ಅಂಗಡಿ, ಹೋಟೆಲ್, ವಾಣಿಜ್ಯ ಸಂಕೀರ್ಣ, ಕೈಗಾರಿಕೋದ್ಯಮ, ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳು ಹಾಗೂ ಪ್ರವಾಸೋದ್ಯಮ ಕೇಂದ್ರಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯವಾಗಿದ್ದು, ಈ ಸಂಬಂಧ ತಮ್ಮ ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಸಮರ್ಪಕ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಸಂಬಂಧ ಸರ್ಕಾರದ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ(ತಿದ್ದುಪಡಿ, ವಿದೇಯಕ, 2024 ಈ ಸಂಬಂಧ ಫೆಬ್ರವರಿ, 25 ರಂದು ರಾಜ್ಯಪಾಲರಿಂದ ಒಪ್ಪಿಗೆ ದೊರೆತಿದ್ದು, ಜಿಲ್ಲೆಯ ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು, ವಹಿವಾಟು ಕೇಂದ್ರಗಳು, ಉದ್ಯಮಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಇರಲೇಬೇಕು. ಆ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸ್ಪಷ್ಟ ನಿರ್ದೇಶನ ನೀಡಿದರು.

ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ, ಮಂಜೂರಾತಿ ಪಡೆದ ಎಲ್ಲಾ ಸಂಸ್ಥೆಗಳಿಗೂ ಈ ಕಾಯ್ದೆ ಅನ್ವಯವಾಗಲಿದೆ. ಖಾಸಗಿ ಶಾಲಾ ಕಾಲೇಜುಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನರಂಜನಾ ಕೇಂದ್ರಗಳು, ಹೋಟೆಲ್ ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ನಾಮಫಲಕಗಳ ಮೇಲ್ಬಾಗದಲ್ಲಿ ಕನ್ನಡಭಾಷೆಯನ್ನು ಶೇ.60 ರಷ್ಟು ಪ್ರದರ್ಶಿಸಬೇಕು/ ಬರೆಸಿರಬೇಕು ಎಂದು ಜಿಲ್ಲಾಧಿಕಾರಿ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಜಿಲ್ಲೆಯ ಗಡಿ ಪ್ರದೇಶಗಳು, ಖಾಸಗಿ ಶಾಲೆಗಳಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು. ಈ ಕಾರ್ಯ ಆಗದಿದ್ದಲ್ಲಿ ಪ್ರಥಮ ಹಂತದಲ್ಲಿ 5 ಸಾವಿರ, ಎರಡನೇ ಹಂತದಲ್ಲಿ 10 ಸಾವಿರ ದಂಡ ಪಾವತಿಸಬೇಕಾಗುತ್ತದೆ. ನಂತರ ಪರವಾನಿಗೆಯನ್ನು ರದ್ದು ಪಡಿಸಲಾಗುತ್ತದೆ. ಆ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು.

ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಸ್ಥಳೀಯ ಸಂಸ್ಥೆ ವ್ಯಾಪ್ತಿಯ ನಾಮಫಲಕಗಳಲ್ಲಿ ಕನ್ನಡ ಭಾಷೆ ಬಳಕೆ ಅನುಷ್ಠಾನ ಬಗ್ಗೆ ಹಲವು ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್ ಅವರು ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಅವರು ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಅನುಷ್ಠಾನ ಬಗ್ಗೆ ವಿವರಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್, ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಬಿ.ಆರ್.ಶೆಟ್ಟಿ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಲಿಂಗರಾಜ ದೊಡ್ಡಮನಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಜ್ಯೋತಿ, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಗಂಗಾಧರ ನಾಯಕ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಸತೀಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯವಸ್ಥಾಪಕರಾದ ಎಸ್.ಎಸ್.ದೀಪಕ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಮುತ್ತಪ್ಪ, ಪಿಎಂಜಿಎಸ್‍ವೈ ಎಂಜಿನಿಯರ್ ಪ್ರಭು, ತಾಲೂಕು ಕಾರ್ಮಿಕ ಅಧಿಕಾರಿ ಎಂ.ಎಂ.ಯತ್ನಟ್ಟಿ, ಲೋಕೋಪಯೋಗಿ ಇಲಾಖೆ ಎಂಜಿನಿಯರ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ ನಾರಾಯಣ, ಪೌರಾಯುಕ್ತರಾದ ಎಚ್.ಆರ್.ರಮೇಶ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!