ಶೇ.60 ರಷ್ಟು ಪ್ರಮಾಣದಲ್ಲಿ ಕನ್ನಡ ನಾಮಫಲಕಗಳಿರಬೇಕು; ಅಧಿಕಾರಿಗಳಿಗೆ ಡೀಸಿ ತಾಕೀತು

KannadaprabhaNewsNetwork |  
Published : Mar 08, 2024, 01:50 AM ISTUpdated : Mar 08, 2024, 01:39 PM IST
ಪಿ.ಎನ್. ರವೀಂದ್ರ| Kannada Prabha

ಸಾರಾಂಶ

ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಕಚೇರಿಗಳು, ಖಾಸಗಿ ವಹಿವಾಟಿನ ಮಳಿಗೆಗಳು, ಸಂಸ್ಥೆಗಳು, ಅಂಗಡಿ - ಮುಂಗಟ್ಟುಗಳ ಫಲಕಗಳು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿರಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಕಚೇರಿಗಳು, ಖಾಸಗಿ ವಹಿವಾಟಿನ ಮಳಿಗೆಗಳು, ಸಂಸ್ಥೆಗಳು, ಅಂಗಡಿ - ಮುಂಗಟ್ಟುಗಳ ಫಲಕಗಳು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿರಬೇಕು. 

ಜೊತೆಗೆ ನಾಮಫಲಕದಲ್ಲಿನ ಕನ್ನಡದ ಅಕ್ಷರಗಳು ಶೇ. 60 ರಷ್ಟು ಅಳತೆಯ ಪ್ರಮಾಣದಲ್ಲಿರಬೇಕೆಂದು ಈ ನಿಟ್ಟಿನಲ್ಲಿ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಾಕೀತು ಮಾಡಿದರು.

ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕನ್ನಡ ಅನುಷ್ಠಾನದ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಕಚೇರಿಗಳು, ಖಾಸಗಿ ವಹಿವಾಟು ಮಳಿಗೆಗಳು, ಸಂಸ್ಥೆಗಳು, ಅಂಗಡಿ - ಮುಂಗಟ್ಟುಗಳ ಫಲಕಗಳಲ್ಲಿ ಯಾವುದೇ ಕನ್ನಡೇತರ ಭಾಷೆಗಳನ್ನು ಬಳಸಬಹುದು.

ಆದರೆ ಕನ್ನಡದ ಅಕ್ಷರಗಳನ್ನು ಮತ್ತು ಪದಗಳನ್ನು ಶೇ. 60 ರಷ್ಟು ಬಳಸುವುದು ಕಡ್ಡಾಯವಾಗಿರುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಪತ್ರ ವ್ಯವಹಾರ ಸೇರಿ ಎಲ್ಲಾ ದಿನ ನಿತ್ಯದ ಕಚೇರಿ ಕೆಲಸಗಳಲ್ಲಿ ಕನ್ನಡವನ್ನು ಬಳಸಬೇಕು. 

ಜನರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಬೇಕು. ಆದರೆ ಕೆಲವೆಡೆ ನಿಯಮಗಳು ಉಲ್ಲಂಘನೆಯಾಗುತ್ತಿರುವುದು ಕಂಡುಬರುತ್ತಿದೆ. ಆ ಹಿನ್ನೆಲೆಯಲ್ಲಿ ಮುಂದಿನ ಒಂದು ವಾರದ ಒಳಗೆ ನಾಮಫಲಕಗಳನ್ನು ಸರ್ಕಾರದ ನಿಯಮಾವಳಿಯಂತೆ ಸರಿಪಡಿಸಬೇಕು ಎಂದರು.

ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಸರ್ಕಾರಿ ಕಚೇರಿಗಳು, ಬ್ಯಾಂಕ್ ಗಳು ಸಹ ಈ ನಿಯಮವನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ. ಜೊತೆಗೆ ಖಾಸಗಿ ಸಂಸ್ಥೆಗಳು, ವ್ಯಾಪಾರಿ ಮಳಿಗೆಗಳ ಮಾಲೀಕರಿಗೂ ತಿಳಿಸಿ ನಾಮಫಲಕಗಳು ಕಡ್ಡಾಯವಾಗಿ ಕನ್ನಡದಲ್ಲಿರುವಂತೆ ನೋಡಿಕೊಳ್ಳಬೇಕು. 

ಕನ್ನಡ ಬಳಕೆಯ ನಿಯಮಗಳನ್ನು ಉಲ್ಲಂಘಿಸಿದವರಿಗೆ ಮುಲಾಜಿಲ್ಲದೆ ದಂಡ ವಿಧಿಸುವಂತೆ ಹಾಗೂ ಪರವಾನಗಿ ರದ್ದುಗೊಳಿಸಲು ಸಕ್ಷಮದ ಅಧಿಕಾರಿಗಳು ಕೂಡಲೇ ಕ್ರಮ ವಹಿಸಬೇಕು. 

ಈ ಕುರಿತು ಪ್ರತಿ 3 ತಿಂಗಳಿಗೊಮ್ಮೆ ಪರಿಶೀಲಿಸಲು ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮಿತಿಗಳನ್ನು ರಚಿಸಿ ನಿಗಧಿತವಾಗಿ ಪ್ರಗತಿ ಪರಿಶೀಲನೆ ನಡೆಸಬೇಕು. 

ಈ ಸಮಿತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿದ್ದು ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಮನ್ವಯತೆ ಸಾಧಿಸಿ ಸೂಕ್ತ ಕ್ರಮ ಜರುಗಿಸಲು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್.ಜಿ.ಟಿ. ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ. ಎನ್.ತಿಪ್ಪೇಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಎನ್.ಮನಿಷಾ ಸೇರಿ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ