60 ಸಾವಿರ ಎಕರೆ ಮುಸ್ಲಿಂ ರೈತರ ಜಮೀನು ವಕ್ಸ್‌ ಹೆಸರಲ್ಲಿ!

KannadaprabhaNewsNetwork |  
Published : Nov 05, 2024, 12:39 AM IST
4984 | Kannada Prabha

ಸಾರಾಂಶ

ಕುಂದಗೋಳ, ನವಲಗುಂದ, ಅಣ್ಣಿಗೇರಿ ಸೇರಿದಂತೆ ಸುತ್ತಮುತ್ತಲಿನ 50-60 ಸಾವಿರಕ್ಕೂ ಹೆಚ್ಚು ಎಕರೆ ಮುಸ್ಲಿಂ ಸಮುದಾಯದ ರೈತರ ಹೆಸರಿನ ಜಮೀನಿನ ಉತಾರದಲ್ಲಿ ವಕ್ಫ್‌ ಹೆಸರು ಸೇರ್ಪಡೆಗೊಂಡಿದೆ.

ಧಾರವಾಡ:

ಈಚೆಗೆ ನವಲಗುಂದ ತಾಲೂಕಿನ 20ಕ್ಕೂ ಹೆಚ್ಚು ಮುಸ್ಲಿಂ ಸಮುದಾಯದ ರೈತರ ಜಮೀನು ವಕ್ಫ್‌ ಮಂಡಳಿ ಹೆಸರಿನಲ್ಲಿ ಇಂಡೀಕರಣವಾಗಿದೆ ಎನ್ನುವ ಸುದ್ದಿ ಹೊರ ಬಂದಿತ್ತು. ಇದಾದ ಎರಡೇ ದಿನದಲ್ಲಿ ಜಿಲ್ಲೆಯ ಕುಂದಗೋಳ, ನವಲಗುಂದ, ಅಣ್ಣಿಗೇರಿ ಸೇರಿದಂತೆ ಸುತ್ತಮುತ್ತಲಿನ 50-60 ಸಾವಿರಕ್ಕೂ ಹೆಚ್ಚು ಎಕರೆ ಮುಸ್ಲಿಂ ಸಮುದಾಯದ ರೈತರ ಹೆಸರಿನ ಜಮೀನಿನ ಉತಾರದಲ್ಲಿ ವಕ್ಫ್‌ ಹೆಸರು ಸೇರ್ಪಡೆಗೊಂಡಿದೆ.

ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ದಾಖಲೆ ಸಮೇತ ಮಾಹಿತಿ ನೀಡಿದ ಧಾರವಾಡ ಜಿಲ್ಲಾ ಮುಲ್ಲಾ ಸಂಘದ ಜಿಲ್ಲಾಧ್ಯಕ್ಷ ಮಹ್ಮದ ರಫೀಕ್‌ ಮೊಹಮ್ಮದ ಗೌಸ್‌ ಗೋಷ್‌, ಅಲ್ಪಸಂಖ್ಯಾತರ ಸಮುದಾಯದಡಿ ಬರುವ ಮುಲ್ಲಾ, ಮುಜಾವರ, ಖಾಜಿ ಹಾಗೂ ಮಕಾಂದಾರ ಸಮಾಜದ ರೈತರ ಜಮೀನಿನ ಉತಾರದಲ್ಲಿ ಅನಧಿಕೃತವಾಗಿ ವಕ್ಫ್ ಬೋರ್ಡ್‌ ಹೆಸರು ನಮೂದಿಸಲಾಗಿದೆ. 3-4 ತಲೆಮಾರುಗಳಿಂದ ನಮ್ಮ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಬರುತ್ತಿದ್ದೇವೆ. 2017ರ ವರೆಗೂ ನಮ್ಮ ಜಮೀನಿನ ಉತಾರದಲ್ಲಿ ನಮ್ಮ ಹಿರಿಯರ ಹಾಗೂ ನಮ್ಮ ಹೆಸರುಗಳಿದ್ದವು. ಆದರೆ 2108ರಲ್ಲಿ ಯಾವುದೇ ನೋಟಿಸ್ ನೀಡದೇ, ನಮ್ಮ ಆಸ್ತಿಯ ಉತಾರದ ಕಾಲಂ ನಂಬರ್ 11ರಲ್ಲಿ ಏಕಾಏಕಿ ವಕ್ಫ್ ಬೋರ್ಡ್ ಹೆಸರು ನಮೂದಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಾದ್ಯಂತ ಇಂತಹ ಘಟನೆಗಳು ನಡೆಯುತ್ತಿದ್ದರೂ ಸರ್ಕಾರ ಕ್ರಮಕ್ಕೆ ಮುಂದಾಗದಿರುವುದು ಸೋಜಿಗದ ಸಂಗತಿ. ಅನ್ವರ ಮಾಣಿಪ್ಪಾಡಿ ವರದಿಯಲ್ಲಿ ಸಹ ಮುಲ್ಲಾ, ಮುಜಾವರ, ಖಾಜಿ, ಮಕಾಂದಾರ ಅವರ ಆಸ್ತಿಯನ್ನು ವಕ್ಫ್ ಬೋರ್ಡ್ ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಉಲ್ಲೇಖ ಇಲ್ಲ. ಈಗ ವಕ್ಫ್‌ ಹೆಸರು ನಮೂದಾಗಿದ್ದರಿಂದ ಸಮಾಜ ಬಾಂಧವರು ಆಸ್ತಿ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ ಎಂದರು.

ಕುಂದಗೋಳ ತಾಲೂಕಿನ ದ್ಯಾವನೂರು ಗ್ರಾಮದ ಸರ್ವೇ ನಂ.82/1ರ ತಮ್ಮ ಹೆಸರಿನ ಒಂದು ಎಕರೆ ಜಮೀನಿನ ಉತಾರದಲ್ಲಿ ವಕ್ಫ್‌ ಬೋರ್ಡ್ ಹೆಸರು ನಮೂದಾಗಿದೆ. ಈ ರೀತಿ ಅನೇಕ ರೈತರ ಜಮೀನುಗಳನ್ನು ಕಬಳಿಸುವ ನಿಟ್ಟಿನಲ್ಲಿ ದೊಡ್ಡ ಷಡ್ಯಂತ್ರ ನಡೆಸಲಾಗುತ್ತಿದೆ. ಈ ಕುರಿತಾಗಿ ರೈತರು ತಮಗೆ ದಾಖಲೆಗಳನ್ನು ನೀಡಿದ್ದಾರೆ. ಇದರ ಬಗ್ಗೆ ತಹಸೀಲ್ದಾರ್‌, ಎಸಿ ಮತ್ತು ಡಿಸಿ ಸೇರಿದಂತೆ ಸಚಿವ, ಶಾಸಕರು ಸಹ ನಮಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿಲ್ಲ. ಕೇವಲ ಮತ ಬ್ಯಾಂಕ್‌ಗಾಗಿ ಮಾತ್ರ ನಮ್ಮ ಸಮಾಜದವರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಖಾಸಗಿ ಮಾಲೀಕತ್ವದ ಜಮೀನಿನ ಉತಾರದಲ್ಲಿ ವಕ್ಫ್ ಹೆಸರು ನಮೂದಾದ ಹಿನ್ನೆಲೆಯಲ್ಲಿ ನಮಗೆ ಸರ್ಕಾರದ ಸೌಲಭ್ಯಗಳು ಸಿಗದಂತಾಗಿವೆ. ಸರ್ಕಾರ ಕೂಡಲೇ ವಕ್ಫ್‌ ಹೆಸರು ತೆಗೆಯಲು ಆದೇಶ ಹೊರಡಿಸಬೇಕು. ಇಲ್ಲದೇ ಹೋದಲ್ಲಿ ಮುಲ್ಲಾ, ಮುಜಾವರ ಹಾಗೂ ಖಾಜಿ ಸಮಾಜದ ಬಾಂಧವರೆಲ್ಲರು ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗುವುದು ನಿಶ್ಚಿತ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹ್ಮಮದ್ ಸಾಬ್ ಎ. ಮುಲ್ಲಾ, ಮಕ್ತುಂಮ್ ಹುಸೇನ್ ಮುಲ್ಲಾ ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ